ನವದೆಹಲಿ: ಭಾರತ ಹಾಗೂ ಶ್ರೀಲಂಕಾ ನಡುವೆ ಜುಲೈ, ಆಗಸ್ಟ್‌ನಲ್ಲಿ ನಡೆಯಲಿರುವ ಸೀಮಿತ ಓವರ್ ಸರಣಿಗಳಿಗೆ ನಿಗದಿಯಾಗಿದೆ. ಗುರುವಾರ ಬಿಸಿಸಿಐ ಈ ಬಗ್ಗೆ ಪ್ರಕಟಣೆ ನೀಡಿದ್ದು, ಜು.26, 27 ಹಾಗೂ 29 ರಂದು ನಡೆಯಲಿರುವ ಟಿ20 ಪಂದ್ಯಗಳಿಗೆ ಪಲ್ಲೆಕೆಲ್ಲೆ ಆತಿಥ್ಯ ವಹಿಸಲಿದೆ. ಇನ್ನು ಆ.1, 4 ಹಾಗೂ 7 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.
ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್‌ಗೆ ಇದು ಮೊದಲ ಸರಣಿ ಆಗಲಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ. ಸರಣಿಗೆ ಭಾರತ ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ಸಿಗಲಿದೆ ಎಂದು ತಿಳಿದುಬಂದಿದೆ. ಏಕದಿನ ಸರಣಿಯಲ್ಲಿ ಕೆ.ಎಲ್.ರಾಹುಲ್, ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಲಂಕಾ ಟಿ20 ನಾಯಕ ಸ್ಥಾನ ತ್ಯಜಿಸಿದ ಹಸರಂಗ
ಕೊಲಂಬೊ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ, ತಂಡದ ನಾಯಕನ ಸ್ಥಾನಕ್ಕೆ ವಾನಿಂಡು ಹಸರಂಗ ರಾಜೀನಾಮೆ ನೀಡಿದ್ದಾರೆ. ಭಾರತ ವಿರುದ್ಧ ಇದೇ ತಿಂಗಳು ನಡೆಯಲಿರುವ ಟಿ20 ಸರಣಿಗೆ ಲಂಕಾ ಕ್ರಿಕೆಟ್ ಮಂಡಳಿ ಹೊಸ ನಾಯಕನನ್ನು ನೇಮಿಸಬೇಕಿದೆ.
ಭಾರತಕ್ಕೆ ಡೊಶ್ಕಾಟೆ ಸಹಾಯಕ ಕೋಚ್?
ನವದೆಹಲಿ: ನೆದರ್‌ಲೆಂಡ್ಸ್‌ನ ಮಾಜಿ ಕ್ರಿಕೆಟಿಗ ರ್‍ಯಾನ್ ಟೆನ್ ಡೊಶ್ಕಾಟೆಯನ್ನು ಟೀಂ ಇಂಡಿಯಾದ ಸಹಾಯಕ ಕೋಚ್ ಆಗಿ ನೇಮಿಸುವಂತೆ ನೂತನ ಕೋಚ್ ಗೌತಮ್ ಗಂಭೀರ್ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಡೊಶ್ಕಾಟೆ ಕೆಕೆಆರ್ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿದ್ದರು. ಬಳಿಕ ತಂಡದ ಫೀಲ್ಡಿಂಗ್ ಕೋಚ್ ಆಗಿ ಸಹ ಕಾರ್ಯನಿರ್ವಹಿಸಿದ್ದು, ಗಂಭೀರ್‌ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.