ಭಾರತದ ಹೆಮ್ಮೆಯ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಗರಿ

KannadaprabhaNewsNetwork | Updated : Jan 10 2024, 11:51 AM IST

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟೀಂ ಇಂಡಿಯಾ ವೇಗಿ ಮೊಹಮದ್‌ ಶಮಿ, 16ರ ಪ್ಯಾರಾ ಅಥ್ಲೀಟ್‌ ಶೀತಲ್‌ ಸೇರಿ 26 ಮಂದಿಗೆ ಅರ್ಜುನ ಪ್ರಶಸ್ತಿ ವಿತರಿಸಿದರು. ಜೀವಮಾನ ಸಾಧನೆಗಾಗಿ ಕೆಲ ಕೋಚ್‌ಗಳಿಗೆ ದ್ರೋಣಾಚಾರ್ಯ, ಧ್ಯಾನ್‌ಚಂದ್‌ ಪ್ರಶಸ್ತಿಯನ್ನೂ ನೀಡಲಾಯಿತು.

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ, ಜಾಗತಿಕ ಮಟ್ಟದಲ್ಲಿ ಭಾರತದ ತ್ರಿವರ್ಣ ಪತಾಕೆಯನ್ನು ಬಾನೆತ್ತರಕೆ ಹಾರಿಸಿದ ದೇಶದ ಹೆಮ್ಮೆಯ ಕ್ರೀಡಾಪಟುಗಳಿಗೆ ಮಂಗಳವಾರ ಪ್ರಶಸ್ತಿ ಗರಿ ತೊಡಿಸಲಾಯಿತು.

ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಮ್ಮೆಯ ಕ್ರೀಡಾಪಟುಗಳಿಗೆ ವಿವಿಧ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು.ಇಬ್ಬರು ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾದರೆ, 26 ಮಂದಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. 

ಐವರು ಸಾಮಾನ್ಯ ವಿಭಾಗದಲ್ಲಿ ದ್ರೋಣಾಚಾರ್ಯ, ಇತರ ಮೂವರು ಸಾಧಕರು ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದರು. ಜೀವಮಾನ ಸಾಧನೆಗಾಗಿ ಮೂವರಿಗೆ ಧ್ಯಾನ್‌ ಚಂದ್‌ ಪ್ರಶಸ್ತಿಯನ್ನೂ ಹಸ್ತಾಂತರಿಸಲಾಯಿತು. 

ವಿಶ್ವಕಪ್‌ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಮಿಂಚಿದ ಕ್ರಿಕೆಟಿಗ ಮೊಹಮದ್‌ ಶಮಿ, 2 ಕೈಗಳಲಿಲ್ಲದಿದ್ದರೂ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 3 ಪದಕ ಗೆದ್ದ ಆರ್ಚರಿ ತಾರೆ ಶೀತಲ್‌ ದೇವಿ, ಚೆಸ್‌ ಪಟು ಆರ್‌.ವೈಶಾಲಿ, ಶೂಟರ್‌ಗಳಾದ ಇಶಾ ಸಿಂಗ್‌, ಐಶ್ವರಿ ಪ್ರತಾಪ್‌ ತೋಮರ್‌, ಆರ್ಚರಿ ತಾರೆ 17ರ ಅದಿತಿ ಸ್ವಾಮಿ, ಅಥ್ಲೆಟಿಕ್ಸ್‌ ಸಾಧಕರಾದ ಲಾಂಗ್‌ಜಂಪ್‌ ಪಟು ಮುರಳಿ ಶ್ರೀಶಂಕರ್‌, ಓಟಗಾರ್ತಿ ಪಾರುಲ್‌ ಚೌಧರಿ, ಬಾಕ್ಸಿಂಗ್ ಪಟು ಮೊಹಮದ್‌ ಹುಸ್ಮುದ್ದೀನ್‌, ಯುವ ಕುಸ್ತಿಪಟು ಅಂತಿಮ್ ಪಂಘಲ್‌, ಕಬಡ್ಡಿ ಸ್ಟಾರ್‌ ಪವನ್‌ ಶೆರಾವತ್‌, ಹಾಕಿ ಪಟು ಸುಶೀಲಾ ಚಾನು, ಟೇಬಲ್‌ ಟೆನಿಸ್‌ನ ಐಹಿಕಾ ಮುಖರ್ಜಿ, ಅಂಧ ಕ್ರಿಕೆಟ್‌ ತಾರೆ ಅಜಯ್‌ ಕುಮಾರ್‌ ರೆಡ್ಡಿಗೆ ರಾಷ್ಟ್ರಪತಿ ಮುರ್ಮು ಅರ್ಜುನ ಪ್ರಶಸ್ತಿಯನ್ನು ನೀಡಿದರು. 

ಇದೇ ವೇಳೆ ಕಬಡ್ಡಿ ಕೋಚ್‌ ಇ. ಭಾಸ್ಕರನ್‌, ಗಾಲ್ಫ್‌ ಕೋಚ್‌ ಜಸ್ಕೀರತ್‌ ಸಿಂಗ್‌, ಟೇಬಲ್‌ ಟೆನಿಸ್‌ ಕೋಚ್‌ ಜಯಂತ ಕುಮಾರ್‌ ಪುಶಿಲಾಲ್‌ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದರು. 

ಇನ್ನು ಬ್ಯಾಡ್ಮಿಂಟನ್‌ನ ಮಂಜುಶಾ ಕಾನ್ವರ್‌, ಹಾಕಿಯ ವಿನೀತ್‌ ಕುಮಾರ್‌ ಶರ್ಮಾ, ಕಬಡ್ಡಿಯಲ್ಲಿ ಕವಿತಾ ಸೆಲ್ವರಾಜ್‌ ಅವರು ಧ್ಯಾನ್‌ಚಂದ್‌ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು. 

ಮುಂದೂಡಿಕೆ: ಸಾಮಾನ್ಯವಾಗಿ ಹಾಕಿ ದಂತಕತೆ ಮೇಜರ್‌ ಧ್ಯಾನ್‌ಚಂದ್‌ ಅವರ ಜನ್ಮ ದಿನಾಚರಣೆ ಪ್ರಯುಕ್ತ ಆಗಸ್ಟ್‌ 29ಕ್ಕೆ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆದರೆ 2023ರಲ್ಲಿ ಏಷ್ಯನ್‌ ಗೇಮ್ಸ್‌ನ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ನಿಟ್ಟಿನಲ್ಲಿ ಪ್ರಶಸ್ತಿ ಘೋಷಣೆ, ಪ್ರದಾನ ಕಾರ್ಯಕ್ರಮ ಮುಂದೂಡಲಾಗಿತ್ತು. ಇತ್ತೀಚೆಗಷ್ಟೇ ಕ್ರೀಡಾ ಸಚಿವಾಲಯ ಕ್ರೀಡಾ ಸಾಧಕರ ಹೆಸರನ್ನು ಪ್ರಕಟಿಸಿತ್ತು. 

ಸಾತ್ವಿಕ್‌-ಚಿರಾಗ್‌ ಗೈರು: ಈ ಬಾರಿ ಖೇಲ್‌ ರತ್ನ ಪ್ರಶಸ್ತಿಗೆ ಬ್ಯಾಡ್ಮಿಂಟನ್‌ ತಾರೆಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಆಯ್ಕೆಯಾಗಿದ್ದರು. ಆದರೆ ಇಬ್ಬರೂ ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಆಡುತ್ತಿರುವ ಕಾರಣ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾದರು. ಅರ್ಜುನ ಪ್ರಶಸ್ತಿ ಸ್ವೀಕರಿಸಬೇಕಿದ್ದ ಶೂಟರ್‌ ಇಶಾ ಸಿಂಗ್‌ ಅವರು ಏಷ್ಯನ್‌ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾಗಿಯಾಗಿರುವುದರಿಂದ ಸಮಾರಂಭದಲ್ಲಿ ಹಾಜರಿರಲಿಲ್ಲ.

Share this article