ನವದೆಹಲಿ: ಡೋಪಿಂಗ್ ಪರೀಕ್ಷೆಗೆ ನಿರಾಕರಿಸಿದ್ದಕ್ಕೆ ಭಾರತದ ತಾರಾ ಕುಸ್ತಿಪಟು ಬಜರಂಗ್ ಪೂನಿಯಾರನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) 4 ವರ್ಷ ನಿಷೇಧಿಸಿ ಆದೇಶ ಹೊರಡಿಸಿದೆ. ಮಾರ್ಚ್‌ನಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ಸ್ ವೇಳೆ ಡೋಪ್ ಪರೀಕ್ಷೆಗೆ ಮೂತ್ರದ ಮಾದರಿ ನೀಡಿಲ್ಲ ಎಂಬ ಕಾರಣ ನೀಡಿ ಏ.23ರಂದು ನಾಡಾ ಬಜರಂಗ್‌ರನ್ನು ಅಮಾನತುಗೊಳಿಸಿತ್ತು.
ಬಳಿಕ ಅವರ ಮೇಲೆ ಕುಸ್ತಿಯ ಜಾಗತಿಕ ಆಡಳಿತ ಸಂಸ್ಥೆಯೂ ನಿಷೇಧ ಹೇರಿತ್ತು. ಆದರೆ ನಾಡಾ ಬಜರಂಗ್‌ಗೆ ಅಮಾನತು ಆದೇಶದ ನೋಟಿಸ್ ಜಾರಿಗೊಳಿಸದ ಕಾರಣಕ್ಕೆ ಡೋಪಿಂಗ್ ನಿಗ್ರಹ ಘಟಕದ ಶಿಸ್ತು ಸಮಿತಿಯು ಅಮಾನತನ್ನು ಹಿಂಪಡೆದಿತ್ತು. ಬಳಿಕ ತಮ್ಮ ಮೇಲಿನ ನಿಷೇಧ ಹಿಂಪಡೆಯುವಂತೆ ಬಜರಂಗ್ ನ್ಯಾಯಾಲಯದ ಮೊರೆ ಹೋಗಿದ್ದರು.ಇತ್ತೀಚೆಗೆ ನಾಡಾ ಶಿಸ್ತು ಸಮಿತಿಯು ಬಜರಂಗ್ ಪ್ರಕರಣ ಸಂಬಂಧ 2 ಬಾರಿ ವಾದ-ವಿವಾದ ಆಲಿಸಿತ್ತು. ಬುಧವಾರ ಅವರ ಮೇಲೆ ನಾಡಾ ನಿಷೇಧ ಶಿಕ್ಷೆ ವಿಧಿಸಿದೆ.
ಶಿಕ್ಷೆ ಅವಧಿ 2024ರ ಏ.23ರಿಂದಲೇ ಆರಂಭಗೊಂಡಿದೆ ಎಂದು ತಿಳಿಸಿದೆ. ಅಲ್ಲದೆ, ನಿಷೇಧ ಅವಧಿಯಲ್ಲಿ ಯಾವುದೇ ವೃತ್ತಿಪರ ಕುಸ್ತಿ ಸ್ಪರ್ಧೆ ಹಾಗೂ ವಿದೇಶದಲ್ಲಿ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ.ಸಾಮಾನ್ಯವಾಗಿ ಸುದೀರ್ಘ ಗಾಯ, ನಿಷೇಧದ ನಂತರ ಯಾವುದೇ ಆಟಗಾರ ಆಟಕ್ಕೆ ಮರಳುವುದು ಕಷ್ಟ. ಸದ್ಯ ಅವರ ಮೇಲೆ 4 ವರ್ಷ ನಿಷೇಧ ಹೇರಲಾಗಿದ್ದು, ವೃತ್ತಿ ಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.
ಲೈಂಗಿಕ ಕಿರುಕುಳ, ಬೆದರಿಕೆ ಸೇರಿದಂತೆ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಜರಂಗ್, ಇತ್ತೀಚೆಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು.