;Resize=(412,232))
ಅಜೀಜ ಅಹ್ಮದ ಬಳಗಾನೂರ
ಹುಬ್ಬಳ್ಳಿ : ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾಗಿರುವ ರಣಜಿ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡ ಚಾಂಪಿಯನ್ ಆಗಿ ಹೊಸ ಇತಿಹಾಸ ಬರೆದಿದೆ. 11 ವರ್ಷಗಳ ಬಳಿಕ ಫೈನಲ್ ತಲುಪಿ, 9ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ, ಘಟಾನುಘಟಿ ಆಟಗಾರರನ್ನು ಹೊಂದಿದ್ದ ಅತಿಥೇಯ ಕರ್ನಾಟಕ ತಂಡ ತೀರಾ ಕಳಪೆ ಪ್ರದರ್ಶನ ನೀಡಿ ಪರಾಭವಗೊಂಡಿತು. 67 ವರ್ಷಗಳಿಂದ ರಣಜಿ ಆಡುತ್ತಿರುವ ಜೆಕೆ ತಂಡ ಇದೇ ಮೊದಲ ಬಾರಿ ಫೈನಲ್‌ಗೇರಿತ್ತು. ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಎನಿಸಿಕೊಂಡಿದೆ.
ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ರಣಜಿ ಫೈನಲ್ ಪಂದ್ಯ ಶನಿವಾರ ಡ್ರಾನಲ್ಲಿ ಕೊನೆಗೊಂಡಿತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಿಸಿದ ಬೃಹತ್ ಮುನ್ನಡೆ ಆಧಾರದ ಮೇಲೆ ಜಮ್ಮು-ಕಾಶ್ಮೀರ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು.
15ನೇ ಬಾರಿ ಫೈನಲ್ ತಲುಪಿದ್ದ ಕರ್ನಾಟಕ ತಂಡವೇ ಫೇವರಿಟ್ ಆಗಿತ್ತು. ಪ್ರಥಮ ಬಾರಿ ಫೈನಲ್ ಪಂದ್ಯ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡ ಹುಬ್ಬಳ್ಳಿಯಲ್ಲಿ ಕರ್ನಾಟಕವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಳ್ಳುತ್ತದೆ ಎಂದು ಹೆಚ್ಚಿನವರು ಊಹಿಸಿರಲಿಲ್ಲ. ಆದರೆ 2ನೇ ದಿನದ ಆಟದ ಬಳಿಕ ಚಿತ್ರಣ ಬದಲಾಗಿ, ಮೂರನೇ ದಿನದ ಹೊತ್ತಿಗೆ ಜಮ್ಮು ಕಾಶ್ಮೀರ ಚಾಂಪಿಯನ್ ಆಗುವುದು ಬಹುತೇಕ ಖಚಿತವಾಗಿತ್ತು. ಪಂದ್ಯ ನೀರಸವಾಗಿ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 291 ರನ್ ಮುನ್ನಡೆ ಗಳಿಸಿದ್ದ ಜಮ್ಮು ಕಾಶ್ಮೀರ ಚಾಂಪಿಯನ್ ಪಟ್ಟ ಅಲಂಕರಿಸಿತು.
4ನೇ ದಿನದ ಅಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 186 ರನ್ ಗಳಿಸಿದ್ದ ಜೆಕೆ, ಕೊನೆ ದಿನವೂ ಪ್ರಾಬಲ್ಯ ಸಾಧಿಸಿತು. 94 ರನ್ ಗಳಿಸಿದ್ದ ಕಮ್ರಾನ್ ಇಕ್ಬಾಲ್(ಅಜೇಯ 160) ಶತಕ ಪೂರೈಸಿದರು. ಸಾಹಿಲ್ ಲೋತ್ರಾ(101) ಶತಕ ಪೂರ್ಣಗೊಂಡ ಬೆನ್ನಲ್ಲೇ ತಂಡ ಡಿಕ್ಲೇರ್ ಘೋಷಿಸಿತು. 4 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿ, ಬರೋಬ್ಬರಿ 633 ರನ್ ಮುನ್ನಡೆಯಲ್ಲಿದ್ದಾಗ ಪಂದ್ಯ ಡ್ರಾಗೊಳಿಸಲು ಉಭಯ ತಂಡಗಳ ನಾಯಕರು ಸಮ್ಮತಿಸಿದರು.
ಇದಕ್ಕೂ ಮುನ್ನ ಜೆಕೆ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ 293 ರನ್‌ಗೆ ಆಲೌಟಾಗಿತ್ತು. ರಣಜಿ ನಾಕೌಟ್‌ನಲ್ಲಿ ಪಂದ್ಯ ಪೂರ್ಣಗೊಳ್ಳದಿದ್ದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಅಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಸ್ಕೋರ್: ಜಮ್ಮು-ಕಾಶ್ಮೀರ 584/10 ಹಾಗೂ 342/4 (ಕಮ್ರಾನ್ ಔಟಾಗದೇ 160, ಸಾಹಿಲ್ ಔಟಾಗದೇ 101, ಪ್ರಸಿದ್ಧ್ 2-42), ಕರ್ನಾಟಕ 293/10
ಪಂದ್ಯಶ್ರೇಷ್ಠ: ಶುಭಂ ಪುಂಡೀರ್ । ಸರಣಿ ಶ್ರೇಷ್ಠ ಅಕಿಬ್ ನಬಿ
ಕರ್ನಾಟಕ ತಂಡದಲ್ಲಿ ಅನುಭವಿ ಆಟಗಾರರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರವಾಲ್, ಕರುಣ್ ನಾಯರ್, ನಾಯಕ ದೇವದತ್ ಪಡಿಕ್ಕಲ್, ಯುವ ತಾರೆ ಆರ್.ಸ್ಮರಣ್, ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್‌ರಂತಹ ಪ್ರಮುಖರಿದ್ದರು. ಆದರೆ ಪಂದ್ಯದ ಆರಂಭದಿಂದಲೂ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಜಮ್ಮು-ಕಾಶ್ಮೀರ ತಂಡ ಅರ್ಹವಾಗಿಯೇ ಚಾಂಪಿಯನ್ ಆಯಿತು.