ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ:ಎಚ್‌ಡಿಕೆ

Published : Jan 17, 2026, 09:26 AM IST
HD Kumaraswamy

ಸಾರಾಂಶ

ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಮೈತ್ರಿಗೆ ಧಕ್ಕೆಯಾಗದಂತೆ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕು. ಹೆಚ್ಚು ವಾರ್ಡುಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ದುಡಿಯಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ  ಸಚಿವ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

 ಬೆಂಗಳೂರು :  ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಮೈತ್ರಿಗೆ ಧಕ್ಕೆಯಾಗದಂತೆ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕು. ಹೆಚ್ಚು ವಾರ್ಡುಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ದುಡಿಯಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ಪಂಚ ಪಾಲಿಕೆಗಳ ಚುನಾವಣೆ ಕುರಿತು ಶುಕ್ರವಾರ ಪಕ್ಷದ ಕಚೇರಿಯಲ್ಲಿ ನಡೆದ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ಸಮಸ್ಯೆ, ಗೊಂದಲಗಳು ಏನಾದರೂ ಇದ್ದರೆ ಬಹಿರಂಗ ಹೇಳಿಕೆಗಳನ್ನು ಕೊಡಬೇಡಿ. ಅಂತಹ ವಿಷಯಗಳನ್ನು ನಮ್ಮ ಗಮನಕ್ಕೆ ತನ್ನಿ. ಬೀದಿಯಲ್ಲಿ ಹೇಳಿಕೆಗಳನ್ನು ನೀಡುವುದು ಬೇಡ ಎಂದು ಸಚಿವರು ತಾಕೀತು ಮಾಡಿದರು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಉತ್ತಮ ಸಾಧನೆ ಮಾಡಿದೆ. ಬೆಂಗಳೂರಿನಲ್ಲಿ ಕೂಡ ಇದೇ ಫಲಿತಾಂಶ ಪುನರಾವರ್ತನೆ ಆಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ದುಡಿಮೆ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ

ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಮೂಲಸೌಕರ್ಯವನ್ನು ಸರ್ವನಾಶ ಮಾಡಿದ್ದಾರೆ. ಕಾಲಿಟ್ಟ ಕಡೆಯಲ್ಲೆಲ್ಲಾ ಗುಂಡಿಗಳು ಕಾಣುತ್ತವೆ. ತೆರಿಗೆ, ಬೆಲೆ ಏರಿಕೆಯಿಂದ ಜನರನ್ನು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆಲ್ಲ ತಕ್ಕ ಪಾಠ ಕಲಿಸಲು ಜನರು ಸಿದ್ಧರಾಗಿದ್ದಾರೆ. ಹೀಗಾಗಿ ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಸಂಸದ ಮಲ್ಲೇಶ್‌ ಬಾಬು ಸೇರಿದಂತೆ ಪಕ್ಷದ ಬೆಂಗಳೂರು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮುಖಂಡರು, ಮಾಜಿ ಶಾಸಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಮತಗಟ್ಟೆ ಮಟ್ಟದಲ್ಲಿ ಪಕ್ಷ ಬಲಪಡಿಸಿ:ಎಚ್‌ಡಿಡಿ

ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮಾತನಾಡಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ವಾರ್ಡು ಮತ್ತು ಮತಗಟ್ಟೆ ಮಟ್ಟದಲ್ಲಿಯೇ ಪಕ್ಷವನ್ನು ಗಟ್ಟಿ ಮಾಡಬೇಕು. ನಮ್ಮ ಪಕ್ಷಕ್ಕೆ ಬೆಂಗಳೂರಿನಲ್ಲಿ ಗಟ್ಟಿ ನೆಲೆ ಇದೆ. ನಾನು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ನಗರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ. ಅದನ್ನು ಜನತೆಗೆ ಮನವರಿಕೆ ಮಾಡಿಕೊಡಿ ಎಂದು ಹೇಳಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ನಾನು ಗೆಲ್ಲುವ ಬಹುಮಾನಗಳನ್ನು ನನ್ನ ತಾಯಿಗೆ ಕಳಿಸುತ್ತೇನೆ: ಕೊಹ್ಲಿ!
ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌