ಗುಜರಾತ್‌ನ ಹೊರದಬ್ಬಿ ಮುಂಬೈ ಕ್ವಾಲಿಫೈಯರ್‌ಗೆ

Published : May 31, 2025, 10:58 AM ISTUpdated : May 31, 2025, 10:59 AM IST
Mumbai Indians Gujarat Titans IPL 2025 Eliminator

ಸಾರಾಂಶ

ರನ್‌ ಮಳೆ ಸುರಿದ ಈ ಬಾರಿಯ ಎಲಿಮಿನೇಟರ್‌ನಲ್ಲಿ ಗುಜರಾತ್‌ ಟೈಟಾನ್ಸ್‌ನ 20 ರನ್‌ಗಳಿಂದ ಬಗ್ಗುಬಡಿದ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ಮತ್ತೊಂದು ಕಪ್‌ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ

ಮುಲ್ಲಾನ್‌ಪುರ: ರನ್‌ ಮಳೆ ಸುರಿದ ಈ ಬಾರಿಯ ಎಲಿಮಿನೇಟರ್‌ನಲ್ಲಿ ಗುಜರಾತ್‌ ಟೈಟಾನ್ಸ್‌ನ 20 ರನ್‌ಗಳಿಂದ ಬಗ್ಗುಬಡಿದ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ಮತ್ತೊಂದು ಕಪ್‌ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡ 18ನೇ ಆವೃತ್ತಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್‌-2 ಪ್ರವೇಶಿಸಿದ್ದು, ಟ್ರೋಫಿ ಗೆಲ್ಲಲು ಇನ್ನೆರಡೇ ಮೆಟ್ಟಿಲು ಹತ್ತಬೇಕಿದೆ.

ಟಾಸ್‌ ಗೆದ್ದು ಮುಂಬೈ ಬ್ಯಾಟಿಂಗ್‌ ಆಯ್ಕೆ ಮಾಡಿ ಅಚ್ಚರಿ ಮೂಡಿಸಿತು. ಆದರೆ ತಂಡದ ಸ್ಫೋಟಕ ಆಟ ನಾಯಕನ ನಿರ್ಧಾರ ಸಮರ್ಥಿಸುವಂತಿತ್ತು. 20 ಓವರ್‌ಗಳಲ್ಲಿ ತಂಡ 5 ವಿಕೆಟ್‌ಗೆ 228 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಗುಜರಾತ್‌, ಒಂದು ಹಂತದಲ್ಲಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಕೊನೆಯಲ್ಲಿ ಎಡವಿದ ತಂಡ 6 ವಿಕೆಟ್‌ಗೆ 208 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.ಮೊದಲ ಓವರ್‌ನಲ್ಲೇ ನಾಯಕ ಗಿಲ್‌(01) ಔಟಾದ ಬಳಿಕ, ಸಾಯಿ ಸುದರ್ಶನ್‌-ಕುಸಾಲ್‌ ಮೆಂಡಿಸ್‌(20) ಪವರ್-ಪ್ಲೇ ಅಂತ್ಯಕ್ಕೆ ಮೊತ್ತವನ್ನು 66ಕ್ಕೆ ಏರಿಸಿದರು. 7ನೇ ಓವರ್‌ನಲ್ಲಿ ಮೆಂಡಿಸ್‌ ಹಿಟ್‌ ವಿಕೆಟ್‌ ಆಗಿ ನಿರ್ಗಮಿಸಿದರು. 3ನೇ ವಿಕೆಟ್‌ಗೆ ಸುದರ್ಶನ್‌-ವಾಷಿಂಗ್ಟನ್‌ ಸುಂದರ್‌ 84 ರನ್‌ ಸೇರಿಸಿ, ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹೊಡಿಬಡಿ ಆಟವಾಡಿದ ಸುಂದರ್‌ 24 ಎಸೆತಕ್ಕೆ 48 ರನ್‌ ಸಿಡಿಸಿದರು. 49 ಎಸೆತಗಳಲ್ಲಿ 80 ರನ್‌ ಸಿಡಿಸಿದ ಸುದರ್ಶನ್‌, 16ನೇ ಓವರ್‌ನಲ್ಲಿ ಗ್ಲೀಸನ್‌ ಎಸೆತದಲ್ಲಿ ಬೌಲ್ಡ್‌ ಆಗುವುದರೊಂದಿಗೆ ತಂಡ ಸಂಕಷ್ಟಕ್ಕೊಳಗಾಯಿತು. ರುಥರ್‌ಫೋರ್ಡ್‌(24), ತೆವಾಟಿಯಾ(16)ಗೆ ತಂಡವನ್ನು ಗೆಲ್ಲಿಸಲಾಗಲಿಲ್ಲ.

ರೋಹಿತ್‌ ಅಬ್ಬರ: ಇದಕ್ಕೂ ಮುನ್ನ ಗುಜರಾತ್‌ನ ಕಳಪೆ ಫೀಲ್ಡಿಂಗ್‌ನಿಂದಾಗಿಯೇ ಮುಂಬೈ ದೊಡ್ಡ ಮೊತ್ತ ಕಲೆಹಾಕಿತು. 2 ಬಾರಿ ಕ್ಯಾಚ್‌ ಕೈಬಿಟ್ಟಿದ್ದರಿಂದ ರೋಹಿತ್‌ 50 ಎಸೆತಕ್ಕೆ 81 ರನ್‌ ಗಳಿಸಿದರು. ಅವರು ಮೊದಲ ವಿಕೆಟ್‌ಗೆ ಬೇರ್‌ಸ್ಟೋವ್‌ ಜೊತೆ 84 ರನ್‌ ಜೊತೆಯಾಟವಾಡಿದರು. ಬೇರ್‌ಸ್ಟೋವ್‌ 22 ಎಸೆತಕ್ಕೆ 47 ರನ್‌ ಗಳಿಸಿದರು. ಸೂರ್ಯಕುಮಾರ್‌ 33, ತಿಲಕ್‌ ವರ್ಮಾ 25, ಹಾರ್ದಿಕ್ ಪಾಂಡ್ಯ 22 ರನ್‌ ಕೊಡುಗೆ ನೀಡಿದರು.

ಸ್ಕೋರ್: ಮುಂಬೈ 20 ಓವರಲ್ಲಿ 228/5 (ರೋಹಿತ್‌ 81, ಬೇರ್‌ಸ್ಟೋವ್‌ 47, ಕಿಶೋರ್‌ 2-42), ಗುಜರಾತ್‌ 20 ಓವರಲ್ಲಿ 208/6 (ಸುದರ್ಶನ್‌ 80, ವಾಷಿಂಗ್ಟನ್‌ 48, ಬೌಲ್ಟ್‌ 2-56)

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮಾ

ಪಂಜಾಬ್‌-ಮುಂಬೈ

ನಾಳೆ ಕ್ವಾಲಿಫೈಯರ್‌

ಭಾನುವಾರ ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್‌-2 ಪಂದ್ಯ ನಡೆಯಲಿದೆ. ಕ್ವಾಲಿಫೈಯರ್‌-1ರಲ್ಲಿ ಸೋತ ಪಂಜಾಬ್‌ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ಮುಂಬೈ ತಂಡಗಳು ಸೆಣಸಾಡಲಿವೆ. ಅದರಲ್ಲಿ ಗೆದ್ದ ತಂಡ ಜೂ.3ರಂದು ಅಹಮದಾಬಾದ್‌ನಲ್ಲಿ ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಆಡಲಿದೆ.

ರೋಹಿತ್‌ 300 ಸಿಕ್ಸರ್

ಐಪಿಎಲ್‌ನಲ್ಲಿ ರೋಹಿತ್‌ 300 ಸಿಕ್ಸರ್‌ ಬಾರಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ, ಒಟ್ಟಾರೆ 2ನೇ ಕ್ರಿಕೆಟಿಗ. ಕ್ರಿಸ್‌ ಗೇಲ್ 357 ಸಿಕ್ಸರ್‌ ಸಿಡಿಸಿದ್ದಾರೆ.

 

ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ 300 ಸಿಕ್ಸರ್‌!

ಲೀಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ, ವಿಶ್ವದ 2ನೇ ಕ್ರಿಕೆಟಿಗ । 357 ಸಿಕ್ಸರ್‌ನೊಂದಿಗೆ ಕ್ರಿಸ್‌ ಗೇಲ್‌ಗೆ ಅಗ್ರಸ್ಥಾನ

ಮುಲ್ಲಾನ್‌ಪುರ: ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರು ಟೂರ್ನಿಯಲ್ಲಿ 300 ಸಿಕ್ಸರ್‌ಗಳ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಕ್ರವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ರೋಹಿತ್‌ ಈ ಸಾಧನೆ ಮಾಡಿದರು. ತಾವು 3 ಹಾಗೂ 12 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನದ ಲಾಭ ಪಡೆದ ರೋಹಿತ್‌, 50 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 81 ರನ್‌ ಬಾರಿಸಿದರು. ಈ ಮೂಲಕ ಐಪಿಎಲ್‌ನ ಸಿಕ್ಸರ್‌ ಗಳಿಕೆಯನ್ನು 302ಕ್ಕೆ ಹೆಚ್ಚಿಸಿದರು. ಅವರು 271 ಪಂದ್ಯಗಳನ್ನಾಡಿದ್ದಾರೆ. ರೋಹಿತ್‌ಗಿಂತ ಹೆಚ್ಚು ಸಿಕ್ಸರ್‌ ಬಾರಿಸಿದ ಮತ್ತೋರ್ವ ಆಟಗಾರ ಕ್ರಿಸ್‌ ಗೇಲ್‌. ವಿಂಡೀಸ್‌ ಬ್ಯಾಟರ್‌ 142 ಪಂದ್ಯಗಳಲ್ಲಿ 357 ಸಿಕ್ಸರ್‌ ಸಿಡಿಸಿದ್ದಾರೆ.

ಉಳಿದಂತೆ ಆರ್‌ಸಿಬಿ ಬ್ಯಾಟರ್‌ ವಿರಾಟ್‌ ಕೊಹ್ಲಿ 291, ಚೆನ್ನೈನ ಎಂ.ಎಸ್‌.ಧೋನಿ 264, ಆರ್‌ಸಿಬಿ ಮಾಜಿ ಬ್ಯಾಟರ್‌ ಎಬಿ ಡಿ ವಿಲಿಯರ್ಸ್‌ 251, ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ 236, ವೆಸ್ಟ್‌ಇಂಡೀಸ್‌ನ ಆ್ಯಂಡ್ರೆ ರಸೆಲ್‌ ಹಾಗೂ ಕೀರನ್‌ ಪೊಲ್ಲಾರ್ಡ್‌ ತಲಾ 223 ಸಿಕ್ಸರ್‌ ಬಾರಿಸಿದ್ದಾರೆ.

ಐಪಿಎಲ್‌ನ ಗರಿಷ್ಠ ಸಿಕ್ಸರ್‌

ಆಟಗಾರ ಪಂದ್ಯ ಸಿಕ್ಸರ್‌

ಕ್ರಿಸ್‌ ಗೇಲ್‌ 142 357

ರೋಹಿತ್‌ 271 302

ವಿರಾಟ್‌ 266 291

ಧೋನಿ 278 264

ವಿಲಿಯರ್ಸ್‌ 184 251

ಐಪಿಎಲ್‌ ಪ್ಲೇ-ಆಫ್‌ನಲ್ಲಿ

2ನೇ ಗರಿಷ್ಠ ಸ್ಕೋರ್‌!

ಮುಂಬೈ ತಂಡ ಈ ಪಂದ್ಯದಲ್ಲಿ 5 ವಿಕೆಟ್‌ಗೆ 228 ರನ್‌ ಕಲೆಹಾಕಿತು. ಇದು ಐಪಿಎಲ್‌ನ ಪ್ಲೇ-ಆಫ್‌ ಪಂದ್ಯಗಳಲ್ಲೇ 2ನೇ ಗರಿಷ್ಠ ಸ್ಕೋರ್‌. 2023ರಲ್ಲಿ ಮುಂಬೈ ವಿರುದ್ಧ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಗುಜರಾತ್‌ 3 ವಿಕೆಟ್‌ಗೆ 233 ರನ್‌ ಗಳಿಸಿದ್ದು ಈಗಲೂ ದಾಖಲೆ.

15ನೇ ಪಂದ್ಯದಲ್ಲೂ

ಸೂರ್ಯ 25+ ರನ್‌!

ಈ ಬಾರಿ ಐಪಿಎಲ್‌ನ 15ನೇ ಪಂದ್ಯದಲ್ಲೂ ಸೂರ್ಯಕುಮಾರ್‌ ಯಾದವ್‌ 25ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಇದು ಪುರುಷರ ಟಿ20 ಕ್ರಿಕೆಟ್‌ನ ಯಾವುದೇ ಲೀಗ್‌ನಲ್ಲಿ ಗರಿಷ್ಠ. 2018ರ ಐಪಿಎಲ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಹಾಗೂ 2023ರಲ್ಲಿ ಶುಭ್‌ಮನ್‌ ಗಿಲ್‌ ತಲಾ 13 ಬಾರಿ ಈ ಸಾಧನೆ ಮಾಡಿದ್ದರು.

33 ಸಿಕ್ಸರ್‌ ನೀಡಿದ

ರಶೀದ್‌: ದಾಖಲೆ!

ರಶೀದ್‌ ಖಾನ್‌ ಈ ಬಾರಿ ಐಪಿಎಲ್‌ನಲ್ಲಿ ಒಟ್ಟು 33 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದು ಐಪಿಎಲ್‌ ಆವೃತ್ತಿಯೊಂದರಲ್ಲಿ ಯಾವುದೇ ಬೌಲರ್‌ ಬಿಟ್ಟುಕೊಟ್ಟ ಗರಿಷ್ಠ ಸಿಕ್ಸರ್‌. 2022ರಲ್ಲಿ ಆರ್‌ಸಿಬಿಯಲ್ಲಿದ್ದ ಮೊಹಮ್ಮದ್‌ ಸಿರಾಜ್‌ 31 ಸಿಕ್ಸರ್‌ ಚಚ್ಚಿಸಿಕೊಂಡಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!