ಚಾಂಪಿಯನ್ಸ್‌ ಟ್ರೋಫಿ : ಒಂದೂ ಜಯವಿಲ್ಲದೆ ಪಟ್ಟು ಹಿಡಿದು ಆತಿಥ್ಯ ಹಕ್ಕು ಉಳಿಸಿಕೊಂಡ ಪಾಕಿಸ್ತಾನ ಗುಡ್‌ಬೈ!

KannadaprabhaNewsNetwork | Updated : Feb 28 2025, 03:57 AM IST

ಸಾರಾಂಶ

ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯ ಮಳೆಗೆ ಬಲಿ. ಒಂದೂ ಗೆಲುವು ಕಾಣದೆ ಟೂರ್ನಿಗೆ ಗುಡ್‌ಬೈ ಹೇಳಿದ ಆತಿಥೇಯ ಪಾಕಿಸ್ತಾನ. ಬಾಂಗ್ಲಾಕ್ಕೂ ಸಿಗದ ಗೆಲುವು.

ರಾವಲ್ಪಿಂಡಿ: 29 ವರ್ಷ ಬಳಿಕ ಐಸಿಸಿ ಟೂರ್ನಿಯ ಆತಿಥ್ಯ ಸಿಕ್ಕಾಗ, ಬಿಸಿಸಿಐ ತೀವ್ರ ವಿರೋಧದ ನಡುವೆಯೂ ಪಟ್ಟು ಹಿಡಿದು ಆತಿಥ್ಯ ಹಕ್ಕು ಉಳಿಸಿಕೊಂಡಾಗ ಪಾಕಿಸ್ತಾನದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ಒಂದೂ ಗೆಲುವು ಕಾಣದೆ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ.

ಗುರುವಾರ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯಬೇಕಿದ್ದ ‘ಎ’ ಗುಂಪಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಪಂದ್ಯ ಟಾಸ್‌ ಕೂಡ ಕಾಣಲಿಲ್ಲ. ಈ ಪಂದ್ಯಕ್ಕೂ ಮೊದಲೇ ಎರಡೂ ತಂಡಗಳು ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದವು. ಆದರೆ, ಈ ಪಂದ್ಯದಲ್ಲಿ ಜಯಿಸಿ ಸಮಾಧಾನಪಟ್ಟುಕೊಳ್ಳುವ ಆಸೆಯೂ ಈಡೇರಲಿಲ್ಲ.

ರಾವಲ್ಪಿಂಡಿಯಲ್ಲಿ ಸತತ 2ನೇ ಪಂದ್ಯ ಮಳೆಗೆ ಬಲಿಯಾಯಿತು. ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯ ಕೂಡ ರದ್ದಾಗಿತ್ತು. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಬೇಕಿತ್ತು. ಆದರೆ ನಿರಂತರವಾಗಿ ಮಳೆ ಸುರಿದ ಕಾರಣ, ಸ್ಥಳೀಯ ಕಾಲಮಾನ 4 ಗಂಟೆ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು.ಪಾಕ್‌ಗೆ ಮುಖಭಂಗ: ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಪಾಕ್‌ ಹಾಗೂ ಬಾಂಗ್ಲಾ ಎರಡೂ ತಂಡಗಳು ಕೇವಲ ಒಂದು ಅಂಕ ಗಳಿಸಿದರೂ, ನೆಟ್‌ ರನ್‌ರೇಟ್‌ನಲ್ಲಿ ಬಾಂಗ್ಲಾ ಕೊಂಚ ಮುಂದಿದೆ. ಬಾಂಗ್ಲಾದ ನೆಟ್‌ ರನ್‌ರೇಟ್‌ -0.443 ಇದ್ದರೆ, ಪಾಕಿಸ್ತಾನದ ನೆಟ್‌ ರನ್‌ರೇಟ್‌ -1.087 ಇದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 60 ರನ್‌ಗಳಿಂದ ಸೋತಿದ್ದ ಪಾಕಿಸ್ತಾನ, 2ನೇ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ಗಳಿಂದ ಶರಣಾಗಿತ್ತು.ಕೋಟ್‌...ತುಂಬಾ ನೋವಾಗುತ್ತಿದೆ ತವರಿನ ಅಭಿಮಾನಿಗಳ ಮುಂದೆ ಉತ್ತಮ ಆಟವಾಡಬೇಕು ಎನ್ನುವುದು ನಮ್ಮ ಗುರಿಯಾಗಿತ್ತು. ಆದರೆ ನಮ್ಮ ಪ್ರದರ್ಶನದಿಂದ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆಯಾಗಿರಲಿದೆ. ಈ ಫಲಿತಾಂಶವು ನಮ್ಮೆಲ್ಲರಿಗೂ ಬಹಳ ನೋವುಂಟು ಮಾಡಿದೆ. ನಮ್ಮಿಂದಾಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

- ಮೊಹಮದ್‌ ರಿಜ್ವಾನ್‌, ಪಾಕಿಸ್ತಾನದ ನಾಯಕ

ಭಾರತ ವಿರುದ್ಧ ಭಾರಿ ಒತ್ತಡವಿತ್ತು

ಈ ಟೂರ್ನಿಯಲ್ಲಿ ನಾವು ಉತ್ತಮವಾಗಿ ಆಡಲಿಲ್ಲ. ಹಲವು ಪ್ರಮುಖ ಆಟಗಾರರು ಗಾಯಗೊಂಡಿದ್ದ ಕಾರಣ ಅವರೆಲ್ಲರ ಅನುಪಸ್ಥಿತಿಯಲ್ಲಿ ನಾವು ಆಡಿದೆವು. ಭಾರತ ವಿರುದ್ಧದ ಪಂದ್ಯದಲ್ಲಿ ಭಾರೀ ಒತ್ತಡಕ್ಕೆ ಸಿಲುಕಿದ್ದೇ ನಮಗೆ ಸೋಲು ಎದುರಾಗಲು ಕಾರಣ.

- ಅಜರ್‌ ಮಹ್ಮೂದ್‌, ಪಾಕ್‌ ಸಹಾಯಕ ಕೋಚ್‌

Share this article