ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾರನ್ನೂ ಸಂಪರ್ಕಿಸಿಲ್ಲ: ಜಯ್‌ ಶಾ ಸ್ಪಷ್ಟನೆ

KannadaprabhaNewsNetwork |  
Published : May 25, 2024, 01:33 AM ISTUpdated : May 25, 2024, 05:54 AM IST
ಜಯ್‌ ಶಾ | Kannada Prabha

ಸಾರಾಂಶ

ಭಾರತದ ಕೋಚ್‌ ಹುದ್ದೆಗೆ ಆಫರ್‌ ಬಂದಿತ್ತು ಎಂಬ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್‌ ಅವರ ಹೇಳಿಕೆ ಬೆನ್ನಲ್ಲೇ ಬಿಸಿಸಿಐ ಕಾರ್‍ಯದರ್ಶಿ ಜಯ್‌ ಶಾ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ: ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ತಮ್ಮನ್ನು ಸಂಪರ್ಕಿಸಲಾಗಿತ್ತು, ಆದರೆ ತನಗೆ ಆಸಕ್ತಿ ಇಲ್ಲ ಎಂದು ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್‌ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದು, ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾರನ್ನೂ ಸಂಪರ್ಕಿಸಿಲ್ಲ ಎಂದಿದ್ದಾರೆ.

‘ಕೋಚ್‌ ಸ್ಥಾನಕ್ಕಾಗಿ ಐಪಿಎಲ್‌ ವೇಳೆ ನನ್ನನ್ನು ಸಂಪರ್ಕಿಸಲಾಗಿತ್ತು. ಆದರೆ ನಾನೇ ಆಫರ್‌ ನಿರಾಕರಿಸಿದ್ದೆ’ ಎಂದು ಪಾಂಟಿಂಗ್‌ ಗುರುವಾರ ಹೇಳಿಕೆ ನೀಡಿದ್ದರು. ಆಸ್ಟ್ರೇಲಿಯಾದ ಜಸ್ಟಿನ್‌ ಲ್ಯಾಂಗರ್‌ ಕೂಡಾ ಭಾರತದ ಕೋಚ್‌ ಹುದ್ದೆ ಬಗ್ಗೆ ಮಾತನಾಡುತ್ತಾ, ಅದರಲ್ಲಿ ಸದ್ಯಕ್ಕೆ ಯಾವುದೇ ಆಸಕ್ತಿ ಇಲ್ಲ ಎಂದಿದ್ದರು.ಈ ಬಗ್ಗೆ ಶುಕ್ರವಾರ ಪ್ರಕಟನೆ ಹೊರಡಿಸಿರುವ ಜಯ್‌ ಶಾ, ‘ನಾನು ಅಥವಾ ಬಿಸಿಸಿಐನ ಯಾರೂ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಕೋಚ್‌ ಹುದ್ದೆಗಾಗಿ ಸಂಪರ್ಕಿಸಿಲ್ಲ. 

ಈ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿ ನಿಜವಲ್ಲ’ ಎಂದಿದ್ದಾರೆ. ‘ಭಾರತದ ಕ್ರಿಕೆಟ್‌ ಬಗ್ಗೆ ಆಳವಾದ ಜ್ಞಾನ ಹೊಂದಿರುವವರನ್ನು ಕೋಚ್‌ ಹುದ್ದೆಗೆ ಪರಿಗಣಿಸುತ್ತೇವೆ. ಭಾರತೀಯ ಕ್ರಿಕೆಟನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಅವರಲ್ಲಿರಬೇಕು’ ಎಂದು ತಿಳಿಸಿದ್ದಾರೆ. 

ಕೋಟ್ಯಂತರ ಅಭಿಮಾನಿಗಳ ಆಕಾಂಕ್ಷೆಗಳನ್ನು ಪೂರೈಸುವುದು ಒಂದು ದೊಡ್ಡ ಗೌರವ. ಹೀಗಾಗಿ ಭಾರತೀಯ ಕ್ರಿಕೆಟ್‌ಅನ್ನು ಮುನ್ನಡೆಸುವ ಸಾಮರ್ಥ್ಯವಿರುವ ಸರಿಯಾದ ಅಭ್ಯರ್ಥಿಯನ್ನೇ ಬಿಸಿಸಿಐ ಆಯ್ಕೆ ಮಾಡುತ್ತದೆ’ ಎಂದು ಶಾ ತಿಳಿಸಿದ್ದಾರೆ.ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಅವಧಿ ಟಿ20 ವಿಶ್ವಕಪ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಇತ್ತೀಚೆಗಷ್ಟೇ ಹೊಸ ಕೋಚ್‌ಗಾಗಿ ಅರ್ಜಿ ಅಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಮೇ 27ರ ಗಡುವು ವಿಧಿಸಿದೆ.

ಭಾರತೀಯರಿಗೆ ಕೋಚ್‌ ಹುದ್ದೆ?

ಟೀಂ ಇಂಡಿಯಾದ ಕೋಚ್‌ ಹುದ್ದೆ ರೇಸ್‌ನಲ್ಲಿ ಪಾಂಟಿಂಗ್‌, ಲ್ಯಾಂಗರ್‌, ಫ್ಲೆಮಿಂಗ್‌ ಜೊತೆ ಗೌತಮ್ ಗಂಭಿರ್‌, ವಿವಿಎಸ್‌ ಲಕ್ಷ್ಮಣ್‌ ಹೆಸರು ಕೇಳಿ ಬರುತ್ತಿತ್ತು. ಆದರೆ ಆಸೀಸ್‌ ಆಟಗಾರರನ್ನು ಸಂಪರ್ಕಿಸಿಲ್ಲ ಎಂದು ಜಯ್‌ ಶಾ ಹೇಳಿಕೆ ನೀಡಿದ್ದರಿಂದ, ಕೋಚ್‌ ಹುದ್ದೆಗೆ ಭಾರತೀಯರೇ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದರಲ್ಲಿ ಸದ್ಯ ಕೆಕೆಆರ್‌ ತಂಡದ ಮೆಂಟರ್‌ ಆಗಿರುವ ಗೌತಮ್‌ ಗಂಭಿರ್‌ ಮುಂಚೂಣಿಯಲ್ಲಿದ್ದಾರೆ. ಸದ್ಯ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ ಕೂಡಾ ಹುದ್ದೆಗೇರುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದ್ದಾಗಿ ವರದಿಯಾಗಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!