ನವದೆಹಲಿ: ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ ಹೀಗೆ ಅನೇಕ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರ ಹೆಸರಿನಲ್ಲಿ ನಕಲಿ ಅಭ್ಯರ್ಥಿಗಳು ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಟೀಂ ಇಂಡಿಯಾದ ನೂತನ ಕೋಚ್ ಆಗಲು ಬಯಸುವವರಿಂದ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ 3000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಅಸಲಿ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಗುರುತಿಸಲು ಬಿಸಿಸಿಐ ಪರದಾಡುವ ಸ್ಥಿತಿ ಎದುರಾಗಿದೆ ಎಂದು ತಿಳಿದುಬಂದಿದೆ.
ಹುದ್ದೆಗೆ ಅರ್ಜಿ ಹಾಕಲು ಮೇ 27ರಂದು ಕೊನೆಯ ದಿನವಾಗಿತ್ತು. ಸಚಿನ್, ಧೋನಿ ಮಾತ್ರವಲ್ಲದೇ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್‌ರ ಹೆಸರಲ್ಲೂ ಅರ್ಜಿ ಸಲ್ಲಿಕೆಯಾಗಿದೆ.ಗೊಂದಲ ಏಕೆ?ಮೇ 13ರಂದು ಭಾರತ ತಂಡದ ನೂತನ ಪ್ರಧಾನ ಕೋಚ್ ಆಗಲು ಬಯಸುವ ಅಭ್ಯರ್ಥಿಗಳಿಂದ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಗೂಗಲ್ ಫಾರ್ಮ್ಸ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿತ್ತು. ಬಿಸಿಸಿಐ ವೆಬ್‌ಸೈಟ್‌ನಲ್ಲಿ ಕೋಚ್ ಹುದ್ದೆಗೆ ಜಾಹೀರಾತು ಪ್ರಕಟಿಸಿದ್ದ ಬಿಸಿಸಿಐ, ಅಲ್ಲೇ ಗೂಗಲ್ ಫಾರ್ಮ್ಸ್‌ನ ಕೊಂಡಿಯನ್ನೂ ಸಹ ನೀಡಿತ್ತು. ಅದನ್ನು ಬಳಸಿಕೊಂಡು ಯಾರು ಬೇಕಿದ್ದರೂ ಅರ್ಜಿ ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿತ್ತು. ಹೀಗಾಗಿ 3000ಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದು, ಇದರಲ್ಲಿ ಬಹುತೇಕ ಅರ್ಜಿಗಳು ನಕಲಿ ಅಭ್ಯರ್ಥಿಗಳದ್ದಾಗಿದೆ ಎಂದು ತಿಳಿದುಬಂದಿದೆ.ನಕಲಿ ಅರ್ಜಿಗಳು
ಇದೇ ಮೊದಲಲ್ಲ!ಬಿಸಿಸಿಐ 2022ರಲ್ಲಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾಗ, ಈ-ಮೇಲ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ತಿಳಿಸಿತ್ತು. ಆಗ 5000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅಷ್ಟೂ ಈ-ಮೇಲ್‌ಗಳನ್ನು ತೆರೆದು ಪರಿಶೀಲನೆ ನಡೆಸುವುದು ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ಈ ಬಾರಿ ಗೂಗಲ್ ಫಾರ್ಮ್ಸ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.