1 ಪಂದ್ಯ, 3 ಸೂಪರ್‌ ಓವರ್‌: ಅಂ.ರಾ. ಕ್ರಿಕೆಟಲ್ಲೇ ಮೊದಲು!

Published : Jun 17, 2025, 11:11 AM IST
cricket ball

ಸಾರಾಂಶ

ನೇಪಾಳ ಹಾಗೂ ನೆದರ್‌ಲೆಂಡ್ಸ್‌ ನಡುವಿನ ತ್ರಿಕೋನ ಟಿ20 ಸರಣಿಯ ಪಂದ್ಯ ಮೂರು ಸೂಪರ್‌ಗಳಿಗೆ ಸಾಕ್ಷಿಯಾಗಿದೆ.

ಗ್ಲಾಸ್ಗೋ(ಸ್ಕಾಟ್ಲೆಂಡ್‌): ನೇಪಾಳ ಹಾಗೂ ನೆದರ್‌ಲೆಂಡ್ಸ್‌ ನಡುವಿನ ತ್ರಿಕೋನ ಟಿ20 ಸರಣಿಯ ಪಂದ್ಯ ಮೂರು ಸೂಪರ್‌ಗಳಿಗೆ ಸಾಕ್ಷಿಯಾಗಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೇ ಮೊದಲು. ಈ ವರೆಗೂ ಯಾವುದೇ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪಂದ್ಯವೊಂದರಲ್ಲಿ 2ಕ್ಕಿಂತ ಹೆಚ್ಚು ಬಾರಿ ಸೂಪರ್‌ ಓವರ್‌ ಆಡಿಸಲಾಗಿರಲಿಲ್ಲ.

ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್‌ಲೆಂಡ್ಸ್‌ 7 ವಿಕೆಟ್‌ಗೆ 152 ರನ್ ಕಲೆಹಾಕಿತು. ತೇಜ ನಿಡಮನೂರು 35, ವಿಕ್ರಂಜಿತ್‌ ಸಿಂಗ್‌ 30, ಸಾಖಿಬ್‌ ಝುಲ್ಫಿಕರ್‌ 25 ರನ್‌ ಸಿಡಿಸಿದರು. ಗುರಿ ಬೆನ್ನತ್ತಿದ ನೇಪಾಳ ತಂಡ 8 ವಿಕೆಟ್‌ಗೆ 152 ರನ್‌ ಗಳಿಸಿದ್ದರಿಂದ ಪಂದ್ಯ ಟೈ ಆಯಿತು. ನಾಯಕ ರೋಹಿತ್‌ ಪೌಡೆಲ್‌ 35 ಎಸೆತಕ್ಕೆ 48, ಕುಶಾಲ್‌ 34 ರನ್‌ ಸಿಡಿಸಿದರು. ಕೊನೆ ಎಸೆತಕ್ಕೆ 5 ರನ್‌ ಬೇಕಿದ್ದಾಗ ನಂದನ್‌ ಯಾದವ್‌ ಬೌಂಡರಿ ಬಾರಿಸಿದರು. ಹೀಗಾಗಿ ಸ್ಕೋರ್‌ ಸಮಬಲಗೊಂಡಿತು.

ಬಳಿಕ ಫಲಿತಾಂಶ ನಿರ್ಧರಿಸಲು ನಡೆದ 2 ಸೂಪರ್‌ ಓವರ್‌ಗಳು ಕೂಡಾ ಟೈ ಆಯಿತು. ಬಳಿಕ 3ನೇ ಸೂಪರ್‌ ಓವರ್‌ನಲ್ಲಿ ನೆದರ್‌ಲೆಂಡ್ಸ್‌ ಜಯಭೇರಿ ಬಾರಿಸಿತು.

ಹೇಗಿದ್ದವು ಸೂಪರ್‌ ಓವರ್‌?

ಸೂಪರ್‌ ಓವರ್‌ 1

ನೇಪಾಳ ಮೊದಲು ಬ್ಯಾಟ್‌ ಮಾಡಿ 1 ವಿಕೆಟ್‌ಗೆ 19 ರನ್‌ ಗಳಿಸಿತು. ಕುಶಾಲ್‌ 18 ರನ್‌ ಸಿಡಿಸಿದರು. 20 ರನ್‌ ಗುರಿ ಪಡೆದ ನೆದರ್‌ಲೆಂಡ್ಸ್‌ ವಿಕೆಟ್‌ ನಷ್ಟವಿಲ್ಲದೇ 19 ರನ್‌ ಗಳಿಸಿತು. ಪಂದ್ಯ ಮತ್ತೆ ಟೈ ಆಯಿತು.

ಸೂಪರ್‌ ಓವರ್‌ 2

ಈ ಬಾರಿ ನೆದರ್‌ಲೆಂಡ್ಸ್‌ ಮೊದಲು ಬ್ಯಾಟ್‌ ಮಾಡಿತು. 1 ವಿಕೆಟ್‌ಗೆ 17 ರನ್‌ ಗಳಿಸಿದ ತಂಡ, ನೇಪಾಳಕ್ಕೆ 18 ರನ್‌ ಗುರಿ ನೀಡಿತು. ಕೊನೆ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ದೀಪೇಂದ್ರ ಸಿಂಗ್‌ ಪಂದ್ಯವನ್ನು ಮತ್ತೆ ಟೈ ಮಾಡಿದರು.

ಸೂಪರ್‌ ಓವರ್‌ 3

ಮೊದಲು ಬ್ಯಾಟ್‌ ಮಾಡಿದ ನೇಪಾಳ 4 ಎಸೆತಗಳನ್ನು ಎದುರಿಸಿ 2 ವಿಕೆಟ್‌ ಕಳೆದುಕೊಂಡಿತು. ಹೀಗಾಗಿ ತಂಡ ಆಲೌಟ್. 1 ರನ್‌ ಗುರಿ ಪಡೆದ ನೆದರ್‌ಲೆಂಡ್ಸ್‌ ಪರ ಮೈಕಲ್‌ ಲೆವಿಟ್‌ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಿ ಗೆಲ್ಲಿಸಿದರು.

ಮಹಾರಾಜ ಟ್ರೋಫಿಯಲ್ಲೂ

ನಡೆದಿತ್ತು 3 ಸೂಪರ್‌ ಓವರ್‌

ಕಳೆದ ವರ್ಷ ಕರ್ನಾಟಕದ ಮಹಾರಾಜ ಟ್ರೋಫಿ ಟಿ20 ಲೀಗ್‌ ಕೂಡಾ 3 ಸೂಪರ್‌ ಓವರ್‌ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಹುಬ್ಬಳ್ಳಿ ಟೈಗರ್ಸ್‌ 3ನೇ ಸೂಪರ್‌ ಓವರ್‌ನಲ್ಲಿ ಸೋಲಿಸಿತ್ತು.

PREV
Read more Articles on

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌