ಹಾಲಿ ಟಿ20 ವಿಶ್ವ ಚಾಂಪಿಯನ್‌ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಜಯಭೇರಿ

KannadaprabhaNewsNetwork |  
Published : Oct 10, 2024, 02:46 AM ISTUpdated : Oct 10, 2024, 04:11 AM IST
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ನಿತೀಶ್‌ ರೆಡ್ಡಿ.  | Kannada Prabha

ಸಾರಾಂಶ

ಬಾಂಗ್ಲಾದೇಶವನ್ನು ಹೊಸಕಿ ಹಾಕಿ ಸರಣಿ ಗೆದ್ದ ಟೀಂ ಇಂಡಿಯಾ. 2ನೇ ಟಿ20 ಪಂದ್ಯದಲ್ಲಿ 86 ರನ್‌ಗಳ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ. ಭಾರತದ ಆಲ್ರೌಂಡ್‌ ಶೋ ಮುಂದೆ ಬಾಂಗ್ಲಾ ಮಂಕು.

ನವದೆಹಲಿ: ಹಾಲಿ ಟಿ20 ವಿಶ್ವ ಚಾಂಪಿಯನ್‌ ಭಾರತ, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತನ್ನ ಬೆಂಚ್‌ ಬಲವನ್ನು ಪ್ರದರ್ಶಿಸಿ, ಮುಂದಿನ ಕೆಲ ವರ್ಷಗಳ ಕಾಲ 20 ಓವರ್‌ಗಳ ಕ್ರಿಕೆಟ್‌ನಲ್ಲಿ ಪರಾಕ್ರಮ ಮೆರೆಯುವುದಾಗಿ ಸಂದೇಶ ರವಾನಿಸಿದೆ. ಬುಧವಾದ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ 86 ರನ್‌ಗಳ ಬೃಹತ್‌ ಗೆಲುವು ಸಾಧಿಸಿದ ಭಾರತ, 2-0 ಮುನ್ನಡೆ ಸಾಧಿಸಿ 3 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.

ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತೀಯ ಬ್ಯಾಟರ್‌ಗಳಿಂದ 2ನೇ ಪಂದ್ಯದಲ್ಲೂ ಸೂಪರ್‌ ಹಿಟ್‌ ಶೋ ಮೂಡಿಬಂತು. 41 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಹೊರತಾಗಿಯೂ 20 ಓವರಲ್ಲಿ ಭಾರತ 9 ವಿಕೆಟ್‌ಗೆ 221 ರನ್‌ ಕಲೆ ಹಾಕಿತು. ಬಾಂಗ್ಲಾದೇಶ 20 ಓವರಲ್ಲಿ 9 ವಿಕೆಟ್‌ಗೆ 135 ರನ್‌ ಗಳಿಸಿತು.

21 ವರ್ಷದ ಆಲ್ರೌಂಡರ್‌ ನಿತೀಶ್‌ ರೆಡ್ಡಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ 34 ಎಸೆತದಲ್ಲಿ 4 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 74 ರನ್‌ ಸಿಡಿಸಿದರೆ, ರಿಂಕು ಸಿಂಗ್‌ 29 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್‌ ಚಚ್ಚಿದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ 8 ಓವರಲ್ಲಿ 108 ರನ್‌ ಜೊತೆಯಾಟ ಮೂಡಿಬಂತು.

ಹಾರ್ದಿಕ್‌ ಪಾಡ್ಯ 19 ಎಸೆತದಲ್ಲಿ 32, ರಿಯಾನ್‌ ಪರಾಗ್‌ 6 ಎಸೆತದಲ್ಲಿ 15 ರನ್‌ ಸಿಡಿಸಿದರು. ಭಾರತದ ಇನ್ನಿಂಗ್ಸಲ್ಲಿ ಒಟ್ಟು 17 ಬೌಂಡರಿ, 15 ಸಿಕ್ಸರ್‌ಗಳಿದ್ದವು.ಬಾಂಗ್ಲಾ ಕುಸಿತ: ಭಾರತೀಯ ವೇಗಿಗಳ ಸಂಘಟಿತ ದಾಳಿಯ ಎದುರು ಬಾಂಗ್ಲಾ ಪ್ರಬಲ ಹೋರಾಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಪವರ್‌-ಪ್ಲೇನಲ್ಲೇ 3 ವಿಕೆಟ್‌ ಕಳೆದುಕೊಂಡ ಬಾಂಗ್ಲಾ, ಬಳಿಕ ಚೇತರಿಕೆ ಕಾಣಲಿಲ್ಲ. ಏಕಾಂಗಿ ಹೋರಾಟ ನಡೆಸಿದ ಮಹ್ಮುದುಲ್ಲಾ 41 ರನ್‌ ಗಳಿಸಿದರು.

ಸರಣಿಯ 3ನೇ ಹಾಗೂ ಕೊನೆಯ ಪಂದ್ಯ ಅ.12ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಸ್ಕೋರ್‌: ಭಾರತ 20 ಓವರಲ್ಲಿ 221/9 (ನಿತೀಶ್‌ 74, ರಿಂಕು 53, ಪಾಂಡ್ಯ 32, ರಿಶಾದ್‌ 3-55), ಬಾಂಗ್ಲಾ 20 ಓವರಲ್ಲಿ 135/9 (ಮಹ್ಮುದುಲ್ಲಾ 41, ಪರ್ವೇಜ್‌ 16, ವರುಣ್‌ 2-19, ನಿತೀಶ್‌ 2-23 ) ಪಂದ್ಯಶ್ರೇಷ್ಠ: ನಿತೀಶ್‌ ರೆಡ್ಡಿ --

ಸತತ 7ನೇ ಟಿ20

ಸರಣಿ ಗೆಲುವು!

ಭಾರತ ತಂಡ ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವು ಸಾಧಿಸಿದೆ. 2022ರ ಬಳಿಕ ತಂಡ ತವರಿನಲ್ಲಿ ಸರಣಿ ಸೋತಿಲ್ಲ. ಇನ್ನು ಡ್ರಾಗೊಂಡ ಸರಣಿಗಳನ್ನೂ ಪರಿಗಣಿಸಿದರೆ, ಭಾರತ ತವರಿನಲ್ಲಿ ಸತತ 16ನೇ ಸರಣಿಯಲ್ಲಿ ಅಜೇಯವಾಗಿ ಉಳಿದಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!