ಭಾರತದ ಟೆಸ್ಟ್‌ ಭದ್ರಕೋಟೆ ಭೇದಿಸಿದ ಕಿವೀಸ್‌ : 70 ವರ್ಷಗಳ ಬಳಿಕ 113 ರನ್‌ಗಳ ಭರ್ಜರಿ ಗೆಲುವು

KannadaprabhaNewsNetwork | Updated : Oct 27 2024, 04:17 AM IST

ಸಾರಾಂಶ

ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ಗೆ 113 ರನ್‌ಗಳ ಭರ್ಜರಿ ಗೆಲುವು. 359 ರನ್‌ ಗುರಿ ಪಡೆದಿದ್ದ ಭಾರತ 245 ರನ್‌ಗೆ ಸರ್ವಪತನ. ತೀವ್ರ ಬ್ಯಾಟಿಂಗ್‌ ವೈಫಲ್ಯ. ಮೂರೇ ದಿನಕ್ಕೆ ಮುಗಿದ ಪುಣೆ ಟೆಸ್ಟ್‌. 3 ಪಂದ್ಯಗಳ ಸರಣಿಯಲ್ಲಿ ಕಿವೀಸ್‌ಗೆ 2-0 ಐತಿಹಾಸಿಕ ಮುನ್ನಡೆ

ಪುಣೆ: ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆಲ್ಲುವುದು ಯಾವುದೇ ವಿದೇಶಿ ತಂಡದ ಕನಸು. ಇನ್ನು ಭಾರತದ ವಿರುದ್ಧ ಅದರದೇ ತವರಿನಲ್ಲಿ ಸರಣಿ ಕೈ ವಶಪಡಿಸಿಕೊಳ್ಳುವುದಂತೂ ಬಲಿಷ್ಠ ತಂಡಗಳಿಗೂ ನನಸಾಗದ ಕನಸು. 

ಆದರೆ ಅದನ್ನು ನ್ಯೂಜಿಲೆಂಡ್‌ ನನಸು ಮಾಡಿಕೊಂಡಿದೆ. ಟೀಂ ಇಂಡಿಯಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ 113 ರನ್‌ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಐತಿಹಾಸಿಕ ಜಯಭೇರಿ ಮೊಳಗಿಸಿದೆ.ಬೆಂಗಳೂರಿನ ಟೆಸ್ಟ್‌ನಲ್ಲಿ ಅನಿರೀಕ್ಷಿತ ಕುಸಿತ ಕಂಡು ಸೋಲಿನ ಮುಖಭಂಗಕ್ಕೊಳಗಾಗಿದ್ದ ರೋಹಿತ್‌ ಶರ್ಮಾ ಪಡೆ, ಪುಣೆ ಟೆಸ್ಟ್‌ನಲ್ಲಿ ಪುಟಿದೆದ್ದು ಸರಣಿ ಸಮಬಲಗೊಳಿಸುವ ವಿಶ್ವಾಸವಿತ್ತು. 

ಕಿವೀಸ್‌ನ ವೇಗದ ಬೌಲಿಂಗ್‌ ಮುಂದೆ ಸೋತಿದ್ದ ತಂಡ, ಪುಣೆಯ ಸ್ಪಿನ್‌ ಪಿಚ್‌ನಲ್ಲಾದರೂ ಗೆಲ್ಲುವ ಭರವಸೆಯಲ್ಲಿತ್ತು. ಆದರೆ ನ್ಯೂಜಿಲೆಂಡ್‌ನ ಅಭೂತಪೂರ್ವ ಆಟದ ಮುಂದೆ ಭಾರತ ಮತ್ತೆ ಮಂಕಾಯಿತು. ಗೆಲುವಿಗೆ 359 ರನ್‌ಗಳ ಬೃಹತ್‌ ಗುರಿ ಪಡೆದಿದ್ದ ಭಾರತ, ಶನಿವಾರ 245 ರನ್‌ಗೆ ಸರ್ವಪತನ ಕಂಡಿತು.

 ದೊಡ್ಡ ಗುರಿ: 2ನೇ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 198 ರನ್‌ ಗಳಿಸಿದ್ದ ಕಿವೀಸ್‌, 3ನೇ ದಿನ ಮೊದಲ ಅವಧಿಯಲ್ಲೇ 255 ರನ್‌ಗೆ ಆಲೌಟಾಯಿತು. ಕೊನೆ 5 ವಿಕೆಟ್‌ಗಳನ್ನು ಉರುಳಿಸಲು ಭಾರತೀಯ ಬೌಲರ್‌ಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 231ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 24 ರನ್‌ ಸೇರಿಸುವಷ್ಟರಲ್ಲಿ ಆಲೌಟಾಯಿತು. ಟಾಮ್ ಬ್ಲಂಡೆಲ್‌ 41, ಗ್ಲೆನ್‌ ಫಿಲಿಪ್ಸ್‌ ಔಟಾಗದೆ 48 ರನ್‌ ಗಳಿಸಿದರು. ವಾಷಿಂಗ್ಟನ್‌ ಸುಂದರ್‌ 4, ಜಡೇಜಾ 3, ಅಶ್ವಿನ್‌ 2 ವಿಕೆಟ್‌ ಕಿತ್ತರು.

ಸ್ಫೋಟಕ ಆರಂಭ, ಬಳಿಕ ಕುಸಿತ: ಗುರಿ ದೊಡ್ಡದಿದ್ದು, ಪಂದ್ಯದ ಇನ್ನೂ ಎರಡು ದಿನ ಬಾಕಿ ಇದ್ದರೂ ಭಾರತ ಟಿ20 ಮೋಡ್‌ನಲ್ಲೇ ಚೇಸಿಂಗ್‌ ಆರಂಭಿಸಿತು. ತಂಡ ರನ್‌ ಖಾತೆ ತೆರೆದಿದ್ದೇ ಯಶಸ್ವಿ ಜೈಸ್ವಾಲರ್‌ ಸಿಕ್ಸರ್ ಮೂಲಕ. ಭಾರತದ ಆರಂಭಿಕರ ಅಬ್ಬರ ಗಮನಿಸಿದರೆ ತಂಡ ಅಸಾಧ್ಯ ಗುರಿಯನ್ನು ತಲುಪುವ ವಿಶ್ವಾಸ ಅಭಿಮಾನಿಗಳಲ್ಲಿತ್ತು. 6ನೇ ಓವರ್‌ನಲ್ಲೇ ರೋಹಿತ್‌ ಶರ್ಮಾ(08) ಔಟಾದರೂ, ಶುಭ್‌ಮನ್‌ ಗಿಲ್‌ ಜೊತೆಗೂಡಿ ಜೈಸ್ವಾಲ್‌ ಇನ್ನಿಂಗ್ಸ್‌ ಕಟ್ಟಿದರು.

 ತಂಡದ ಮೊತ್ತ 96 ರನ್‌ ಆಗುವಾಗ ಗಿಲ್‌(23) ವಿಕೆಟ್‌ ಉರುಳಿತು. ಆದರೆ ತಂಡದ ಪತನ ಆರಂಭಗೊಂಡಿದ್ದು ಜೈಸ್ವಾಲ್‌ ಔಟಾದಾಗ. ಕಿವೀಸ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಚೆಂಡನ್ನು ಮೂಲೆಮೂಲೆಗೆ ಅಟ್ಟುತ್ತಿದ್ದ ಜೈಸ್ವಾಲ್‌ ತಂಡದ ಮೊತ್ತ 127 ರನ್‌ ಆದಾಗ ಸ್ಯಾಂಟ್ನರ್‌ ಎಸೆತದಲ್ಲಿ ಔಟಾದರು. ಅವರು 65 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 77 ರನ್‌ ಸಿಡಿಸಿದರು. 

ಜೈಸ್ವಾಲ್‌ ಔಟಾದ ಬಳಿಕ ನಡೆದಿದ್ದು ಭಾರತೀಯರ ಪೆವಿಲಿಯನ್‌ ಪರೇಡ್‌. ರಿಷಭ್‌ ಪಂತ್‌ ಗಳಿಕೆ ಸೊನ್ನೆ. ವಿರಾಟ್‌ ಕೊಹ್ಲಿ(17) ತಮ್ಮ ವೈಫಲ್ಯ ಮುಂದುವರಿಸಿದರು. ಇಷ್ಟರಲ್ಲಾಗಲೇ ತಂಡದ ಸೋಲು ಬಹುತೇಕ ಖಚಿತವಾಗಿತ್ತು. ವಾಷಿಂಗ್ಟನ್‌ ಸುಂದರ್‌ 21, ಸರ್ಫರಾಜ್‌ ಖಾನ್‌ 9, ಅಶ್ವಿನ್‌ 18 ರನ್‌ ಗಳಿಸಲಷ್ಟೇ ಶಕ್ತರಾದರು. ಕೊನೆಯಲ್ಲಿ ರವೀಂದ್ರ ಜಡೇಜಾ ಹೋರಾಟದ 42 ರನ್‌ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಎಡಗೈ ಸ್ಪಿನ್ನರ್‌(104ಕ್ಕೆ 6) 2ನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್‌ ಗೊಂಚಲು ಪಡೆದರು.

 ಇದಕ್ಕೂ ಮುನ್ನ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್‌ ಗಳಿಸಿದ್ದರೆ, ಭಾರತ 156 ರನ್‌ಗೆ ಆಲೌಟಾಗಿ 103 ರನ್‌ ಹಿನ್ನಡೆ ಅನುಭವಿಸಿತ್ತು. 

ಸ್ಕೋರ್‌: ನ್ಯೂಜಿಲೆಂಡ್‌ 259/10 ಹಾಗೂ 255/10 (ಫಿಲಿಪ್ಸ್‌ 48*, ಬ್ಲಂಡೆಲ್‌ 41, ವಾಷಿಂಗ್ಟನ್‌ 4-56, ಜಡೇಜಾ 3-72, ಅಶ್ವಿನ್‌ 2-97) ಭಾರತ 156/10 ಮತ್ತು 245/10 (ಜೈಸ್ವಾಲ್‌ 77, ಜಡೇಜಾ 42, ಗಿಲ್‌ 23, ಸ್ಯಾಂಟ್ನರ್‌ 6-104, ಅಜಾಜ್‌ 2-43) ಪಂದ್ಯಶ್ರೇಷ್ಠ: ಮಿಚೆಲ್‌ ಸ್ಯಾಂಟ್ನರ್‌.

ಭಾರತದಲ್ಲಿ ಸರಣಿ ಗೆಲ್ಲಲು ಕಿವೀಸ್‌ ಕಾದಿದ್ದು 7 ದಶಕ!

ನ್ಯೂಜಿಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಗೆಲ್ಲಲು ಹೆಚ್ಚೂ ಕಡಿಮೆ 7 ದಶಕ ಕಾಯುವಂತಾಯಿತು. 1955-56ರಿಂದ ನ್ಯೂಜಿಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಆಡುತ್ತಿದ್ದು, ಮೊದಲ ಬಾರಿ ಸರಣಿ ಗೆದ್ದು ಇತಿಹಾಸ ಬರೆದಿದೆ. ತಂಡ ಈ ವರೆಗೂ ಆಡಿರುವ 38 ಟೆಸ್ಟ್‌ಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದಿದೆ. ಕಿವೀಸ್‌ ತಂಡ ಭಾರತದಲ್ಲಿ ಒಟ್ಟು 13 ಬಾರಿ ಸರಣಿ ಆಡಿದೆ. ಈ ಪೈಕಿ 10ರಲ್ಲಿ ಸೋತಿದ್ದರೆ, 2 ಸಲ ಸರಣಿ(1969-70, 2003-04) ಡ್ರಾಗೊಂಡಿದ್ದವು. ಈ ಬಾರಿ ಐತಿಹಾಸಿಕ ಗೆಲುವು ಸಾಧಿಸಿದೆ.

ಭಾರತ ವಿರುದ್ಧ 7ನೇ ಬಾರಿ ಸರಣಿ ಗೆಲುವು

ಕಿವೀಸ್‌ ತಂಡ ಭಾರತ ವಿರುದ್ಧ 7ನೇ ಬಾರಿ ಟೆಸ್ಟ್‌ ಸರಣಿ ಗೆಲುವು ಸಾಧಿಸಿತು. ಇತ್ತಂಡಗಳ ನಡುವೆ ಇದು 23ನೇ ಸರಣಿ. ಈ ಪೈಕಿ 12ರಲ್ಲಿ ಭಾರತ ಗೆದ್ದಿದ್ದರೆ, 4 ಸರಣಿ ಡ್ರಾಗೊಂಡಿವೆ.

ಭಾರತದಲ್ಲಿ ಟೆಸ್ಟ್‌ ಸರಣಿ ಗೆದ್ದ 6ನೇ ತಂಡ ಕಿವೀಸ್‌

ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ 6ನೇ ತಂಡ ನ್ಯೂಜಿಲೆಂಡ್‌. ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ತಲಾ 5 ಬಾರಿ, ಆಸ್ಟ್ರೇಲಿಯಾ 4 ಬಾರಿ, ಪಾಕಿಸ್ತಾನ, ದ.ಆಫ್ರಿಕಾ, ನ್ಯೂಜಿಲೆಂಡ್‌ ತಲಾ 1 ಬಾರಿ ಸರಣಿ ಗೆದ್ದಿವೆ.

15ನೇ ಸೋಲು: ತವರಿನಲ್ಲಿ 300+ ರನ್‌ ಗುರಿ ಸಿಕ್ಕ 26 ಪಂದ್ಯಗಳಲ್ಲಿ ಭಾರತಕ್ಕಿದು 15ನೇ ಸೋಲು. ಕೇವಲ ಒಂದು ಪಂದ್ಯ ಗೆದ್ದಿದೆ. 9 ಡ್ರಾಗೊಂಡಿದ್ದು, 1 ಟೈ ಆಗಿತ್ತು.

2012ರ ಬಳಿಕ ಭಾರತದ ತವರಿನ ಟೆಸ್ಟ್‌ ಸರಣಿ

ಎದುರಾಳಿವರ್ಷಫಲಿತಾಂಶಅಂತರ

ಇಂಗ್ಲೆಂಡ್‌2012-13ಇಂಗ್ಲೆಂಡ್‌ಗೆ ಜಯ2-1 (4)

ಆಸ್ಟ್ರೇಲಿಯಾ2012-13ಭಾರತಕ್ಕೆ ಗೆಲುವು4-0 (4)

ವಿಂಡೀಸ್‌2013-14ಭಾರತಕ್ಕೆ ಗೆಲುವು2-0 (2)

ದ.ಆಫ್ರಿಕಾ2015-16ಭಾರತ ಜಯಭೇರಿ3-0 (4)

ನ್ಯೂಜಿಲೆಂಡ್‌2016-17ಭಾರತಕ್ಕೆ ಜಯ3-0 (3)

ಇಂಗ್ಲೆಂಡ್‌2016-17ಭಾರತಕ್ಕೆ ಗೆಲುವು4-0 (5)

ಬಾಂಗ್ಲಾದೇಶ2016-17ಭಾರತಕ್ಕೆ ಜಯ1-0 (1)

ಆಸ್ಟ್ರೇಲಿಯಾ2016-17ಭಾರತಕ್ಕೆ ಜಯ2-1 (4)

ಶ್ರೀಲಂಕಾ2017-18ಭಾರತಕ್ಕೆ ಜಯ1-0 (3)

ಅಫ್ಘಾನಿಸ್ತಾನ2018ಭಾರತಕ್ಕೆ ಜಯ1-0 (1)

ವಿಂಡೀಸ್‌2018-19ಭಾರತಕ್ಕೆ ಗೆಲುವು2-0 (2)

ದ.ಆಫ್ರಿಕಾ2019-20ಭಾರತಕ್ಕೆ ಜಯ3-0 (3)

ಬಾಂಗ್ಲಾದೇಶ2019-20ಭಾರತಕ್ಕೆ ಗೆಲುವು2-0 (2)

ಇಂಗ್ಲೆಂಡ್‌2020-21ಭಾರತಕ್ಕೆ ಜಯ3-1 (4)

ನ್ಯೂಜಿಲೆಂಡ್‌2021-22ಭಾರತಕ್ಕೆ ಜಯ1-0 (2)

ಶ್ರೀಲಂಕಾ2021-22ಭಾರತಕ್ಕೆ ಗೆಲುವು2-0 (2)

ಆಸ್ಟ್ರೇಲಿಯಾ2022-23ಭಾರತಕ್ಕೆ ಜಯ2-1 (4)

ಇಂಗ್ಲೆಂಡ್‌2023-24ಭಾರತಕ್ಕೆ ಗೆಲುವು4-1 (5)

ಬಾಂಗ್ಲಾದೇಶ2024-25ಭಾರತಕ್ಕೆ ಜಯ2-0 (2)

ನ್ಯೂಜಿಲೆಂಡ್‌2024-25ನ್ಯೂಜಿಲೆಂಡ್‌ಗೆ ಜಯ2-0 (3)

Share this article