ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ ಕುಂಬ್ಳೆಯನ್ನು ಹಿಂದಿಕ್ಕಿದ ಅಶ್ವಿನ್‌

KannadaprabhaNewsNetwork |  
Published : Feb 26, 2024, 01:33 AM ISTUpdated : Feb 26, 2024, 12:28 PM IST
ashwin 1

ಸಾರಾಂಶ

ಭಾರತದ ಸ್ಪಿನ್‌ ಮಾಂತ್ರಿಕ ಆರ್‌.ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ರಾಂಚಿ: ಭಾರತದ ಸ್ಪಿನ್‌ ಮಾಂತ್ರಿಕ ಆರ್‌.ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ದಿಗ್ಗಜ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ.

4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ 2ನೇ ಇನ್ನಿಂಗ್ಸ್‌ನಲ್ಲಿ ಬೆನ್‌ ಡಕೆಟ್‌ ವಿಕೆಟ್‌ ಪಡೆಯುವುದರೊಂದಿಗೆ ಅಶ್ವಿನ್‌, ಭಾರತದಲ್ಲಿ ಅತಿ ಹೆಚ್ಚು ವಿಕೆಟ್‌ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. 

ಅಶ್ವಿನ್‌ ಸದ್ಯ 354 ವಿಕೆಟ್‌ ಪಡೆದಿದ್ದು, 350 ವಿಕೆಟ್‌ ಪಡೆದಿರುವ ಅನಿಲ್ ಕುಂಬ್ಳೆ 2ನೇ ಸ್ಥಾನದಲ್ಲಿದ್ದಾರೆ. ಹರ್ಭಜನ್‌ ಸಿಂಗ್‌ 265, ಕಪಿಲ್‌ ದೇವ್‌ 219 ವಿಕೆಟ್‌ ಪಡೆದಿದ್ದಾರೆ.

ಇನ್ನು, ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್‌ ಗೊಂಚಲು ಪಡೆದವರ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಅವರು ಅನಿಲ್‌ ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ. 99ನೇ ಟೆಸ್ಟ್‌ ಆಡುತ್ತಿರುವ ಅಶ್ವಿನ್ ಭಾನುವಾರ 5 ವಿಕೆಟ್‌ ಕಿತ್ತರು. 

ಇದು ಅವರ 35ನೇ 5+ ವಿಕೆಟ್‌. ಕುಂಬ್ಳೆ 132 ಪಂದ್ಯಗಳಲ್ಲಿ 35 ಬಾರಿ ಈ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ಬಾರಿ 5+ ವಿಕೆಟ್ ಕಿತ್ತವರ ಪಟ್ಟಿಯಲ್ಲಿ ಲಂಕಾದ ಮುರಳೀಧರನ್‌(67 ಬಾರಿ) ಅಗ್ರಸ್ಥಾನದಲ್ಲಿದ್ದಾರೆ. 

ಶೇನ್‌ ವಾರ್ನ್‌ 37, ರಿಚರ್ಡ್‌ ಹಾರ್ಡ್ಲೀ 36 ಬಾರಿ ಈ ಸಾಧನೆ ಮಾಡಿದ್ದಾರೆ.ಏಷ್ಯಾದಲ್ಲಿ 400+ ಟೆಸ್ಟ್ ವಿಕೆಟ್‌ ಕಿತ್ತ 3ನೇ ಬೌಲರ್‌ ಎಂಬ ಹೆಗ್ಗಳಿಕೆಗೂ ಅಶ್ವಿನ್‌ ಪಾತ್ರರಾಗಿದ್ದಾರೆ. ಮುರಳೀಧರನ್‌ 612, ಕುಂಬ್ಳೆ 419 ವಿಕೆಟ್‌ ಪಡೆದಿದ್ದಾರೆ.

ತವರಲ್ಲಿ 350 ವಿಕೆಟ್‌: ಅಶ್ವಿನ್‌ 5ನೇ ಬೌಲರ್‌
ತವರಿನ ಟೆಸ್ಟ್‌ನಲ್ಲಿ 350 ವಿಕೆಟ್‌ ಕಿತ್ತ 5ನೇ ಬೌಲರ್‌ ಎಂಬ ಖ್ಯಾತಿಗೆ ಅಶ್ವಿನ್‌ ಪಾತ್ರರಾಗಿದ್ದಾರೆ. ಮುತ್ತಯ್ಯ ಮುರಳೀಧರನ್‌ ಶ್ರೀಲಂಕಾದಲ್ಲಿ 493, ಜೇಮ್ಸ್‌ ಆ್ಯಂಡರ್‌ಸನ್‌ ಹಾಗೂ ಸ್ಟುವರ್ಟ್‌ ಬ್ರಾಡ್‌ ಇಂಗ್ಲೆಂಡ್‌ನಲ್ಲಿ ಕ್ರಮವಾಗಿ 434 ಹಾಗೂ 398 ವಿಕೆಟ್‌ಗಳನ್ನು ಪಡೆದಿದ್ದಾರೆ.

02ನೇ ಸ್ಥಾನ: ತವರಿನ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 5+ ವಿಕೆಟ್‌ ಕಿತ್ತವರ ಪಟ್ಟಿಯಲ್ಲಿ ಅಶ್ವಿನ್‌ 2ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದಲ್ಲಿ 27 ಬಾರಿ ಈ ಸಾಧನೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ 45 ಬಾರಿ 5+ ವಿಕೆಟ್‌ ಕಿತ್ತಿರುವ ಮುರಳೀಧರನ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌