ಲಖನೌ: ಹಾಲಿ ಚಾಂಪಿಯನ್ ಚೆನ್ನೈಯನ್ನು ತನ್ನ ಮೊನಚು ಬೌಲಿಂಗ್ ದಾಳಿ, ಅತ್ಯಾಕರ್ಷಕ ಬ್ಯಾಟಿಂಗ್ ಮೂಲಕ ಲಖನೌ ಸೂಪರ್ ಜೈಂಟ್ಸ್ ಅಕ್ಷರಶಃ ಬೆಂಡೆತ್ತಿದೆ. ನಾಯಕ ಕೆ.ಎಲ್.ರಾಹುಲ್ ಅಬ್ಬರದ ಆಟದಿಂದಾಗಿ ತವರಿನ ಅಂಗಳದಲ್ಲಿ ಚೆನ್ನೈಯನ್ನು 8 ವಿಕೆಟ್‌ಗಳಿಂದ ಸೋಲಿಸಿದ ಲಖನೌ ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿದರೆ, ಚೆನ್ನೈಗಿದು 7 ಪಂದ್ಯಗಳಲ್ಲಿ 3ನೇ ಸೋಲು.ಮೊದಲು ಬ್ಯಾಟ್ ಮಾಡಿದ ಚೆನ್ನೈ, ಆರಂಭಿಕ ಆಘಾತವನ್ನು ಹಿಮ್ಮೆಟ್ಟಿ 6 ವಿಕೆಟ್‌ಗೆ 176 ರನ್ ಕಲೆಹಾಕಿತು.
ತನ್ನ ಬೌಲರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದ ಚೆನ್ನೈ, ಲಖನೌ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆ ಇಟ್ಟುಕೊಂಡಿದ್ದರೂ ಫಲ ಕೊಡಲಿಲ್ಲ. ತವರಿನಲ್ಲಿ ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಲಖನೌ 19 ಓವರಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.ಮೊದಲ ವಿಕೆಟ್‌ಗೆ ಕೆ.ಎಲ್.ರಾಹುಲ್ ಹಾಗೂ ಡಿ ಕಾಕ್ ಕ್ರೀಸ್ ಕಚ್ಚಿ ನಿಂತಾಗಲೇ ಚೆನ್ನೈನ ಸೋಲು ಬಹುತೇಕ ಖಚಿತವಾಗಿತ್ತು. ಈ ಇಬ್ಬರು 15 ಓವರಲ್ಲಿ 134 ರನ್ ಸೇರಿಸಿದರು. 54 ರನ್ ಗಳಿಸಿ ಡಿ ಕಾಕ್ ಔಟಾದರೆ, 53 ಎಸೆತಗಳಲ್ಲಿ 82 ರನ್ ಚಚ್ಚಿದ ರಾಹುಲ್ ಗೆಲುವಿನ ಸನಿಹದಲ್ಲಿ ನಿರ್ಗಮಿಸಿದರು. ಬಳಿಕ ಪೂರನ್(ಔಟಾಗದೆ 23) ತಂಡವನ್ನು ಗೆಲ್ಲಿಸಿದರು.
ಜಡೇಜಾ ಫಿಫ್ಟಿ, ಧೋನಿ ಅಬ್ಬರ: ಸ್ಫೋಟಕ ಬ್ಯಾಟಿಂಗ್ ಮೂಲಕ ಟೂರ್ನಿಯಲ್ಲಿ ಗಮನ ಸೆಳೆದಿದ್ದ ಚೆನ್ನೈ ಈ ಬಾರಿ ಲಖನೌ ಪಿಚ್‌ನಲ್ಲಿ ಸಪ್ಪೆಯಾಯಿತು. ರಚಿನ್ ಶೂನ್ಯಕ್ಕೆ ನಿರ್ಗಮಿಸಿದರೆ, ರಹಾನೆ 36, ನಾಯಕ ಋತುರಾಜ್ 17ಕ್ಕೆ ಔಟಾದರು. ತಂಡದ ಕೈ ಹಿಡಿಯುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದ ಶಿವಂ ದುಬೆ(03), ಸಮೀರ್ ರಿಜ್ವಿ(01) ಯಾವುದೇ ಮ್ಯಾಜಿಕ್ ಮಾಡಲಿಲ್ಲ. ಈ ವೇಳೆ ತಂಡವನ್ನು ಕಾಪಾಡಿದ್ದು ಜಡೇಜಾ. ಅವರು ಔಟಾಗದೆ 57 ರನ್ ಸಿಡಿಸಿದರೆ, ಕೊನೆಯಲ್ಲಿ ತನ್ನ ಎಂದಿನ ಕೈಚಳಕ ತೋರಿಸಿದ ಧೋನಿ 9 ಎಸೆತದಲ್ಲಿ ಔಟಾಗದೆ 28 ರನ್ ಚಚ್ಚಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಮೊಯೀನ್ 30 ರನ್ ಕೊಡುಗೆ ನೀಡಿದರು. ಸ್ಕೋರ್: ಚೆನ್ನೈ 20 ಓವರಲ್ಲಿ 176/6 (ಜಡೇಜಾ 57*, ರಹಾನೆ 36, ಕೃನಾಲ್ 2-16), ಲಖನೌ 19 ಓವರಲ್ಲಿ 180/2 (ರಾಹುಲ್ 82, ಡಿ ಕಾಕ್ 54, ಪತಿರನ 1-29)
05ನೇ ಬಾರಿ: ಐಪಿಎಲ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಟಾಸ್ ಗೆದ್ದು ಮೊದಲ ತಂಡ ಎಂಬ ಹೆಗ್ಗಳಿಕೆಗೆ ಲಖನೌ ಪಾತ್ರವಾಯಿತು.
ವಿಕೆಟ್ ಕೀಪರ್ ಆಗಿ ಧೋನಿ 5000 ರನ್
ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಆಗಿ ಧೋನಿ 5000 ರನ್ ಪೂರ್ಣಗೊಳಿಸಿದರು. ಅವರು ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಧೋನಿ 223 ಇನ್ನಿಂಗ್ಸ್‌ನಲ್ಲಿ 39.45ರ ಸರಾಸರಿಯಲ್ಲಿ 5169 ರನ್ ಕಲೆಹಾಕಿದ್ದಾರೆ.