2026ರ ವಿಶ್ವಕಪ್‌ಗೆ ಭಾರತದ ಆಡಿಷನ್‌ ಶುರು: ಇಂದಿನಿಂದ ಜಿಂಬಾಬ್ವೆ ಸರಣಿ

KannadaprabhaNewsNetwork | Updated : Jul 06 2024, 06:10 AM IST

ಸಾರಾಂಶ

ಇಂದಿನಿಂದ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿ .  ಕೊಹ್ಲಿ, ರೋಹಿತ್‌, ಜಡೇಜಾ ಸ್ಥಾನ ತುಂಬಲು ಯುವ ಕ್ರಿಕೆಟಿಗರಿಗೆ ಚಾನ್ಸ್‌. ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಯುವ ತಾರೆಯರ ಪೈಪೋಟಿ. ನಾಯಕ ಗಿಲ್‌, ಅಭಿಷೇಕ್‌, ರಿಯಾನ್‌, ರಿಂಕು ಮೇಲೆ ಎಲ್ಲರ ಕಣ್ಣು

ರಾರೆ:  ಟಿ20 ವಿಶ್ವಕಪ್‌ ಗೆದ್ದು ವಾರ ಕಳೆಯುವುದರೊಳಗೆ ಭಾರತ ತಂಡ ಮತ್ತೆ ಸರಣಿಗೆ ಸಜ್ಜಾಗಿದ್ದು, 2026ರ ಟಿ20 ವಿಶ್ವಕಪ್‌ಗೆ ಅಧಿಕೃತ ಸಿದ್ಧತೆ ಆರಂಭಿಸಲಿದೆ. ಯುವ ತಾರೆಗಳನ್ನೊಳಗೊಂಡ ಟೀಂ ಇಂಡಿಯಾ ಶನಿವಾರದಿಂದ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ.

 ಎಲ್ಲಾ ಪಂದ್ಯಗಳಿಗೂ ಹರಾರೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಅವರ ಸ್ಥಾನವನ್ನು ತುಂಬಲು ಐಪಿಎಲ್‌ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಮಿಂಚಿರುವ ಯುವ ಆಟಗಾರರಿಗೆ ಅವಕಾಶ ಸಿಗಲಿದೆ. 2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ 34 ಟಿ20 ಪಂದ್ಯಗಳನ್ನಾಡಲಿದೆ. 

ಆದರೆ ಹಾರ್ದಿಕ್‌, ರಿಷಭ್‌ ಪಂತ್‌, ಸೂರ್ಯಕುಮಾರ್‌, ಅಕ್ಷರ್‌, ಅರ್ಶ್‌ದೀಪ್‌, ಕುಲ್ದೀಪ್‌ ಸೇರಿ ಪ್ರಮುಖರು ಈಗಾಗಲೇ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿದ್ದಾರೆ. ಹೀಗಾಗಿ ಯುವ ಆಟಗಾರರಿಗೆ ತಂಡಕ್ಕೆ ಆಯ್ಕೆಯಾಗಲು ಜಿಂಬಾಬ್ವೆ ಸರಣಿಯಿಂದಲೇ ಆಡಿಷನ್‌ ಆರಂಭಗೊಳ್ಳಲಿದೆ.ಪ್ರಮುಖವಾಗಿ ಭಾರತದ ಮುಂದಿನ ನಾಯಕ ಎಂದೇ ಬಿಂಬಿತಗೊಂಡಿರುವ ಶುಭ್‌ಮನ್‌ ಗಿಲ್‌ ಬ್ಯಾಟಿಂಗ್‌ ಜೊತೆ ನಾಯಕತ್ವದಲ್ಲೂ ಮಿಂಚಬೇಕಾದ ಅಗತ್ಯವಿದೆ.

 ರೋಹಿತ್‌, ವಿರಾಟ್‌ ವಿದಾಯದಿಂದ ಆರಂಭಿಕನ ಸ್ಥಾನ ತೆರವುಗೊಂಡಿದೆ. ಈ ಸ್ಥಾನಕ್ಕೆ ಗಿಲ್‌, ಋತುರಾಜ್‌ ಜೊತೆ ಉದಯೋನ್ಮುಖ ಬ್ಯಾಟರ್‌ ಅಭಿಷೇಕ್‌ ಶರ್ಮಾ ಪೈಪೋಟಿ ನಡೆಸಲಿದ್ದಾರೆ. ಸಾಯಿ ಸುದರ್ಶನ್‌ ಕೂಡಾ ರೇಸ್‌ನಲ್ಲಿರುವುದರಿಂದ ಕುತೂಹಲ ಹೆಚ್ಚಾಗಿದೆ.ಹಿರಿಯ ಬ್ಯಾಟರ್‌ಗಳ ಅನುಪಸ್ಥಿತಿಯಲ್ಲಿ ರಿಂಕು ಸಿಂಗ್‌ ಸುಲಭದಲ್ಲಿ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.

 ಮತ್ತೊಂದೆಡೆ ಐಪಿಎಲ್‌ನಲ್ಲಿ ಸುಧಾರಿತ ಆಟದ ಮೂಲಕ ಎಲ್ಲರ ಗಮನ ಸೆಳೆದಿರುವ ರಿಯಾನ್‌ ಪರಾಗ್‌ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ. ಸಂಜು ಸ್ಯಾಮ್ಸನ್‌ 3ನೇ ಪಂದ್ಯದಿಂದ ತಂಡದ ಆಯ್ಕೆಗೆ ಲಭ್ಯವಿರಲಿದ್ದಾರೆ. ಆದರೆ ಅವರಿಗೆ ಧ್ರುವ್‌ ಜುರೆಲ್‌, ಜಿತೇಶ್‌ ಶರ್ಮಾರಿಂದ ಪ್ರಬಲ ಪೈಪೋಟಿ ಎದುರಾಗಲಿದ್ದು, ಅಸಾಧಾರಣ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆಲ್ರೌಂಡ್‌ ವಿಭಾಗದಲ್ಲಿ ಜಡೇಜಾ ಸ್ಥಾನವನ್ನು ತುಂಬಲು ವಾಷಿಂಗ್ಟನ್‌ ಸುಂದರ್‌ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ.

ವೇಗಿಗಳಾದ ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ತುಷಾರ್‌ ದೇಶಪಾಂಡೆ ಜೊತೆ ಯುವ ತಾರೆ ಹರ್ಷಿತ್‌ ರಾಣಾ ತಂಡದಲ್ಲಿ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದ್ದಾರೆ. ರವಿ ಬಿಷ್ಣೋಯ್‌ಗೆ ಕುಲ್ದೀಪ್‌ರನ್ನು ಹಿಂದಿಕ್ಕಿ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಅವಕಾಶ ಲಭಿಸಲಿದೆ.ಮತ್ತೊಂದೆಡೆ ಜಿಂಜಾಬ್ವೆ ಸಿಕಂದರ್‌ ರಾಜಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ತವರಿನಲ್ಲಿ ಭಾರತಕ್ಕೆ ಸೋಲುಣಿಸುವ ಮೂಲಕ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವ ನಿರೀಕ್ಷೆಯಲ್ಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಗಿಲ್‌(ನಾಯಕ), ಅಭಿಷೇಕ್‌, ಋತುರಾಜ್‌, ರಿಯಾನ್‌, ರಿಂಕು, ಜಿತೇಶ್‌, ವಾಷಿಂಗ್ಟನ್‌, ಆವೇಶ್‌, ಮುಕೇಶ್‌, ಹರ್ಷಿತ್‌, ಬಿಷ್ಣೋಯ್‌.ಜಿಂಬಾಬ್ವೆ: ಇನೋಸೆಂಟ್‌, ಮಿಲ್ಟನ್‌, ಡಿಯಾನ್‌, ಮಧವೆರೆ, ಸಿಕಂದರ್‌(ನಾಯಕ), ಮಡಂಡೆ, ಬೆನೆಟ್‌, ಚಟಾರ, ವೆಲ್ಲಿಂಗ್ಟನ್‌, ಮುಜರಬಾನಿ, ಜೊಂಗ್ವೆ.ಒಟ್ಟು ಮುಖಾಮುಖಿ: 08ಭಾರತ: 06ಜಿಂಬಾಬ್ವೆ: 02ಪಂದ್ಯ: ಸಂಜೆ 4.30(ಭಾರತೀಯ ಕಾಲಮಾನ) ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌, ಸೋನಿ ಲೈವ್‌.

Share this article