ಲಖನೌ ಆಲ್ರೌಂಡ್‌ ಶೋಗೆ ಮಂಡಿಯೂರಿದ ಟೈಟಾನ್ಸ್‌

KannadaprabhaNewsNetwork |  
Published : Apr 08, 2024, 01:00 AM ISTUpdated : Apr 08, 2024, 04:52 AM IST
ಯಶ್‌ ಠಾಕೂರ್‌(ಪಿಟಿಐ ಚಿತ್ರ) | Kannada Prabha

ಸಾರಾಂಶ

ಲಖನೌ ಜೈಂಟ್ಸ್‌ಗೆ ಹ್ಯಾಟ್ರಿಕ್‌ ಗೆಲುವು. ಲಖನೌ 5 ವಿಕೆಟ್‌ಗೆ 163 ರನ್‌. ಬಳಿಕ ಬೌಲರ್‌ಗಳ ಮಾರಕ ದಾಳಿಗೆ ತುತ್ತಾದ ಗುಜರಾತ್‌ 18.5 ಓವರ್‌ಗಳಲ್ಲಿ 130ಕ್ಕೆ ಆಲೌಟ್‌.

ಲಖನೌ: ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದರೂ ಸಂಘಟಿತ ದಾಳಿ ಪ್ರದರ್ಶಿಸಿದ ಲಖನೌ ಸೂಪರ್‌ ಜೈಂಟ್ಸ್‌ ಬೌಲರ್‌ಗಳು ತಂಡಕ್ಕೆ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ತಂದುಕೊಟ್ಟಿದ್ದಾರೆ.

 ಭಾನುವಾರದ 2ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ ಲಖನೌ 33 ರನ್ ಗೆಲುವು ದಾಖಲಿಸಿತು. ಶುಭ್‌ಮನ್‌ ಗಿಲ್‌ ನಾಯಕತ್ವದ ಗುಜರಾತ್‌ 5 ಪಂದ್ಯಗಳಲ್ಲಿ 3ನೇ ಸೋಲು ಕಂಡಿತು.ನಿಧಾನಗತಿ ಪಿಚ್‌ನಲ್ಲಿ ಲಖನೌಗೆ ದೊಡ್ಡ ಮೊತ್ತ ಕಲೆಹಾಕಲು ಗುಜರಾತ್‌ ಬೌಲರ್‌ಗಳು ಬಿಡಲಿಲ್ಲ. ಸ್ಟೋಯ್ನಿಸ್‌ ಅರ್ಧಶತಕದ ನೆರವಿನಿಂದ ಲಖನೌ 5 ವಿಕೆಟ್‌ ನಷ್ಟದಲ್ಲಿ ಕಲೆಹಾಕಿದ್ದು 163 ರನ್‌. ಆದರೆ ಅಸ್ಥಿರ ಆಟ ಮುಂದುವರಿಸಿದ ಗುಜರಾತ್‌ 18.5 ಓವರಲ್ಲಿ 130 ರನ್‌ಗೆ ಆಲೌಟಾಯಿತು.

ಸಾಯಿ ಸುದರ್ಶನ್(31), ರಾಹುಲ್‌ ತೆವಾಟಿಯಾ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್‌ ಕೂಡಾ ಕನಿಷ್ಠ 20 ರನ್ ಕೂಡಾ ಗಳಿಸಲಿಲ್ಲ ಎಂಬುದು ತಂಡದ ವೈಫಲ್ಯಕ್ಕೆ ಸಾಕ್ಷಿ. ಆರಂಭಿಕರ ಅತ್ಯುತ್ತಮ ಆಟದಿಂದಾಗಿ ಪವರ್‌-ಪ್ಲೇನಲ್ಲಿ ತಂಡ 54 ರನ್‌ ಸೇರಿಸಿತು. ಆದರೆ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಗುಜರಾತ್‌ ರನ್‌ ವೇಗವನ್ನೂ ಕಡಿಮೆಗೊಳಿಸಿತು. 15 ಓವರಲ್ಲಿ 7 ವಿಕೆಟ್‌ಗೆ 93 ರನ್‌ ಗಳಿಸಿದ್ದ ತಂಡಕ್ಕೆ 30 ಎಸೆತದಲ್ಲಿ 71 ರನ್‌ ಬೇಕಿತ್ತು. ಈ ವೇಳೆ ರಾಹುಲ್‌ ತೆವಾಟಿಯಾ(30) ಕೊಂಚ ಹೋರಾಟ ಪ್ರದರ್ಶಿಸಿದರೂ ಗೆಲುವು ಮಾತ್ರ ಸಿಗದಾಯಿತು.

ಸ್ಟೋಯ್ನಿಸ್‌ ಫಿಫ್ಟಿ: ಗುಜರಾತ್‌ನ ನಿಖರ ದಾಳಿ ಮುಂದೆ ರನ್‌ ಗಳಿಸಲು ತಿಣುಕಾಡಿದ ಲಖನೌ ಬ್ಯಾಟರ್‌ಗಳು ದೊಡ್ಡ ಹೊಡೆತಗಳಿಗೆ ಕೈ ಹಾಕದೆ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟರು. ರಾಹುಲ್‌ 33 ರನ್‌ಗೆ 31 ಎಸೆತ ಬಳಸಿಕೊಂಡರೆ, ಸ್ಟೋಯ್ನಿಸ್‌ 43 ಎಸೆತಗಳಲ್ಲಿ 58 ರನ್‌ ಸಿಡಿಸಿ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕೊನೆಯಲ್ಲಿ ಪೂರನ್‌ ಔಟಾಗದೆ 32, ಬದೋನಿ 20 ರನ್‌ ಗಳಿಸಿದರು.ಸ್ಕೋರ್‌: ಲಖನೌ 20 ಓವರಲ್ಲಿ 163/5 (ಸ್ಟೋಯ್ನಿಸ್‌ 58, ದರ್ಶನ್‌ 2-21, ಉಮೇಶ್‌ 2-22), ಗುಜರಾತ್‌ 18.5 ಓವರಲ್ಲಿ 130/10(ಸುದರ್ಶನ್‌ 31, ಯಶ್‌ 5-30)

ಮೈದಾನ ತೊರೆದ ಮಯಾಂಕ್: ತಮ್ಮ ವೇಗದ ಮೂಲಕವೇ ಎಲ್ಲರ ಗಮನ ಸೆಳೆದಿರುವ ಲಖನೌ ವೇಗಿ ಮಯಾಂಕ್‌ ಯಾವವ್‌ ಈ ಪಂದ್ಯದಲ್ಲಿ ಕೇವಲ 1 ಓವರ್‌ ಎಸೆದರು. ಬಳಿಕ ಸ್ನಾಯುಸೆಳೆತಕ್ಕೆ ಒಳಗಾದ ಅವರು ಅರ್ಧದಲ್ಲೇ ಮೈದಾನ ತೊರೆದರು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ