ಮುಂಬೈ: 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಿರ್ಣಾಯಕ ಹಂತ ತಲುಪಿದ್ದು, ಕೇವಲ 2 ಪಂದ್ಯ ಬಾಕಿ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ನೇರವಾಗಿ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಸುತ್ತಿನಲ್ಲಿ ತನ್ನ ಎದುರಾಳಿ ಯಾರು ಎಂದು ಕಾತರದಿಂದ ಕಾಯುತ್ತಿದೆ.
ಮತ್ತೊಂದು ಫೈನಲಿಸ್ಟ್ ಯಾರು ಎನ್ನುವುದನ್ನು ನಿರ್ಧರಿಸಿಲು ಗುರುವಾರ ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಳೆದೆರಡೂ ಆವೃತ್ತಿಗಳಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಗುಜರಾತ್ ಜೈಂಟ್ಸ್ ಸೆಣಸಲಿವೆ.
ಗುಜರಾತ್ ವಿರುದ್ಧ ಡಬ್ಲ್ಯುಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲೂ ಮುಂಬೈ ಜಯ ಸಾಧಿಸಿದ್ದು, ತನ್ನ ಅಜೇಯ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.
ವಿಂಡೀಸ್ ಆಲ್ರೌಂಡರ್ ಹೇಲಿ ಮ್ಯಾಥ್ಯೂಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಆಕರ್ಷಕ ಸ್ಪಿನ್ ದಾಳಿ ಮೂಲಕ ಮುಂಬೈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇನ್ನು, ನಥಾಲಿ ಸ್ಕೀವರ್ ಬ್ರಂಟ್, ಮುಂಬೈನ ರನ್ ಮಷಿನ್ ಎನಿಸಿದ್ದು 8 ಪಂದ್ಯಗಳಿಂದ ಬರೋಬ್ಬರಿ 416 ರನ್ ಕಲೆಹಾಕಿದ್ದು, ಫೈನಲ್‌ನಲ್ಲಿ ನಥಾಲಿಯನ್ನು ಕಟ್ಟಿಹಾಕದಿದ್ದರೆ ಗುಜರಾತ್‌ಗೆ ಸೋಲು ಕಟ್ಟಿಟ್ಟ ಬುತ್ತಿ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಫಿನಿಶರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಬೇಕಿದ್ದು, ಬೌಲರ್‌ಗಳ ನಿರ್ವಹಣೆಯಲ್ಲೂ ಚಾಕಚಕ್ಯತೆ ಪ್ರದರ್ಶಿಸಬೇಕಿದೆ.
ಮತ್ತೊಂದೆಡೆ ಮೊದಲೆರಡು ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಗುಜರಾತ್ ಜೈಂಟ್ಸ್‌ಗೆ ಆಶ್ಲೆ ಗಾರ್ಡ್ನರ್‌ರ ನಾಯಕತ್ವ ಹೊಸ ಹುರುಪನ್ನು ನೀಡಿದೆ. ಗಾರ್ಡ್ನರ್ ನಾಯಕತ್ವದ ಜೊತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಮಿಂಚುತ್ತಿದ್ದಾರೆ.
ಬೆಥ್ ಮೂನಿ, ಹರ್ಲೀನ್ ಡಿಯೋಲ್, ದಿಯ್ಯಾಂಡ್ರಾ ಡಾಟಿನ್, ಫೀಬಿ ಲಿಚ್‌ಫೀಲ್ಡ್ , ಕಾಶ್ವೀ ಗೌತಮ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ. ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್