ಅಂಧರ ಟಿ೨೦ ವಿಶ್ವಕಪ್ ವಿಜೇತ ತಂಡದ ನಾಯಕಿಯಾದ ಶಿರಾ ತಾಲೂಕಿನ ಕರೆತಿಮ್ಮನಹಳ್ಳಿ ಗ್ರಾಮದ ದೀಪಿಕಾ ಟಿ.ಸಿ ಅವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಅಂಧರ ಟಿ೨೦ ವಿಶ್ವಕಪ್ ವಿಜೇತ ತಂಡದ ನಾಯಕಿಯಾದ ಶಿರಾ ತಾಲೂಕಿನ ಕರೆತಿಮ್ಮನಹಳ್ಳಿ ಗ್ರಾಮದ ದೀಪಿಕಾ ಟಿ.ಸಿ ಅವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಅವರು ಮಂಗಳವಾರ ನಗರದ ಸೇವಾ ಸದನದಲ್ಲಿ ಕುಮಾರಿ ದಿಪೀಕಾ ಅವರಿಗೆ ಸನ್ಮಾನ ನೆರವೇರಿಸಿ ನಂತರ ಪ್ರೆಸಿಡೆನ್ಸಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ೨ ಲಕ್ಷ ರು. ಪ್ರೋತ್ಸಾಹಧನದ ಚೆಕ್ ನೀಡಿ ಮಾತನಾಡಿದರು. ಈ ಹಿಂದೆ ನಾನು ದಿಪೀಕಾ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಆಗಲೂ ಸಹಾಯಧನ ನೀಡಿದ್ದೆ. ಮುಂದೆಯೂ ನಾನು ದೀಪಿಕಾ ಅವರಿಗೆ ಸಹಾಯ ಮಾಡುತ್ತೇನೆ. ದಿಪೀಕಾ ಅವರು ಬಡತನ, ತನ್ನ ನ್ಯೂನತೆಯನ್ನು ಮೆಟ್ಟಿನಿಂತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಬಡತನ ನಮಗೆ ಶಾಪವಾಗಬಾರದು ಅಸ್ತ್ರವಾಗಬೇಕು.

ಅಂಧರ ಟಿ೨೦ ವಿಶ್ವಕಪ್ ವಿಜೇತ ತಂಡದ ನಾಯಕಿ ದೀಪಿಕಾ ಅವರು ಮಾತನಾಡಿ, ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ನನಗೆ ಎರಡನೇ ಅಪ್ಪ ಇದ್ದ ಹಾಗೆ ನನ್ನ ಸಾಧನೆಗೆ ಅವರು ಮೊದಲಿನಿಂದಲೂ ಬೆನ್ನೆಲುಬಾಗಿದ್ದಾರೆ. ನಾನು ಅವರ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ. ನಾನು ಬಡ ಕುಟುಂಬದಿಂದ ಬಂದಿದ್ದೇನೆ. ನಾನು ಕಣ್ಣಿನ ಸಮಸ್ಯೆ ಇದೆ ಎಂದು ಸುಮ್ಮನಿದ್ದರೆ ಇಂದು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮನ್ನು ಹೀಯಾಳಿಸಿದಷ್ಟು ನಾವು ಸಾಧನೆ ಮಾಡಬೇಕು. ನಮ್ಮಿಂದ ಆಗುವುದಿಲ್ಲ ಎಂದು ಸುಮ್ಮನಿರಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಉಮಾ ವಿಜಯರಾಜ್, ಜಿಲ್ಲಾ ಓ ಬಿ ಸಿ ಅಧ್ಯಕ್ಷರಾದ ಮಾಗೋಡು ಪ್ರತಾಪ್, ತಾ.ಪಂ. ಮಾಜಿ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ರೈತ ಮೋರ್ಚಾ ಅಧ್ಯಕ್ಷರಾದ ಮದ್ದೆವಳ್ಳಿ ರಾಮಕೃಷ್ಣಪ್ಪ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು ಮೂಗನಹಳ್ಳಿ, ನಗರಸಭೆ ಮಾಜಿ ಸದಸ್ಯರಾದ ನಟರಾಜ್ ಸಂತೆಪೇಟೆ, ಸೇರಿದಂತೆ ಹಲವರು ಹಾಜರಿದ್ದರು. .