ರಣಜಿ ಕ್ವಾರ್ಟರ್‌ ಫೈನಲ್‌: ಕರ್ನಾಟಕ ವಿರುದ್ಧ ವಿದರ್ಭ ಬೃಹತ್‌ ಮೊತ್ತ

KannadaprabhaNewsNetwork |  
Published : Feb 25, 2024, 01:48 AM IST
ಕರುಣ್‌ ನಾಯರ್‌ | Kannada Prabha

ಸಾರಾಂಶ

ಈ ಪಂದ್ಯದಲ್ಲಿ ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ರೇ ರಾಜ್ಯ ತಂಡವನ್ನು ಕಾಡಿದರು. ಅವರ ಅತ್ಯಾಕರ್ಷಕ ಆಟದ ನೆರವಿನಿಂದ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 460 ರನ್‌ ಕಲೆ ಹಾಕಿದೆ. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ರಾಜ್ಯ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 98 ರನ್‌ ಗಳಿಸಿದ್ದು, ಇನ್ನೂ 362 ರನ್‌ ಹಿನ್ನಡೆಯಲ್ಲಿದೆ.

ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ವಿದರ್ಭ ಬೃಹತ್‌ ಮೊತ್ತ ಕಲೆಹಾಕಿದೆ. ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ ಅತ್ಯಾಕರ್ಷಕ ಆಟದ ನೆರವಿನಿಂದ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 460 ರನ್‌ ಕಲೆ ಹಾಕಿದೆ. ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ರಾಜ್ಯ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 98 ರನ್‌ ಗಳಿಸಿದ್ದು, ಇನ್ನೂ 362 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 261 ರನ್ ಕಲೆಹಾಕಿದ್ದ ವಿದರ್ಭ, 2ನೇ ದಿನವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಉತ್ತಮ ದಾಳಿ ಸಂಘಟಿಸುವಲ್ಲಿ ವಿಫಲರಾದ ರಾಜ್ಯದ ವೇಗಿಗಳು, ಎದುರಾಳಿ ತಂಡಕ್ಕೆ ಬೃಹತ್‌ ಮೊತ್ತ ಬಿಟ್ಟುಕೊಟ್ಟರು. 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ಅಕ್ಷಯ್ ವಾಡ್ಕರ್‌ 16 ರನ್‌ ಗಳಿಸಿ ನಿರ್ಗಮಿಸಿದರೆ, ಬಳಿಕ ಕ್ರೀಸ್‌ಗೆ ಬಂದ ಆದಿತ್ಯ ಸರ್ವಟೆ 26 ರನ್‌ ಗಳಿಸಿ ಔಟಾದರು. ರಾಜ್ಯದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಕರುಣ್‌, 90 ರನ್‌ ಗಳಿಸಿದ್ದಾಗ ವಿದ್ವತ್‌ಗೆ ವಿಕೆಟ್‌ ಒಪ್ಪಿಸಿದರು.389ಕ್ಕೆ 7 ವಿಕೆಟ್‌ ಪತನಗೊಂಡ ನಂತರವೂ ರನ್‌ ಹರಿವು ತಡೆಯಲು ವಿಫಲರಾದ ರಾಜ್ಯದ ಬೌಲರ್‌ಗಳು ಕೊನೆ 3 ವಿಕೆಟ್‌ಗೆ 71 ರನ್‌ ಬಿಟ್ಟುಕೊಟ್ಟರು. ವಿದ್ವತ್‌ ಕಾವೇರಪ್ಪ 4 ವಿಕೆಟ್‌ ಪಡೆದರು.ಆರಂಭಿಕ ಆಘಾತ: ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಕರ್ನಾಟಕ ಆರಂಭಿಕ ಆಘಾತಕ್ಕೊಳಗಾಯಿತು. ಮಯಾಂಕ್‌ ಅಗರ್‌ವಾಲ್‌ ಶೂನ್ಯಕ್ಕೆ ನಿರ್ಗಮಿಸಿದರೆ, ಅನೀಶ್‌ ಕೆ.ವಿ. 34 ರನ್‌ ಗಳಿಸಿದರು. ಆರ್‌.ಸಮರ್ಥ್‌(ಔಟಾಗದೆ 43) ಹಾಗೂ ನಿಕಿನ್‌ ಜೋಸ್‌(ಔಟಾಗದೆ 20) ಕ್ರೀಸ್‌ನಲ್ಲಿದ್ದು, ರಾಜ್ಯಕ್ಕೆ ಇನ್ನಿಂಗ್ಸ್‌ ಮುನ್ನಡೆ ತಂದುಕೊಡಲು ಹೋರಾಡುತ್ತಿದ್ದಾರೆ.ಸ್ಕೋರ್‌: ವಿದರ್ಭ 460/10 (ಕರುಣ್‌ 90, ವಿದ್ವತ್‌ 4-99, ಹಾರ್ದಿಕ್‌ 2-89) ಕರ್ನಾಟಕ 98/2(2ನೇ ದಿನದಂತ್ಯಕ್ಕೆ) ಸಮರ್ಥ್‌ 43*, ನಿಕಿನ್‌ ಜೋಸ್‌ 20*, ಯಶ್‌ ಠಾಕೂರ್‌ 1-22)ಇನ್ನಿಂಗ್ಸ್‌ ಲೀಡ್‌ ಪಡೆದ ತ.ನಾಡು, ಮಧ್ಯಪ್ರದೇಶ

ಮುಶೀರ್‌ ಖಾನ್‌(ಔಟಾಗದೆ 203) ಅಬ್ಬರದ ದ್ವಿಶತ ನೆರವಿನಿಂದ ಬರೋಡಾ ವಿರುದ್ಧ ಕ್ವಾರ್ಟರ್‌ನಲ್ಲಿ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 384 ರನ್‌ ಕಲೆಹಾಕಿದೆ. ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಬರೋಡಾ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 127 ರನ್‌ ಗಳಿಸಿದ್ದು, ಇನ್ನೂ 257 ರನ್‌ ಹಿನ್ನಡೆಯಲ್ಲಿದೆ. ಮತ್ತೊಂದು ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ವಿರುದ್ಧ ತಮಿಳುನಾಡು ಮೊದಲ ಇನ್ನಿಂಗ್ಸ್‌ ಮುನ್ನಡೆ ಗಳಿಸಿದೆ. ಸೌರಾಷ್ಟ್ರದ 183 ರನ್‌ಗೆ ಉತ್ತರವಾಗಿ ತಮಿಳುನಾಡು 6 ವಿಕೆಟ್‌ಗೆ 300 ರನ್‌ ಗಳಿಸಿದ್ದು, 117 ರನ್‌ ರನ್‌ ಮುನ್ನಡೆಯಲ್ಲಿದೆ. ಇನ್ನೊಂದು ಕ್ವಾರ್ಟರ್‌ನಲ್ಲಿ ಆಂಧ್ರ ವಿರುದ್ಧ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 234ಕ್ಕೆ ಆಲೌಟಾಯಿತು. ಬಳಿಕ ಆಂಧ್ರ 172ಕ್ಕೆ ಆಲೌಟಾಯಿತು. 2ನೇ ಇನ್ನಿಂಗ್ಸ್‌ನಲ್ಲಿ ಮಧ್ಯಪ್ರದೇಶ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!