ಬೆಂಗಳೂರು : ಕರ್ನಾಟಕದ ಭವಿಷ್ಯದ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿದ 3ನೇ ಆವೃತ್ತಿಯ ರಾಜ್ಯ ಮಿನಿ ಒಲಿಂಪಿಕ್ಸ್‌ಗೆ ತೆರೆ ಬಿದ್ದಿದೆ. ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದ ಮೂಲಕ ಅಂಡರ್-14 ವಿಭಾಗದ 7 ದಿನಗಳ ಕ್ರೀಡಾಕೂಟವನ್ನು ಮುಕ್ತಾಯಗೊಳಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ‘ಯಾವುದೇ ರಾಜ್ಯದಲ್ಲಿ ಇಷ್ಟೊಂದು ಪ್ರಗತಿಪರ, ಅತ್ಯುನ್ನತ ಕ್ರೀಡಾಕೂಟ ನಡೆಸಲು ಸಾಧ್ಯವಾಗಿಲ್ಲ. ಅದನ್ನು ನಮ್ಮ ರಾಜ್ಯ ಮಾಡಿ ಮಾದರಿಯಾಗಿದೆ. ರಾಜ್ಯದ ಕ್ರೀಡಾ ಸಂಸ್ಕೃತಿ ಇನ್ನಷ್ಟು ಉನ್ನತಿಗೇರಬೇಕು. ನಮ್ಮ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಕ್ರೀಡಾ ವ್ಯವಸ್ಥೆ ಉತ್ತಮವಾಗಿಲ್ಲ. ಕೋಚ್, ದೈಹಿಕ ಶಿಕ್ಷಕರ ಕೊರತೆಯೇ ಅದಕ್ಕೆ ಕಾರಣ.
ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದರು. ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು, ಕ್ರೀಡೆಗೂ ಕಳುಹಿಸಬೇಕು. ಮಿನಿ ಒಲಿಂಪಿಕ್ಸ್ ಇಂದಿಗೆ ಕೊನೆ ಆಗಬಹುದು. ಆದರೆ ನಿಮ್ಮ ಕ್ರೀಡಾ ಚಟುವಟಿಕೆ ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದೇಶದಲ್ಲೇ ಒಲಿಂಪಿಕ್ಸ್ ಸಂಸ್ಥೆಗೆ ಸ್ವಂತ ಕಟ್ಟಡ, ಅದರಲ್ಲಿ ಸ್ಪೋರ್ಟ್ಸ್ ಗ್ಯಾಲರಿ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಮ್ಮಲ್ಲಿ ಇದನ್ನು ಸಾಧ್ಯವಾಗಿಸಿದ್ದು ಡಾ.ಕೆ.ಗೋವಿಂದರಾಜು. ರಾಜ್ಯದ ಕ್ರೀಡೆಗೆ ಅವರ ಕೊಡುಗೆ ದೊಡ್ಡದು ಎಂದು ಕೊಂಡಾಡಿದರು. ಸಮಾರಂಭದಲ್ಲಿ ಸಚಿವರಾದ ಎಂ.ಸಿ. ಸುಧಾಕರ್, ಮಧು ಬಂಗಾರಪ್ಪ ಸೇರಿ ಪ್ರಮುಖರು ಪಾಲ್ಗೊಂಡರು.
ಇಯಾನ್, ಗೌರಿ ಶ್ರೇಷ್ಠ ಅಥ್ಲೀಟ್ಸ್
ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ದಕ್ಷಿಣ ಕನ್ನಡದ ಇಯಾನ ಅಮನ್ನಾ ಹಾಗೂ ಬೆಳಗಾವಿಯ ಗೌರಿ ಪೂಜಾರಿ ಕ್ರಮವಾಗಿ ಬಾಲಕ, ಬಾಲಕಿಯರ ವಿಭಾಗದ ಶ್ರೇಷ್ಠ ಅಥ್ಲೀಟ್‌ಗಳಾಗಿ ಹೊರಹೊಮ್ಮಿದೆ. ಈಜು ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಬಸವನಗುಡಿ ಕೇಂದ್ರದ ನೈಶಾ, ಬಾಲಕರ ವಿಭಾಗದಲ್ಲಿ ಸಮರ್ಥ್ ಗೌಡ, ಶರಣ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.
ಶೇ.25 ಹಾಜರಾತಿ ಕೊಡಿ: ಗೋವಿಂದರಾಜು ಮನವಿ
ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಗೋವಿಂದರಾಜು, ‘ರಾಜ್ಯ, ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಶೇ.25ರಷ್ಟು ಹಾಜರಾತಿ ಕೊಡಿಸಬೇಕು’ ಎಂದು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು. ‘ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಅವರ ಕ್ರೀಡಾ ಬದುಕು ಉನ್ನತವಾಗಬೇಕಿದ್ದರೆ ದೈಹಿಕ ಶಿಕ್ಷಕರ ಅಗತ್ಯವಿದೆ. ಪ್ರಮುಖವಾಗಿ 11, 12ನೇ ತರಗತಿಯ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರ ಕೊರತೆ ಎದುರಾಗಬಾರದು. ನಮ್ಮ ಶಾಲೆಗಳ ಮಕ್ಕಳು ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಅವರ ಹಾಜರಾತಿ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಮಕ್ಕಳಿಗೆ ಶೇ.25 ಹಾಜರಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು’ ಎಂದರು.
15 ಮಂದಿಗೆ ತಲಾ ₹5000
ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅಗ್ರ-15 ಕ್ರೀಡಾಪಟುಗಳಿಗೆ ಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ವಿಜ್ಞಾನ ಕೇಂದ್ರದ ವತಿಯಿಂದ ತಲಾ 5000 ರು. ಬಹುಮಾನ ನೀಡಲಾಯಿತು. ಬ್ಯಾಡ್ಮಿಂಟನ್‌ನಲ್ಲಿ ಶಾಂಭವಿ, ಈಜು ಪಟು ನೈಶಾ, ಬಾಕ್ಸಿಂಗ್ ತಾರೆ ನಯನ, ಮ್ಯಾಕ್ಸ್ ಆಂಟೋನಿ ಸೇರಿ 15 ಮಂದಿ ನಗದು ಬಹುಮಾನ ಪಡೆದರು.