2026ರ ಫೆಬ್ರವರಿ 7ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲಾಗಿದೆ. ಆದರೆ 15 ಜನರ ತಂಡದಲ್ಲಿ ತಾರಾ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ಗೆ ಸ್ಥಾನ ಲಭಿಸಿಲ್ಲ.

 ಮುಂಬೈ: 2026ರ ಫೆಬ್ರವರಿ 7ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲಾಗಿದೆ. ಆದರೆ 15 ಜನರ ತಂಡದಲ್ಲಿ ತಾರಾ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ಗೆ ಸ್ಥಾನ ಲಭಿಸಿಲ್ಲ. ಟೆಸ್ಟ್‌, ಏಕದಿನ ತಂಡಗಳ ನಾಯಕ, ಟಿ20 ತಂಡದ ಉಪನಾಯಕರಾಗಿದ್ದರೂ ಗಿಲ್‌ರನ್ನು ಆಯ್ಕೆ ಸಮಿತಿ ವಿಶ್ವಕಪ್‌ನಿಂದ ಕೈಬಿಟ್ಟು ಅಚ್ಚರಿ ಮೂಡಿಸಿದೆ.

ಶನಿವಾರ ನಾಯಕ ಸೂರ್ಯಕುಮಾರ್‌ ಯಾದವ್‌, ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ಆಯ್ಕೆ ಸಮಿತಿ ಸದ್ಯಸರು ಪತ್ರಿಕಾಗೋಷ್ಠಿ ನಡೆಸಿ ತಂಡ ಪ್ರಕಟಿಸಿದರು. ದ.ಆಫ್ರಿಕಾ ಸರಣಿಯಲ್ಲಿ ಆಡಿದ್ದ ತಂಡವನ್ನೇ ವಿಶ್ವಕಪ್‌ಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದರೂ, ಕೆಲ ಬದಲಾವಣೆ ಮಾಡಲಾಗಿದೆ. ಕಳಪೆ ಲಯದ ಹೊರತಾಗಿಯೂ ಸೂರ್ಯಕುಮಾರ್‌ ನಾಯಕತ್ವ ವಹಿಸಲಿದ್ದು, ಆಲ್ರೌಂಡರ್ ಅಕ್ಷರ್‌ ಪಟೇಲ್‌ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಆದರೆ ಜಿತೇಶ್‌ ಶರ್ಮಾ, ಯಶಸ್ವಿ ಜೈಸ್ವಾಲ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಗಿಲ್‌ರನ್ನು ಪ್ರದರ್ಶನ ಆಧಾರದಲ್ಲಿ ಕೈಬಿಟ್ಟಿಲ್ಲ

ಗಿಲ್‌ರನ್ನು ಹೊರಗಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್‌, ‘ಗಿಲ್‌ರನ್ನು ಪ್ರದರ್ಶನ ಆಧಾರದಲ್ಲಿ ಕೈಬಿಟ್ಟಿಲ್ಲ. ಅಗ್ರ ಕ್ರಮಾಂಕದಲ್ಲಿ ನಮಗೆ ವಿಕೆಟ್‌ ಕೀಪರ್‌ ಬ್ಯಾಟರ್ ಅಗತ್ಯವಿತ್ತು’ ಎಂದಿದ್ದಾರೆ. ಹೀಗಾಗಿ ಅಭಿಷೇಕ್‌ ಶರ್ಮಾ ಜೊತೆ ಸಂಜು ಸ್ಯಾಮ್ಸನ್‌ ಅಥವಾ ಇಶಾನ್‌ ಕಿಶನ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ, ಸೂರ್ಯಕುಮಾರ್‌, ಶಿವಂ ದುಬೆ ಇದ್ದಾರೆ.

ಹಾರ್ದಿಕ್‌ ಪಾಂಡ್ಯ ಆಲ್ರೌಂಡ್‌ ವಿಭಾಗಕ್ಕೆ ಬಲ ತುಂಬಲಿದ್ದು, ವೇಗದ ಬೌಲಿಂಗ್‌ ಪಡೆಯನ್ನು ಜಸ್‌ಪ್ರೀತ್‌ ಬೂಮ್ರಾ ಮುನ್ನಡೆಸಲಿದ್ದಾರೆ. ವರುಣ್‌ ಚಕ್ರವರ್ತಿ, ಕುಲ್ದೀಪ್‌ ಯಾದವ್‌ ಜೊತೆ ಅಕ್ಷರ್‌, ವಾಷಿಂಗ್ಟನ್‌ ಸುಂದರ್ ಸ್ಪಿನ್‌ ವಿಭಾಗದ ಆಧಾರಸ್ತಂಭಗಳು ಎನಿಸಿಕೊಂಡಿದ್ದಾರೆ. ಜ.21ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯಲ್ಲೂ ಇದೇ ತಂಡ ಕಣಕ್ಕಿಳಿಯಲಿದೆ.

ವಿಶ್ವಕಪ್‌ನಲ್ಲಿ ಭಾರತ ತಂಡ ಫೆ.7ರಂದು ಯುಎಸ್‌ಎ ವಿರುದ್ಧ ಆಡಲಿದ್ದು, ಫೆ.12ಕ್ಕೆ ನಮೀಬಿಯಾ, ಫೆ.15ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಟೂರ್ನಿಯು ಭಾರತದ 5, ಶ್ರೀಲಂಕಾದ 2 ನಗರಗಳಲ್ಲಿ ನಡೆಯಲಿವೆ. ಮಾ.8ಕ್ಕೆ ಫೈನಲ್‌ ನಿಗದಿಯಾಗಿದೆ.

ತಂಡ:

ಸೂರ್ಯಕುಮಾರ್‌(ನಾಯಕ), ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್‌(ಉಪನಾಯಕ), ಕುಲ್ದೀಪ್‌, ಬೂಮ್ರಾ, ಅರ್ಶ್‌ದೀಪ್‌, ಹರ್ಷಿತ್‌ ರಾಣಾ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ವರುಣ್‌ ಚಕ್ರವರ್ತಿ, ಇಶಾನ್‌ ಕಿಶನ್‌, ರಿಂಕು ಸಿಂಗ್‌.

ಎರಡು ವರ್ಷ ಬಳಿಕ ಕಿಶನ್‌ ಕಮ್‌ಬ್ಯಾಕ್‌

ಜಾರ್ಖಂಡ್‌ನ ಯುವ ಕ್ರಿಕೆಟಿಗ ಇಶಾನ್‌ ಕಿಶನ್‌ ಬರೋಬ್ಬರಿ ಎರಡು ವರ್ಷ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 2023ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಆಡಿದ ಬಳಿಕ ತಂಡದಿಂದ ಹೊರಬಿದ್ದು ನಂತರ ಬಿಸಿಸಿಐ ಗುತ್ತಿಗೆಯನ್ನೇ ಕಳೆದುಕೊಂಡಿದ್ದ ಇಶಾನ್‌, ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಏಳು ಬದಲಾವಣೆ

2024ರ ಟಿ20 ವಿಶ್ವಕಪ್‌ಗೆ ಹೋಲಿಸಿದರೆ ಈ ಬಾರಿ ತಂಡದಲ್ಲಿ 7 ಬದಲಾವಣೆಗಳಾಗಿವೆ. ರೋಹಿತ್‌, ವಿರಾಟ್‌, ಜಡೇಜಾ, ರಿಷಭ್‌ ಪಂತ್‌, ಸಿರಾಜ್‌, ಚಹಲ್‌, ಜೈಸ್ವಾಲ್‌ ತಂಡದಲ್ಲಿಲ್ಲ. ಅವರ ಬದಲು ಅಭಿಷೇಕ್‌, ತಿಲಕ್‌, ಸುಂದರ್‌, ಇಶಾನ್‌, ಹರ್ಷಿತ್‌, ವರುಣ್‌, ರಿಂಕು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.