ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ ಬಹುತೇಕ ಖಚಿತ . ಕಾರ್ಯದರ್ಶಿಗೆ ಸ್ಪರ್ಧಿಸಿದ್ದ ವಿನಯ್‌ರ ನಾಮಪತ್ರವೂ ಅಸಿಂಧು
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷರಾಗಿ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವೆನಿಸಿದೆ. ಬ್ರಿಜೇಶ್ ಪಟೇಲ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪತ್ರಿಕೋದ್ಯಮಿ ಕೆ.ಎನ್.ಶಾಂತ್‌ಕುಮಾರ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕೃತಗೊಳಿಸಿದ್ದಾರೆ.
ಶಾಂತ್‌ಕುಮಾರ್ ಪ್ರತಿನಿಧಿಸುವ ಕ್ರಿಕೆಟ್ ಕ್ಲಬ್, ಲೀಗ್‌ನಲ್ಲಿ ಆಡಲು ನೋಂದಣಿ ಮಾಡಿಕೊಳ್ಳುವಾಗ ₹200 ಸಬ್‌ಸ್ಕ್ರಿಷ್ಷನ್ ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಇನ್ನು, ವೆಂಕಿ ಬಣದಿಂದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ, ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಅವರ ನಾಮಪತ್ರ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ.
ವೆಂಕಿ ಬಣದಲ್ಲಿರುವ ಮಾಜಿ ಆಟಗಾರ್ತಿ ಕಲ್ಪನಾ ವೆಂಕಟಾಚಾರ್ ಕೂಡ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ನಾಮಪತ್ರ ಹಿಂಪಡೆದಿದ್ದಾರೆ. ನಾಮಪತ್ರ ಹಿಂಪಡೆಯಲು ನ.27 ಕೊನೆ ದಿನವಾಗಿದ್ದು, ಪ್ರಸಾದ್ ಅವಿರೋಧ ಆಯ್ಕೆ ಬಗ್ಗೆ ಬುಧವಾರ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ. ಕಣದಲ್ಲಿರುವ ಅಭ್ಯರ್ಥಿಗಳು
₹200 ಶುಲ್ಕ ಕಟ್ಟಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ನಾಮಪತ್ರ ತಿರಸ್ಕೃತಗೊಳಿಸಿರುವ ಚುನಾವಣಾ ಅಧಿಕಾರಿ ವಿರುದ್ಧ ಕೆಎಸ್‌ಸಿಎ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಕೆ.ಎನ್.ಶಾಂತ್‌ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿದ್ದು, ಅರ್ಜಿಯು ಬುಧವಾರ ವಿಚಾರಣೆಗೆ ಬರಲಿದೆ.
ಕೆಎಸ್‌ಸಿಎಯಿಂದಲೇ ತಪ್ಪಾಗಿದೆ:
ಶಾಂತ್‌ಕುಮಾರ್ ಬಣ ವಾದ
ಲೀಗ್‌ಗೆ ನೋಂದಣಿ ಮಾಡಿಸಿಕೊಳ್ಳುವಾಗ ಕೆಎಸ್‌ಸಿಎ ಶುಲ್ಕ ಪಾವತಿಸುವಂತೆ ಕೇಳಿಲ್ಲ. ಅಲ್ಲದೇ, ಶುಲ್ಕ ಪಾವತಿ ಬಾಕಿ ಇರುವ ಬಗ್ಗೆ ಕೆಎಸ್‌ಸಿಎ ನೋಟಿಸ್ ಸಹ ನೀಡಿಲ್ಲ. ವಾರ್ಷಿಕ ಸಭೆಗೂ ಮುನ್ನ ಬಾಕಿ ಪಾವತಿಸಬೇಕು ಎನ್ನುವುದು ನಿಯಮ. ನ.30ಕ್ಕೆ ವಾರ್ಷಿಕ ಸಭೆ ಇದ್ದು, ಅದಕ್ಕೆ ಮುನ್ನ ಬಾಕಿ ಪಾವತಿಸಲು ಅವಕಾಶವಿದೆ. ಹೀಗಾಗಿ, ನಾಮಪತ್ರ ತಿರಸ್ಕೃತಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಶಾಂತ್‌ಕುಮಾರ್ ಬಣದ ಸದಸ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.