ಡಚ್‌ ಶಾಕ್‌ನಿಂದ ಪಾರಾದ ಪಾಕಿಸ್ತಾನ!

KannadaprabhaNewsNetwork | Updated : Oct 07 2023, 11:44 AM IST

ಸಾರಾಂಶ

81 ರನ್‌ ಗೆಲುವು ಸಂಪಾದಿಸಿದ ಪಾಕಿಸ್ತಾನ, ಶುಭಾರಂಭ ಮಾಡಿತು.

ಹೈದರಾಬಾದ್‌: ಅರ್ಹತಾ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್‌ಗೆ ಆಘಾತ ನೀಡಿ, ಮಾಜಿ ಚಾಂಪಿಯನ್ನರನ್ನು ವಿಶ್ವಕಪ್‌ನಿಂದ ಹೊರಹಾಕಿದ್ದ ನೆದರ್‌ಲೆಂಡ್ಸ್‌ ಶುಕ್ರವಾರ ಪಾಕಿಸ್ತಾನಕ್ಕೂ ಶಾಕ್‌ ನೀಡುವ ನಿರೀಕ್ಷೆ ಮೂಡಿಸಿತ್ತಾದರೂ, ಡಚ್‌ ಪಡೆಯ ಕನಸು ನನಸಾಗಲಿಲ್ಲ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ನಿರೀಕ್ಷಿತ ಯಶಸ್ಸು ಕಾಣದಿದ್ದರೂ 81 ರನ್‌ ಗೆಲುವು ಸಂಪಾದಿಸಿದ ಪಾಕಿಸ್ತಾನ, ಶುಭಾರಂಭ ಮಾಡಿತು. ಟಾಸ್‌ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಪಾಕಿಸ್ತಾನ 300+ ರನ್‌ ಕಲೆಹಾಕುವ ನಿರೀಕ್ಷೆಯೊಂದಿಗೆ ಇನ್ನಿಂಗ್ಸ್‌ ಆರಂಭಿಸಿತು. ಆದರೆ ನೆದರ್‌ಲೆಂಡ್ಸ್‌ನ ಮಾರಕ ಬೌಲಿಂಗ್‌ ದಾಳಿ ಎದುರು ಪಾಕ್‌ ಅಗ್ರ ಕ್ರಮಾಂಕ ಕುಸಿಯಿತು. 

ಒಂದು ಹಂತದಲ್ಲಿ 200ರೊಳಗೆ ಆಲೌಟ್‌ ಆಗುವ ಭೀತಿಯಲ್ಲಿದ್ದ ಪಾಕಿಸ್ತಾನ, ಕೆಳ ಕ್ರಮಾಂಕದ ಕೊಡುಗೆಯಿಂದಾಗಿ 286 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಡಚ್‌ ಹೋರಾಟ: ದೊಡ್ಡ ಆರಂಭ ಸಿಗದಿದ್ದರೂ, ವಿಕ್ರಂಜಿತ್‌ ಸಿಂಗ್‌ ಹಾಗೂ ಬಸ್‌ ಡಿ ಲೀಡೆ, ನೆದರ್‌ಲೆಂಡ್ಸ್‌ ಗೆಲುವಿನ ಆಸೆ ಕೈಬಿಡದಂತೆ ನೋಡಿಕೊಂಡರು. 3ನೇ ವಿಕೆಟ್‌ಗೆ ಇಬ್ಬರಿಬ್ಬರ ನಡುವೆ 70 ರನ್‌ ಜೊತೆಯಾಟ ಮೂಡಿಬಂತು. ಇವರಿಬ್ಬರು ಕ್ರೀಸ್‌ನಲ್ಲಿ ನೆಲೆಯೂರಿ ಉತ್ತಮ ಆಟವಾಡಿದ್ದು ಪಾಕ್‌ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. 

ಆದರೆ ಅರ್ಧಶತಕದ ಬಳಿಕ ವಿಕ್ರಂಜಿತ್‌(52) ತಂಡದ ರನ್‌ ಗಳಿಕೆಗೆ ವೇಗ ತುಂಬವ ಯತ್ನದಲ್ಲಿ ಔಟಾದರು. ಅಲ್ಲಿಂದ ಮುಂದಕ್ಕೆ ನೆದರ್‌ಲೆಂಡ್ಸ್‌ ಸೋಲಿನತ್ತ ಮುಖ ಮಾಡಿತು. ಡಿ ಲೀಡೆ 67 ರನ್‌ ಗಳಿಸಿ ತಂಡ ತೀರಾ ಕಳಪೆ ಮೊತ್ತಕ್ಕೆ ಆಲೌಟ್‌ ಆಗುವುದನ್ನು ತಪ್ಪಿಸಿದರು. ಪಾಕಿಸ್ತಾನದ ಅಗ್ರ-3 ವೇಗಿಗಳಾದ ಶಾಹೀನ್‌ ಶಾ ಅಫ್ರಿದಿ 1, ಹಸನ್‌ ಅಲಿ 2, ಹ್ಯಾರಿಸ್‌ ರೌಫ್‌ 3 ವಿಕೆಟ್‌ ಕಬಳಿಸಿದರೆ, ಮೂವರು ಸ್ಪಿನ್ನರ್‌ಗಳು ಒಟ್ಟಾಗಿ 3 ವಿಕೆಟ್‌ ಕಿತ್ತರು. 9 ವೈಡ್‌ಗಳನ್ನು ಎಸೆದಿದ್ದು ಪಾಕಿಸ್ತಾನದ ಬೌಲರ್‌ಗಳ ಸ್ಥಿರತೆಯನ್ನು ಪ್ರಶ್ನಿಸುವಂತೆ ಮಾಡಿತು. ಪಾಕ್‌ ಕಾಪಾಡಿದ 2 ಜೊತೆಯಾಟ: ಪಾಕ್‌ ಆರಂಭಿಕರಾದ ಇಮಾಮ್‌(15), ಫಖರ್‌(12) ಕಳಪೆ ಲಯ ಮುಂದುವರಿಸಿದರೆ, ನಾಯಕ ಬಾಬರ್‌(05) ವೈಫಲ್ಯ ಕಂಡರು. 10ನೇ ಓವರಲ್ಲಿ 38 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತು. ಪಾಕ್‌ ತಂಡವನ್ನು ಎರಡು ಜೊತೆಯಾಟಗಳು ಕಾಪಾಡಿದವು. ಮೊದಲು 4ನೇ ವಿಕೆಟ್‌ಗೆ ಮೊಹಮದ್‌ ರಿಜ್ವಾನ್‌ ಹಾಗೂ ಸೌದ್‌ ಶಕೀಲ್‌ 120 ರನ್‌ ಸೇರಿಸಿದರು. 

ರಿಜ್ವಾನ್‌ ಹಾಗೂ ಶಕೀಲ್‌ ತಲಾ 68 ರನ್‌ ಕೊಡುಗೆ ನೀಡಿದ ಬಳಿಕವೂ ಪಾಕ್‌ ಪಾಳಯದಲ್ಲಿ ಆತಂಕ ಕಡಿಮೆಯಾಗಿರಲಿಲ್ಲ. ಕಾರಣ ತಂಡ 188 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು. ಬಳಿಕ 7ನೇ ವಿಕೆಟ್‌ಗೆ ಮೊಹಮದ್ ನವಾಜ್‌ ಹಾಗೂ ಶದಾಬ್‌ ಖಾನ್‌ 64 ರನ್‌ ಸೇರಿಸಿ, ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು. ನವಾಜ್‌ 39, ಶದಾಬ್‌ 32 ರನ್‌ ಕೊಡುಗೆ ನೀಡಿದರು. ಈ ಎರಡು ಜೊತೆಯಾಟಗಳನ್ನು ಮುರಿದಿದ್ದರೆ ಡಚ್‌ ಪಡೆಯ ಗೆಲುವಿನ ಹಾದಿ ಸಲೀಸಾಗುತ್ತಿತ್ತು. ಸ್ಕೋರ್‌: ಪಾಕಿಸ್ತಾನ 49 ಓವರಲ್ಲಿ 286/10 (ಶಕೀಲ್‌ 68, ರಿಜ್ವಾನ್‌ 68, ಡಿ ಲೀಡೆ 4-62), ನೆದರ್‌ಲೆಂಡ್ಸ್‌ 41 ಓವರಲ್ಲಿ 205/10 (ಡಿ ಲೀಡೆ 67, ವಿಕ್ರಂಜಿತ್‌ 52, ರೌಫ್‌ 3-43, ಹಸಲ್‌ 2-33) ಪಂದ್ಯಶ್ರೇಷ್ಠ: ಸೌದ್‌ ಶಕೀಲ್‌ ಟರ್ನಿಂಗ್‌ ಪಾಯಿಂಟ್‌ ಡಿ ಲೀಡೆ ಹಾಗೂ ವಿಕ್ರಂಜಿತ್‌ರ ಜೊತೆಯಾಟ ಮುರಿದಿದ್ದು ಪಾಕ್‌ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಈ ಇಬ್ಬರು ಇನ್ನು 10-15 ಓವರ್‌ ಬ್ಯಾಟ್‌ ಮಾಡಿದ್ದರೆ, ನೆದರ್‌ಲೆಂಡ್ಸ್‌ ಗೆಲುವಿನ ಸನಿಹಕ್ಕೆ ತಲುಪುವ ಸಾಧ್ಯತೆ ಇತ್ತು. 

ನೆದರ್‌ಲೆಂಡ್ಸ್‌ಗೆ ಮುಂದಿನ ಪಂದ್ಯ: ಅ.9ಕ್ಕೆ ನ್ಯೂಜಿಲೆಂಡ್‌ ವಿರುದ್ಧ, ಹೈದರಾಬಾದ್‌ ಪಾಕಿಸ್ತಾನಕ್ಕೆ ಮುಂದಿನ ಪಂದ್ಯ: ಅ.10ಕ್ಕೆ, ಶ್ರೀಲಂಕಾ ವಿರುದ್ಧ, ಹೈದರಾಬಾದ್‌

Share this article