ನವದೆಹಲಿ: 2036ರ ಒಲಿಂಪಿಕ್, ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಲು ಭಾರತದಿಂದ ಅಧಿಕೃತವಾಗಿ ಆಸಕ್ತಿ ವ್ಯಕ್ತವಾಗಿದೆ. ಕಳೆದೊಂದು ವರ್ಷದಿಂದ ಈ ಬಗ್ಗೆ ಮೌಖಿಕವಾಗಿ ಹೇಳುತ್ತಿದ್ದ ಭಾರತ, ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ತಾನು ಆತಿಥ್ಯ ವಹಿಸಲು ಆಸಕ್ತಿ ಹೊಂದಿರುವುದಾಗಿ ಪತ್ರ ಬರೆದಿದೆ.
ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, 2036ರ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಜ್ಜಾಗುತ್ತಿದೆ ಎಂದು ಹೇಳಿದ್ದರು.
ಕೆಲ ತಿಂಗಳುಗಳ ಹಿಂದೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ನಡೆದಾಗ ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಸೇರಿ ಪ್ರಮುಖ ಆಡಳಿತಗಾರರು ತೆರಳಿ, ಭಾರತದ ಪರ ಲಾಬಿ ನಡೆಸಿದ್ದರು. ಜೊತೆಗೆ ಹಾಲಿ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಕೂಡ ಭಾರತದ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ಕೊನೆಯ ಬಾರಿಗೆ ಭಾರತ ಬಹುರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಿದ್ದು 2010ರಲ್ಲಿ. ನವದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು. ಮುಂದಿನ ವರ್ಷ ಆತಿಥ್ಯ ಹಕ್ಕಿನ ಬಗ್ಗೆ ಐಒಸಿ ಘೋಷಣೆ:ಆತಿಥ್ಯ ಹಕ್ಕು ಪಡೆಯುವ ದೇಶದ ಹೆಸರನ್ನು ಐಒಸಿ ಮುಂದಿನ ವರ್ಷ ನಡೆಯಲಿರುವ ತನ್ನ ಚುನಾವಣೆಯ ಬಳಿಕವಷ್ಟೇ ಘೋಷಿಸಲಿದೆ. ಆದರೆ, ಸದ್ಯ ಆಸಕ್ತಿ ತೋರಿ ಅಧಿಕೃತವಾಗಿ ಪತ್ರ ಬರೆಯುವ ಮೂಲಕ ಭಾರತ, ಆತಿಥ್ಯ ಹಕ್ಕು ಪಡೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಈ ವರದಿಯಲ್ಲಿ ಭಾರತದ ಪರವಾದ ಅಂಶಗಳು ಇದ್ದರೆ, ಆಗ ಅರ್ಜಿ ಮುಂದಿನ ಹಂತಕ್ಕೆ ಹೋಗಲಿದೆ. ಆ ಹಂತದಲ್ಲಿ ಅಧಿಕೃತವಾಗಿ ಬಿಡ್ ಸಲ್ಲಿಕೆ ಮಾಡಬೇಕಾಗುತ್ತದೆ. ಐಒಸಿ ಸ್ಥಳ ಪರಿಶೀಲನೆ ನಡೆಸಿ, ವಸ್ತುಸ್ಥಿತಿಯ ಬಗ್ಗೆ ಅಧ್ಯಯನ ಮಾಡಿ ಆತಿಥ್ಯ ಹಕ್ಕು ಘೋಷಿಸಲಿದೆ.
2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕು ಪಡೆಯಲು ಸೌದಿ ಅರೇಬಿಯಾ, ಕತಾರ್, ಟರ್ಕಿ ಸಹ ಆಸಕ್ತಿ ತೋರಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.