ಮ್ಯಾರಥಾನ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಕೀನ್ಯಾದ ಖ್ಯಾತ ಓಟಗಾರ ಕೆಲ್ವಿನ್ ಕಿಪ್ಟಮ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನೈರೋಬಿ(ಕೀನ್ಯಾ): ಮ್ಯಾರಥಾನ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಕೀನ್ಯಾದ ಖ್ಯಾತ ಓಟಗಾರ ಕೆಲ್ವಿನ್ ಕಿಪ್ಟಮ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ 24ರ ಕೆಲ್ವಿನ್ ಜೊತೆಗೆ ಅವರ ಕೋಚ್ ಹಕಿಜಿಮನ್ ಕೂಡಾ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ಮತ್ತೋರ್ವ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ್ವಿನ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆ ಪಕ್ಕದ ಮರಕ್ಕೆ ಗುದ್ದಿ, ಕಂದಕ್ಕೆ ಉರುಳಿದೆ ಎಂದು ಮಾಹಿತಿ ನೀಡಿದ್ದಾರೆ.
ಕಿಪ್ಟಂ ಕಳೆದ ಅಕ್ಟೋಬರ್‌ನಲ್ಲಿ ಷಿಕಾಗೋ ಮ್ಯಾರಥಾನ್‌ನಲ್ಲಿ 2 ಗಂಟೆ, 0.35 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ತಾವು ಭಾಗವಹಿಸಿದ್ದ 3ನೇ ಮ್ಯಾರಥಾನ್‌ನಲ್ಲೇ ದಾಖಲೆ ಬರೆದಿದ್ದ ಅವರು ಒಲಿಂಪಿಕ್ಸ್‌ನಲ್ಲೂ ಚಿನ್ನದ ಮೇಲೆ ಕಣ್ಣಿಟ್ಟಿದ್ದರು.
ಅವರ ದಾಖಲೆಯನ್ನು ಕಳೆದ ವಾರವಷ್ಟೇ ಟ್ರ್ಯಾಕ್ ಫೆಡರೇಶನ್ ಆಫ್ ವರ್ಲ್ಡ್ ಅಥ್ಲೆಟಿಕ್ಸ್ ಅಂಗೀಕರಿಸಿತ್ತು. ಕಿಪ್ಟಂ ಸಾವಿಗೆ ಜಾಗತಿಕ ಮಟ್ಟದ ಕ್ರೀಡಾ ತಾರೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ.