ಒಂದು ಪಂದ್ಯ, ಸಾವಿರಾರು ಕೋಟಿ ವ್ಯವಹಾರ!

Published : Feb 03, 2026, 12:50 PM IST
pakistan cricket team

ಸಾರಾಂಶ

ಟಿ20 ವಿಶ್ವಕಪ್‌: ಭಾರತ vs ಪಾಕ್‌ ಪಂದ್ಯದ ಮೇಲಿದೆ ₹2200 ಕೋಟಿಯ ಭವಿಷ್ಯ । ₹250 ಕೋಟಿಯ ಜಾಹೀರಾತು ನಷ್ಟದ ಆತಂಕಪಾಕಿಸ್ತಾನ ಕ್ರಿಕೆಟ್‌ಗೆ ಹಲವು ವರ್ಷ ಆರ್ಥಿಕ ನಷ್ಟ ಖಚಿತ । ಐಸಿಸಿ, ಪ್ರಸಾರಕರು, ಶ್ರೀಲಂಕಾಗೂ ನಷ್ಟ । ಆದರೆ ಬಿಸಿಸಿಐಗಿಲ್ಲ ಸಮಸ್ಯೆ?

ದುಬೈ: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಈಗ ಕೇವಲ ಕ್ರಿಕೆಟ್‌ ಆಗಿ ಉಳಿದಿಲ್ಲ. ಅದು ಸಾವಿರಾರು ಕೋಟಿಗಳ ವ್ಯವಹಾರ ಹಾಗೂ ಜಾಗತಿಕ ಕ್ರಿಕೆಟ್‌ ಆರ್ಥಿಕತೆಯ ಬೆನ್ನಲುಬು. ಹೀಗಾಗಿಯೇ ಈ 2 ತಂಡಗಳ ನಡುವಿನ ಪಂದ್ಯಕ್ಕೆ ಕ್ರಿಕೆಟ್‌ ಲೋಕದಲ್ಲಿ ಬೇರೆಲ್ಲದಕ್ಕಿಂತಲೂ ಹೆಚ್ಚಿನ ಮಹತ್ವವಿದೆ. ಈ ಪಂದ್ಯ ನಡೆಯದಿದ್ದರೆ ಅದರ ಪರಿಣಾಮವನ್ನು ಕ್ರಿಕೆಟ್‌ ಲೋಕವೇ ಎದುರಿಸಬೇಕಿದೆ. ಪಂದ್ಯದಲ್ಲಿ ಆದಾಯ ಬರುವುದು ಹೇಗೆ? ಪಂದ್ಯ ನಡೆಯದಿದ್ದರೆ ಯಾರಿಗೆ? ಹೇಗೆ? ಎಷ್ಟು ನಷ್ಟವಾಗಲಿದೆ? ಎಂಬ ವಿವರ ಇಲ್ಲಿದೆ.

ಪಂದ್ಯದಿಂದ ಆದಾಯ ಹೇಗೆ?

1. ಪ್ರಸಾರ ಹಕ್ಕು ಮಾರಾಟ.

2. ಟೂರ್ನಿಯ ಪ್ರಾಯೋಜಕತ್ವ

3. ಪಂದ್ಯಗಳ ಟಿಕೆಟ್‌ ಮಾರಾಟ

4. ಜಾಹೀರಾತು ಪ್ರದರ್ಶನ.

5. ಕಾನೂನುಬದ್ಧ ಬೆಟ್ಟಿಂಗ್‌(ಭಾರತದ ಹೊರಗಡೆ)

6. ವಿಮಾನ, ಹೋಟೆಲ್‌ ಬುಕ್ಕಿಂಗ್‌.

7. ಪ್ರವಾಸೋದ್ಯಮ.

8. ವ್ಯಾಪಾರ, ವಹಿವಾಟು.

ಯಾರಿಗೆಲ್ಲಾ ನಷ್ಟವಾಗುತ್ತೆ?

1. ಐಸಿಸಿ

2. ಬಿಸಿಸಿಐ

3. ಪಾಕ್‌ ಕ್ರಿಕೆಟ್‌

4. ಲಂಕಾ ಕ್ರಿಕೆಟ್‌

5. ಪ್ರಸಾರ ಸಂಸ್ಥೆಗಳು

6. ಐಸಿಸಿ ಸದಸ್ಯ ದೇಶಗಳು

7. ಹೋಟೆಲ್‌, ವಿಮಾನ.

8. ಪ್ರವಾಸೋದ್ಯಮ

ಐಸಿಸಿಗೆ ನಷ್ಟ ಹೇಗೆ?

1. ಪ್ರಾಯೋಜಕತ್ವದ ಹಣ ಸಿಗಲ್ಲ.

3. ಟಿಕೆಟ್‌ ಮಾರಾಟ ಇರಲ್ಲ.

3. ಪ್ರಸಾರ ಸಂಸ್ಥೆಗೆ ನಷ್ಟ ಕೊಡಬೇಕು.

4. ವಾರ್ಷಿಕ ಆದಾಯದಲ್ಲಿ ಕಡಿತ.

5. ಭವಿಷ್ಯದಲ್ಲಿ ಪ್ರಾಯೋಜಕತ್ವ, ಪ್ರಸಾರ ಹಕ್ಕು ಮೌಲ್ಯ ಕುಸಿತ ಸಂಭವ.

ಐಸಿಸಿ, ಸದಸ್ಯ ರಾಷ್ಟ್ರಗಳು, ಲಂಕಾ ಮಂಡಳಿಗೆ ಸಂಕಷ್ಟ

ಈ ಪಂದ್ಯ ರದ್ದುಗೊಂಡರೆ ಭಾರತ-ಪಾಕ್‌ ಹೊರತಾಗಿ ಐಸಿಸಿ, ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ಐಸಿಸಿಯ ಇತರ ಸದಸ್ಯ ದೇಶಗಳಿಗೆ ನಷ್ಟವಾಗುದು ಖಚಿತ. ಪಂದ್ಯ ರದ್ದಾದರೆ ಐಸಿಸಿಗೆ ಬರುವ ಆದಾಯ ಕಡಿತವಾಗಲಿದೆ. ಪ್ರಾಯೋಜಕರು, ಪ್ರಸಾರಕರಿಗೆ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಟಿಕೆಟ್‌ ಮಾರಾಟದ ಮೂಲಕ ಬರಬೇಕಿದ್ದ ಹಣ ಕೈತಪ್ಪಲಿದೆ. ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಲಂಕಾ ಕ್ರಿಕೆಟ್‌ ಮಂಡಳಿ ಐಸಿಸಿ ಬಳಿ ಪರಿಹಾರ ಕೇಳಬಹುದು. ಮತ್ತೊಂದೆಡೆ ಐಸಿಸಿ ಸದಸ್ಯ ದೇಶಗಳಿಗೂ ಇದರ ಪರಿಣಾಮ ತಟ್ಟಲಿದೆ. ವಾರ್ಷಿಕ ಆದಾಯದಲ್ಲಿ ಕಡಿತಗೊಳ್ಳಲಿದ್ದು, ಈ ಆದಾಯವನ್ನೇ ನಂಬಿಕೊಂಡಿರುವ ವಿಂಡೀಸ್‌, ಸ್ಕಾಟ್ಲೆಂಡ್‌, ಜಿಂಬಾಬ್ವೆ, ನಮೀಬಿಯಾ, ಆಫ್ಘನ್‌ ಸೇರಿದಂತೆ ಹಲವು ಮಂಡಳಿಗಳು ನಷ್ಟ ಅನುಭವಿಸಲಿದೆ.

ಬಹಿಷ್ಕಾರದ ನಿರ್ಧಾರದಿಂದ ಪಾಕ್‌ ಕ್ರಿಕೆಟ್‌ ಅಸ್ತಿತ್ವಕ್ಕೆ ದಕ್ಕೆ!

ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ ನೇರ ಪರಿಣಾಮ ಬೀರುವುದು ಪಾಕಿಸ್ತಾನದ ಮೇಲೆ. ಬಹಿಷ್ಕರಿಸಿದ್ದಕ್ಕೆ ಐಸಿಸಿ ಭಾರೀ ದಂಡ ಹೇರಬಹುದು. ಪ್ರಸಾರಕರು, ಪ್ರಾಯೋಜಕರಿಗೆ ಉಂಟಾಗುವ ನಷ್ಟವನ್ನು ಪಾಕಿಸ್ತಾನದಿಂದಲೇ ವಸೂಲಿ ಮಾಡಬಹುದು. ಸಾಮಾನ್ಯವಾಗಿ ಐಸಿಸಿ ಆದಾಯದಲ್ಲಿ ವಾರ್ಷಿಕವಾಗಿ ಪಾಕ್‌ಗೆ ಶೇ.5.75ರಷ್ಟು ಹಣ ಸಿಗುತ್ತದೆ. ಇದನ್ನು ಐಸಿಸಿ ತಡೆ ಹಿಡಿಯಬಹುದು. ಪಾಕ್‌ ವಿರುದ್ಧ ದ್ವಿಪಕ್ಷೀಯ ಸರಣಿ ಆಡದಂತೆ ಇತರೆ ದೇಶಗಳ ಮೇಲೆ ಐಸಿಸಿ ಒತ್ತಡ ಹೇರಬಹುದು. ಈ ಸರಣಿಗಳು ನಡೆಯದಿದ್ದರೆ ಪಾಕ್‌ಗೆ ಆದಾಯ ನಷ್ಟವಾಗಲಿದೆ. ಪಂದ್ಯಗಳೇ ಇಲ್ಲದಿದ್ದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ಐಸಿಸಿ ರ್‍ಯಾಂಕಿಂಗ್‌ ಮೇಲೆ ಪರಿಣಾಮ ಬೀರಲಿದೆ. ಪಾಕಿಸ್ತಾನ ಆಡುವ ಪಂದ್ಯಗಳಿಗೆ ಪ್ರಾಯೋಜಕತ್ವ ವಹಿಸದಂತೆ ಕಂಪೆನಿಗಳಿಗೆ ಐಸಿಸಿ ಸೂಚನೆ ನೀಡಬಹುದು. ಪಾಕ್‌ ಸೂಪರ್‌ ಲೀಗ್‌(ಪಿಎಸ್‌ಎಲ್‌)ನಲ್ಲಿ ಆಡದಂತೆ ವಿದೇಶಿ ಆಟಗಾರರಿಗೆ ಸೂಚನೆ ನೀಡಬಹುದು.

ಭಾರತಕ್ಕಿದೆಯೇ ಸಮಸ್ಯೆ?

ವರದಿಗಳ ಪ್ರಕಾರ, ಪಂದ್ಯ ನಡೆಯದಿದ್ದರೆ ಎರಡೂ ದೇಶಗಳ ಮಂಡಳಿಗಳು ನೇರ ಮತ್ತು ಪರೋಕ್ಷ ಆದಾಯದಲ್ಲಿ ತಲಾ ₹200 ಕೋಟಿ ಹಣವನ್ನು ತಕ್ಷಣವೇ ಕಳೆದುಕೊಳ್ಳಲಿದೆ. ಬಿಸಿಸಿಐಗೆ ಇದು ದೊಡ್ಡ ಹೊಡೆತವೇನಲ್ಲ. ಮತ್ತೊಂದೆಡೆ ಪಂದ್ಯ ರದ್ದಾದರೆ 2 ಅಂಕವೂ ಸಿಗಲಿದೆ. ಇದರಿಂದ ತಂಡ ಸುಲಭದಲ್ಲಿ ಸೂಪರ್‌-8 ಪ್ರವೇಶಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?
ಭಾರತ-ಪಾಕ್‌ ಪಂದ್ಯ ರದ್ದಾದ್ರೆ ₹2200 ಕೋಟಿ ನಷ್ಟ ಸಂಭವ!