ಸೂರತ್: ಅತಿ ರೋಚಕ ಲೋ ಸ್ಕೋರ್ ಥ್ರಿಲ್ಲರ್‌ಗೆ ಸಾಕ್ಷಿಯಾಗಿದ್ದ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮನೀಶ್ ಪಾಂಡೆ ಪ್ರದರ್ಶಿಸಿದ ಹೋರಾಟ ಕರ್ನಾಟಕಕ್ಕೆ 1 ವಿಕೆಟ್ ಗೆಲುವು ತಂದುಕೊಟ್ಟಿದೆ. ಇತ್ತೀಚೆಗಷ್ಟೇ ಗುಜರಾತ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳೆದುಕೊಂಡಿದ್ದ ರಾಜ್ಯ, ಈ ಬಾರಿ ತಿಣುಕಾಡಿಯಾದರೂ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ 3ನೇ ಜಯ ಸಂಪಾದಿಸಿದ ರಾಜ್ಯ ತಂಡ ಎಲೈಟ್ ‘ಬಿ’ ಗುಂಪಿನಲ್ಲಿ 21 ಅಂಕಗಳೊಂದಿಗೆ ಅಗ್ರ-2 ಸ್ಥಾನ ಭದ್ರಪಡಿಸಿಕೊಂಡಿದೆ.
2ನೇ ದಿನ 8 ವಿಕೆಟ್‌ಗೆ 209 ರನ್ ಗಳಿಸಿ 190 ರನ್ ಮುನ್ನಡೆಯಲ್ಲಿದ್ದ ರೈಲ್ವೇಸ್, ಭಾನುವಾರ ಮೊಹಮದ್ ಸೈಫ್(82) ಹೋರಾಟದಿಂದಾಗಿ 244ಕ್ಕೆ ಸರ್ವಪತನ ಕಂಡಿತು. ವೈಶಾಖ್ 5 ವಿಕೆಟ್ ಕಿತ್ತರು.ಮನೀಶ್ ಹೋರಾಟ: ಗೆಲುವಿಗೆ 226 ರನ್ ಗುರಿ ಪಡೆದ ರಾಜ್ಯ ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡ 99ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಸಮರ್ಥ್ 35, ಅನೀಶ್ 34 ರನ್ ಕೊಡುಗೆ ನೀಡಿದರೂ, ನಾಯಕತ್ವದ ಒತ್ತಡಕ್ಕೊಳಗಾದಂತೆ ಆಡಿದ ನಿಕಿನ್ ಜೋಸ್ ಮತ್ತೆ ಶೂನ್ಯ ಸುತ್ತಿದ್ದು ತಂಡವನ್ನು ಅಪಾಯಕ್ಕೆ ಸಿಲುಕಿಸಿತು.
ಆದರೆ ಮನೀಶ್ ಪಾಂಡೆ(ಔಟಾಗದೆ 67) ಕೆಳ ಕ್ರಮಾಂಕದ ಬ್ಯಾಟರ್‌ಗಳ ಜೊತೆಗೂಡಿ ಹೋರಾಟ ನಡೆಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಅವರು ಕ್ರಮವಾಗಿ ಕೊನೆ 4 ವಿಕೆಟ್‌ಗೆ ಶ್ರೀನಿವಾಸ್ ಶರತ್(23) ಜೊತೆ 34, ವೈಶಾಕ್(38) ಜೊತೆ 64, ವಿದ್ವತ್ ಜೊತೆ 17 ಹಾಗೂ ಕೌಶಿಕ್ ಜೊತೆ 15 ರನ್ ಜೊತೆಯಾಟವಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.ಇದಕ್ಕೂ ಮೊದಲ ರೈಲ್ವೇಸನ್ನು ಮೊದಲ ಇನ್ನಿಂಗ್ಸ್‌ನಲ್ಲಿ 155ಕ್ಕೆ ನಿಯಂತ್ರಿಸಿದ್ದ ಕರ್ನಾಟಕ, ಬಳಿಕ 174 ರನ್‌ಗೆ ಆಲೌಟಾಗಿ ಅಲ್ಪ ಮುನ್ನಡೆ ಪಡೆದಿತ್ತು.
ಸ್ಕೋರ್: ರೈಲ್ವೇಸ್ 155/10 ಮತ್ತು 244/10(ಸೈಫ್ 82, ವೈಶಾಕ್ 5-67), ಕರ್ನಾಟಕ 174/10 ಮತ್ತು 229/9(ಮನೀಶ್ 67*, ವೈಶಾಕ್ 38, ಆಕಾಶ್ 5-94)ತಮಿಳ್ನಾಡು ಮುಂದಿನ ಸವಾಲುಕರ್ನಾಟಕ ತಂಡ ಟೂರ್ನಿಯ 6ನೇ ಪಂದ್ಯದಲ್ಲಿ ಫೆ.9ರಿಂದ ತಮಿಳುನಾಡು ವಿರುದ್ಧ ಸೆಣಸಾಡಲಿದೆ. ಸದ್ಯ ಗೋವಾ ವಿರುದ್ಧ ಆಡುತ್ತಿರುವ ತಮಿಳುನಾಡು ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ತಂಡ ಆಡಿರುವ 4 ಪಂದ್ಯದಲ್ಲಿ 2ರಲ್ಲಿ ಗೆದ್ದಿದೆ. ನಾಕೌಟ್ ದೃಷ್ಟಿಯಿಂದ ಕರ್ನಾಟಕ ಜೊತೆ ತಮಿಳುನಾಡಿಗೂ ಜಯ ಅನಿವಾರ್ಯ.ಹರ್ಯಾಣ ವಿರುದ್ಧ 1 ರನ್ ಗೆದ್ದ ಸರ್ವಿಸಸ್
ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಸರ್ವಿಸಸ್ 1 ರನ್ ರೋಚಕ ಜಯಗಳಿಸಿತು. ಗೆಲುವಿಗೆ 146 ರನ್ ಗುರಿ ಪಡೆದಿದ್ದ ಹರ್ಯಾಣ 144ಕ್ಕೆ ಆಲೌಟಾಯಿತು. ಇದು ರಣಜಿಯಲ್ಲಿ ದಾಖಲಾದ 2ನೇ 1 ರನ್ ಗೆಲುವು. ಈ ಮೊದಲು 1975ರಲ್ಲಿ ತಮಿಳುನಾಡು ವಿರುದ್ಧ ಆಂಧ್ರ ಪ್ರದೇಶ 1 ರನ್ ಜಯಗಳಿಸಿತ್ತು.