ರಣಜಿಯಲ್ಲಿ 42ನೇ ಪ್ರಶಸ್ತಿ ಗೆಲ್ಲುವತ್ತ ಮುಂಬೈ ದಿಟ್ಟ ಹೆಜ್ಜೆ

KannadaprabhaNewsNetwork | Published : Mar 13, 2024 2:04 AM

ಸಾರಾಂಶ

ರಣಜಿ ಫೈನಲ್‌ನ 2ನೇ ಇನ್ನಿಂಗ್‌ನಲ್ಲಿ ಮುಂಬೈ 418ಕ್ಕೆ ಆಲೌಟಾಯಿತು. ಮುಶೀರ್ ಖಾನ್ ಸೆಂಚುರಿ, ಶ್ರೇಯಸ್ ಅಯ್ಯರ್ 95 ರನ್ ಗಳಿಸಿದರು. 538 ರನ್ ಗುರಿ ಪಡೆದ ವಿದರ್ಭ 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.

ಮುಂಬೈ: ಪವಾಡ ಘಟಿಸದಿದ್ದರೆ ಮುಂಬೈ ತಂಡ 42ನೇ ಬಾರಿ ರಣಜಿ ಟ್ರೋಫಿ ಚಾಂಪಿಯನ್‌ ಎನಿಸಿಕೊಳ್ಳುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಂಬೈ ತಂಡ ವಿದರ್ಭ ವಿರುದ್ಧ ಅಧಿಪತ್ಯ ಮೆರೆದಿದ್ದು, ಪ್ರಶಸ್ತಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ವಿದರ್ಭದ ಗೆಲುವಿಗೆ ಬರೋಬ್ಬರಿ 538 ರನ್ ಗುರಿ ನೀಡಿರುವ ಮುಂಬೈ ಸುಲಭವಾಗಿ ಪಂದ್ಯ ಗೆಲ್ಲುವ ಕಾತರದಲ್ಲಿದೆ.

2ನೇ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 141 ರನ್‌ ಗಳಿಸಿದ್ದ ಮುಂಬೈ ಮಂಗಳವಾರವೂ ಬ್ಯಾಟಿಂಗ್‌ನಲ್ಲಿ ಪರಾಕ್ರಮ ಮೆರೆದು 418 ರನ್‌ ಕಲೆಹಾಕಿತು. ಟೂರ್ನಿಯುದ್ದಕ್ಕೂ ರನ್ ಬರ ಎದುರಿಸುತ್ತಿದ್ದ ನಾಯಕ ಅಜಿಂಕ್ಯಾ ರಹಾನೆ 73 ರನ್‌ ಗಳಿಸಿ ಔಟಾದ ಬಳಿಕ 19ರ ಮುಶೀರ್‌ ಖಾನ್‌ ಹಾಗೂ ಅನುಭವಿ ಶ್ರೇಯಸ್‌ ಅಯ್ಯರ್‌ ಜೊತೆಗೂಡಿ ವಿದರ್ಭ ಬೌಲರ್‌ಗಳನ್ನು ಚೆಂಡಾಡಿದರು. ಈ ಜೋಡಿ 4ನೇ ವಿಕೆಟ್‌ಗೆ 168 ರನ್‌ ಸೇರಿಸಿತು.

95 ರನ್‌ ಗಳಿಸಿದ್ದ ಶ್ರೇಯಸ್‌ ಶತಕದ ಅಂಚಿನಲ್ಲಿ ಎಡವಿದರೆ, ತಮ್ಮ ಎಂದಿನ ಆಕ್ರಮಣಕಾರಿ ಆಟವನ್ನು ಬದಿಗಿಟ್ಟು ನಿಧಾನವಾಗಿ ಆಡಿದ ಮುಶೀರ್‌ 326 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 136 ರನ್‌ ಸಿಡಿಸಿದ್ದಾಗ ಹರ್ಷ್‌ ದುಬೆ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 332ಕ್ಕೆ 3 ವಿಕೆಟ್‌ ನಷ್ಟಕ್ಕೊಳಗಾಗಿದ್ದ ಮುಂಬೈ ಬಳಿಕ 86 ರನ್‌ ಸೇರಿಸುವಷ್ಟರಲ್ಲಿ ಇನ್ನುಳಿದ 7 ವಿಕೆಟ್‌ ಕಳೆದುಕೊಂಡಿತು. ಶಮ್ಸ್‌ ಮುಲಾನಿ ಔಟಾಗದೆ 50 ರನ್‌ ಬಾರಿಸಿ ತಂಡವನ್ನು 400ರ ಗಡಿ ದಾಟಿಸಿದರು.ಮುಂಬೈ ನೀಡಿದ ಅಸಾಧ್ಯ ಗುರಿಯನ್ನು ಬೆನ್ನತ್ತಿರುವ ವಿದರ್ಭ 3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 10 ರನ್‌ ಗಳಿಸಿದೆ. ಪಂದ್ಯ ಇನ್ನೂ 2 ದಿನ ಬಾಕಿ ಇದ್ದು, ವಿದರ್ಭದ ಗೆಲುವಿಗೆ 528 ರನ್‌ ಅಗತ್ಯವಿದೆ. ಪಂದ್ಯ ಡ್ರಾ ಆದರೆ ಮುಂಬೈ ಇನ್ನಿಂಗ್ಸ್‌ ಮುನ್ನಡೆ ಅಧಾರದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿದೆ.ಸ್ಕೋರ್‌: ಮುಂಬೈ 224/10 ಮತ್ತು 418/10 (ಮುಶೀರ್‌ 136, ಶ್ರೇಯಸ್‌ 95, ರಹಾನೆ 73, ಹರ್ಷ್‌ 5-144), ವಿದರ್ಭ 105/10 ಮತ್ತು 10/0(3ನೇ ದಿನದಂತ್ಯಕ್ಕೆ) (ಧ್ರುವ್‌ 07*, ಅಥರ್ವ 03*)ಸಚಿನ್‌ ದಾಖಲೆ ಮುರಿದ ಮುಶೀರ್‌

ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಶತಕ ಸಿಡಿಸಿದ ಮುಶೀರ್‌ ಖಾನ್‌, ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ 29 ವರ್ಷ ಹಳೆದ ದಾಖಲೆ ಮುರಿದರು. 19 ವರ್ಷದ ಮುಶೀರ್‌ ರಣಜಿ ಫೈನಲ್‌ನಲ್ಲಿ ಶತಕ ಬಾರಿಸಿದ ಮುಂಬೈನ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಸಚಿನ್‌ 1994-95ರಲ್ಲಿ ತಮಗೆ 21 ವರ್ಷವಾಗಿದ್ದಾಗ ಪಂಜಾಬ್‌ ವಿರುದ್ಧ ಫೈನಲ್‌ನಲ್ಲಿ ಶತಕ ಬಾರಿಸಿದ್ದರು.

ಫೈನಲ್‌ ವೀಕ್ಷಿಸಿದ ಸಚಿನ್‌, ರೋಹಿತ್‌

ಟಿ20 ಲೀಗ್‌ಗೆ ಭರಾಟೆ ನಡುವೆ ದೇಸಿ ಕ್ರಿಕೆಟ್‌ಗೆ ಹೆಚ್ಚಿನ ಮಹತ್ವ ಸಿಗುವಂತೆ ಆಗಬೇಕು ಎಂಬ ಬಿಸಿಸಿಐನ ಯೋಜನೆಗೆ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ರೋಹಿತ್‌ ಶರ್ಮಾ ಜೈ ಜೋಡಿಸಿದರು. ಮುಂಬೈ-ವಿದರ್ಭ ಫೈನಲ್‌ ಪಂದ್ಯವನ್ನು ಇವರಿಬ್ಬರು ಕ್ರೀಡಾಂಗಣಕ್ಕೆ ಆಗಮಿಸಿ ವೀಕ್ಷಿಸಿದ್ದು, ಇದರ ಫೋಟೋಗಳು ವೈರಲ್‌ ಆಗಿವೆ.

Share this article