ಮೂರು ಸೋಲಿನ ಬಳಿಕ ಕೊನೆಗೂ ಗೆದ್ದ ಮುಂಬೈ ಇಂಡಿಯನ್ಸ್‌

KannadaprabhaNewsNetwork | Updated : Apr 08 2024, 04:40 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ ಮುಂಬೈಗೆ 29 ರನ್‌ ಜಯ. ರೋಹಿತ್‌, ಇಶಾನ್‌, ಶೆಫರ್ಡ್‌, ಡೇವಿಡ್‌ ಆರ್ಭಟ, ಮುಂಬೈ 5 ವಿಕೆಟ್‌ಗೆ 234. ಸ್ಟಬ್ಸ್‌, ಪೃಥ್ವಿ ಶಾ ಸ್ಫೋಟಿಸಿದ್ರೂ ಡೆಲ್ಲಿಗೆ ಒಲಿಯದ ವಿಜಯಲಕ್ಷ್ಮಿ. 20 ಓವರಲ್ಲಿ 8 ವಿಕೆಟ್‌ಗೆ 205 ರನ್‌. ರಿಷಭ್‌ ಪಡೆಗೆ ಟೂರ್ನಿಯ 4ನೇ ಸೋಲು

ಮುಂಬೈ: ಹ್ಯಾಟ್ರಿಕ್‌ ಸೋಲಿನೊಂದಿಗೆ 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಭಿಯಾನ ಆರಂಭಿಸಿದ್ದ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಬ್ಯಾಟರ್‌ಗಳ ಸ್ಫೋಟಕ ಆಟದ ನೆರವಿನಿಂದ ಭಾನುವಾರದ ಮೊದಲ ಪಂದ್ಯದಲ್ಲಿ ಮುಂಬೈಗೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 29 ರನ್‌ ಗೆಲುವು ಲಭಿಸಿತು. 

ಡೆಲ್ಲಿಗಿದು 5 ಪಂದ್ಯಗಳಲ್ಲಿ 4ನೇ ಸೋಲು.ಮೊದಲು ಬ್ಯಾಟ್‌ ಮಾಡಿದ ಮುಂಬೈ 5 ವಿಕೆಟ್‌ ನಷ್ಟಕ್ಕೆ 234 ರನ್‌ ಕಲೆಹಾಕಿತು. ಇದು ಯಾವುದೇ ಆಟಗಾರ ವೈಯಕ್ತಿಕ ಅರ್ಧಶತಕ ಗಳಿಸದೆ ತಂಡವೊಂದು ಸೇರಿಸಿದ ಗರಿಷ್ಠ ಮೊತ್ತ. ದೊಡ್ಡ ಮೊತ್ತ ನೋಡಿಯೇ ಕಂಗಾಲಾದ ಡೆಲ್ಲಿ ಕೆಲ ಹೋರಾಟದ ಹೊರತಾಗಿಯೂ 8 ವಿಕೆಟ್‌ಗೆ 205 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಪವರ್‌-ಪ್ಲೇನಲ್ಲಿ ದೊಡ್ಡ ಮೊತ್ತ ಸೇರಿಸಬೇಕಿದ್ದ ತಂಡ ಕಲೆಹಾಕಿದ್ದು 46 ರನ್‌. ವಾರ್ನರ್‌ 10 ರನ್‌ಗೆ ವಿಕೆಟ್‌ ಒಪ್ಪಿಸಿದ್ದರಿಂದ ಬಳಿಕ ಬ್ಯಾಟರ್‌ಗಳು ಒತ್ತಡಕ್ಕೊಳಗಾದರು. ಈ ನಡುವೆ ಪೃಥ್ವಿ ಶಾ 66 ರನ್‌ ಸಿಡಿಸಿ ಔಟಾದರೆ, ಅಭಿಷೇಕ್‌ ಪೊರೆಲ್‌ 31 ಎಸೆತದಲ್ಲಿ 41 ರನ್‌ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಸ್ಟಬ್ಸ್‌ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 71 ರನ್‌ ಚಚ್ಚಿದರೂ ಪಂದ್ಯ ಅದಾಗಲೇ ಮುಂಬೈ ಪಾಲಾಗಿತ್ತು. 

ಕೋಟ್ಜೀ 4 ವಿಕೆಟ್‌ ಕಿತ್ತರೆ, ಬೂಮ್ರಾ 4 ಓವರಲ್ಲಿ 22 ರನ್‌ಗೆ 2 ವಿಕೆಟ್‌ ಕಬಳಿಸಿದರು.ಸ್ಫೋಟಕ ಬ್ಯಾಟಿಂಗ್‌: 3 ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಈ ಪಂದ್ಯದಲ್ಲಿ ಸ್ಪಷ್ಟ ಗುರಿಯೊಂದಿಗೆ ಕಣಕ್ಕಿಳಿದಿತ್ತು. ರೋಹಿತ್‌ ಶರ್ಮಾ(27 ಎಸೆತದಲ್ಲಿ 49), ಇಶಾನ್‌ ಕಿಶನ್‌(23 ಎಸೆತದಲ್ಲಿ 42) ಆರಂಭದಲ್ಲೇ ಡೆಲ್ಲಿ ಬೌಲರ್‌ಗಳನ್ನು ಚೆಂಡಾಡಿದರು. ಆದರೆ ಪವರ್‌-ಪ್ಲೇಗೆ 75 ರನ್‌ ಗಳಿಸಿದ್ದ ತಂಡ ಬಳಿಕ ಕುಸಿಯಿತು. ನಂತರದ 9 ಓವರ್‌ಗಳಲ್ಲಿ ತಂಡ 63 ರನ್‌ ಸೇರಿಸಿ 4 ವಿಕೆಟ್‌ ಕಳೆದುಕೊಂಡಿತು. ಆದರೆ ರೊಮಾರಿಯೊ ಶೆಫರ್ಡ್‌ ಕೊನೆ ಓವರಲ್ಲಿ 32 ರನ್‌ ಸೇರಿದಂತೆ ಒಟ್ಟು 10 ಎಸೆತಗಳಲ್ಲಿ 39 ರನ್‌ ಚಚ್ಚಿದರು. ಟಿಮ್‌ ಡೇವಿಡ್‌ 21 ಎಸೆತಕ್ಕೆ 45 ರನ್ ಸಿಡಿಸಿ ತಂಡವನ್ನು 230ರ ಗಡಿ ದಾಟಿಸಿದರು. 

ಸ್ಕೋರ್: ಮುಂಬೈ 234/5(ರೋಹಿತ್‌ 49, ಡೇವಿಡ್‌ 45*, ಇಶಾನ್‌ 42, ಶೆಫರ್ಡ್‌ 39*, ಅಕ್ಷರ್‌ 2-35), ಡೆಲ್ಲಿ 205/8 (ಸ್ಟಬ್ಸ್‌ 71*, ಪೃಥ್ವಿ 66, ಕೋಟ್ಜೀ 4-34) ಪಂದ್ಯಶ್ರೇಷ್ಠ: ರೊಮಾರಿಯೊ ಶೆಫರ್ಡ್‌

150ನೇ ಜಯ: ಮುಂಬೈ ತಂಡ ಟಿ20 ಕ್ರಿಕೆಟ್‌ನಲ್ಲಿ 150 ಗೆಲುವು ಸಾಧಿಸಿದ ಮೊದಲ ತಂಡ. ಚೆನ್ನೈ 148 ಪಂದ್ಯ ಗೆದ್ದಿದೆ.

01ನೇ ಆಟಗಾರ: ಟಿ20 ಕ್ರಿಕೆಟ್‌ನಲ್ಲಿ 250 ಪಂದ್ಯಗಳಲ್ಲಿ ಗೆದ್ದ ಭಾರತದ ಮೊದಲ ಕ್ರಿಕೆಟಿಗ ರೋಹಿತ್‌ ಶರ್ಮಾ.

04ನೇ ಆಟಗಾರ: ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ 100 ಕ್ಯಾಚ್‌ ಪಡೆದರು. ಈ ಸಾಧನೆ ಮಾಡಿದ 4ನೇ ಕ್ರಿಕೆಟಿಗ.

03ನೇ ಆಟಗಾರ: ಐಪಿಎಲ್‌ನಲ್ಲಿ 2 ತಂಡಗಳ ವಿರುದ್ಧ ತಲಾ 1000+ ರನ್‌ ಗಳಿಸಿದ 3ನೇ ಬ್ಯಾಟರ್‌ ರೋಹಿತ್‌. ಕೋಲ್ಕತಾ ವಿರುದ್ಧ ಈ ಸಾಧನೆ ಮಾಡಿದ್ದಾರೆ.

Share this article