‘ಹ್ಯಾಪಿ ಬರ್ತ್‌ಡೇ ನನ್ನ ಬಿಸ್ಕೆಟ್‌’: ಕೊಹ್ಲಿಗೆ ಎಬಿಡಿ ಶುಭಾಶಯ!

KannadaprabhaNewsNetwork | Published : Nov 6, 2024 12:41 AM

ಸಾರಾಂಶ

ಕೊಹ್ಲಿ ಹುಟ್ಟುಹಬ್ಬಕ್ಕೆ ಟ್ವೀಟರಲ್ಲಿ ವಿಶೇಷವಾಗಿ ಶುಭ ಕೋರಿದ ಎಬಿಡಿ. ಅಭಿಮಾನಿಗಳಿಂದ ಭಾರಿ ಮೆಚ್ಚುಗೆ. ಭಾರೀ ವೈರಲ್‌ ಆದ ಎಬಿಡಿಯ ಟ್ವೀಟ್‌. ಬಿಸ್ಕೆಟ್‌ ಅಂತ ಕರೆದಿದ್ದು ಯಾಕೆ ಎಂದು ಕುತೂಹಲ.

ಬೆಂಗಳೂರು: ದಿಗ್ಗಜ ಕ್ರಿಕೆಟಿಗ ವಿರಾಟ್‌ ಕೊಹ್ಲಿಯ ಹುಟ್ಟುಹಬ್ಬಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿ ವಿಲಿಯರ್ಸ್‌ ವಿಶೇಷವಾಗಿ ಶುಭಕೋರಿ ಗಮನ ಸೆಳೆದಿದ್ದಾರೆ.

ಶುಭಾಶಯವನ್ನು ಟ್ವೀಟ್‌ ಮಾಡಿರುವ ಎಬಿಡಿ, ‘ಹ್ಯಾಪಿ ಬರ್ತ್‌ಡೇ, ನನ್ನ ಬಿಸ್ಕೆಟ್‌! ನಿಮ್ಮ ಬದುಕು ಅದ್ಭುತವಾಗಿರಲಿ. ನಿಮ್ಮ ಬ್ಯಾಟ್‌ನಿಂದ ಮತ್ತಷ್ಟು ಅಜೇಯ ಶತಕಗಳು ಮೂಡಿಬರಲಿ’ ಎಂದಿದ್ದಾರೆ. ಎಬಿಡಿಯ ಈ ಟ್ವೀಟ್‌ ಭಾರಿ ವೈರಲ್‌ ಆಗಿದೆ.

----------

ಐಸಿಸಿ ಏಕದಿನ: 9ನೇ ಸ್ಥಾನಕ್ಕೆ ಏರಿದ ಹರ್ಮನ್‌ಪ್ರೀತ್‌

ದುಬೈ: ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 9ನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರ ನ್ಯೂಜಿಲೆಂಡ್‌ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಹರ್ಮನ್‌ಪ್ರೀತ್‌ ಉತ್ತಮ ಪ್ರದರ್ಶನ ತೋರಿದ್ದರು. ಇದೇ ವೇಳೆ ಉಪನಾಯಕಿ ಸ್ಮೃತಿ ಮಂಧನಾ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನು ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ದೀಪ್ತಿ ಶರ್ಮಾ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ತಂಡ 25 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಲಾ 28 ಅಂಕಗಳೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

--------------

ರಾಷ್ಟ್ರೀಯ ಪುರುಷರ ಹಾಕಿ: ಕರ್ನಾಟಕಕ್ಕೆ 2ನೇ ಗೆಲುವು

ಚೆನ್ನೈ: 14ನೇ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಗುಂಪು ಹಂತದಲ್ಲಿ ಸತತ 2ನೇ ಗೆಲುವು ಸಾಧಿಸಿ, ಕ್ವಾರ್ಟರ್‌ ಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಮಂಗಳವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಕರ್ನಾಟಕ 5-1 ಗೋಲುಗಳ ಗೆಲುವು ಸಾಧಿಸಿತು. ರಾಜ್ಯದ ಪರ 10ನೇ ನಿಮಿಷದಲ್ಲಿ ಸೂರ್ಯ ಎನ್‌ಎಂ, 19ನೇ ನಿಮಿಷದಲ್ಲಿ ಭರತ್‌ ಮಹಾಲಿಂಗಪ್ಪ, 41, 48ನೇ ನಿಮಿಷಗಳಲ್ಲಿ ಮೊಹಮದ್‌ ರಾಹೀಲ್‌ ಹಾಗೂ 59ನೇ ನಿಮಿಷದಲ್ಲಿ ಮಂಜೀತ್‌ ಗೋಲು ಬಾರಿಸಿದರು. ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ 10-0 ಗೋಲುಗಳಿಂದ ಗೆದ್ದಿದ್ದ ಕರ್ನಾಟಕ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗುರುವಾರ ತ್ರಿಪುರಾ ವಿರುದ್ಧ ಆಡಲಿದೆ.

Share this article