17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನ ಮೊದಲ ದಿನ ಭಾರತಕ್ಕೆ ಪದಕ ಲಭಿಸದಿದ್ದರೂ, ಕೆಲ ಅಥ್ಲೀಟ್‌ಗಳು ತಮ್ಮ ಅಭೂತಪೂರ್ವ ಪ್ರದರ್ಶನದ ಮೂಲಕ ಪದಕ ಭರವಸೆ ಮೂಡಿಸಿದ್ದಾರೆ.
ಪ್ಯಾರಿಸ್: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನ ಮೊದಲ ದಿನ ಭಾರತಕ್ಕೆ ಪದಕ ಲಭಿಸದಿದ್ದರೂ, ಕೆಲ ಅಥ್ಲೀಟ್‌ಗಳು ತಮ್ಮ ಅಭೂತಪೂರ್ವ ಪ್ರದರ್ಶನದ ಮೂಲಕ ಪದಕ ಭರವಸೆ ಮೂಡಿಸಿದ್ದಾರೆ. ಎರಡು ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಶೀತಲ್ ದೇವಿ ಗುರುವಾರ ರ್‍ಯಾಂಕಿಂಗ್ ಸುತ್ತಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇತರ ಸ್ಪರ್ಧೆಗಳಲ್ಲಿ ಭಾರತ ಮಿಶ್ರ ಫಲ ಅನುಭವಿಸಿದೆ.17 ವರ್ಷದ ಶೀತಲ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರ್‍ಯಾಂಕಿಂಗ್ ಸುತ್ತಿನಲ್ಲಿ 720ರ ಪೈಕಿ 703 ಅಂಕ ಗಳಿಸಿದರೆ, ಟರ್ಕಿಯ ಒಜ್ನುರ್ ಗಿರ್ಡಿ ಕ್ಯೂರ್ 704 ಅಂಕ ಗಳಿಸಿದರು.
ಇವರೆಡೂ ಪ್ಯಾರಾಲಿಂಪಿಕ್ಸ್ ಹಾಗೂ ವಿಶ್ವ ದಾಖಲೆ ಎನಿಸಿಕೊಂಡಿತು. ಇತ್ತೀಚೆಗಷ್ಟೇ ಗ್ರೇಟ್ ಬ್ರಿಟನ್‌ನ ಪೀಟರ್ಸ್‌ನ ಪೈನ್ 698 ಅಂಕಗಳನ್ನು ಗಳಿಸಿದ್ದು ವಿಶ್ವ ದಾಖಲೆಯಾಗಿತ್ತು. 2021ರಲ್ಲಿ ಟೋಕಿಯೋದಲ್ಲಿ ಗ್ರೇಟ್ ಬ್ರಿಟನ್‌ನ ಸ್ಟ್ರೆಟನ್ ಜೆಸ್ಸಿಕಾ 694 ಅಂಕ ಗಳಿಸಿದ್ದು ಪ್ಯಾರಾಲಿಂಪಿಕ್ಸ್ ದಾಖಲೆ ಎನಿಸಿಕೊಂಡಿತ್ತು. ಸದ್ಯ ಎರಡೂ ದಾಖಲೆ ಪತನಗೊಂಡಿದೆ. ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದ ಟರ್ಕಿನ ಒಜ್ನುರ್, 2ನೇ ಸ್ಥಾನ ಗಳಿಸಿದ ಶೀತಲ್ ಅಂತಿಮ 16ರ ಘಟ್ಟಕ್ಕೆ ನೇರ ಪ್ರವೇಶ ಪಡೆದರು.ಕಳೆದ ವರ್ಷ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದಿದ್ದ ಶೀತಲ್ ದೇವಿ ಈ ಬಾರಿ ಚೊಚ್ಚಲ ಪ್ಯಾರಾಲಿಂಪಿಕ್ಸ್ ಪದಕದ ನಿರೀಕ್ಷೆಯಲ್ಲಿದ್ದಾರೆ. ಶನಿವಾರ ಅವರು ಅಂತಿಮ 16ರ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.
ಟೆಕ್ವಾಂಡೋ, ಸೈಕ್ಲಿಂಗ್‌ನಲ್ಲಿ ಭಾರತಕ್ಕೆ ಕೈತಪ್ಪಿದ ಪದಕ
ಕ್ರೀಡಾಕೂಟದ ಮೊದಲ ದಿನವೇ ಪದಕ ಗೆಲ್ಲುವ ಅವಕಾಶವನ್ನು ಭಾರತ ಕಳೆದುಕೊಂಡಿತು. ಗುರುವಾರ ಮಹಿಳೆಯರ ಕೆ 44-47 ಕೆ.ಜಿ. ವಿಭಾಗದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಅರುಣಾ ಸಿಂಗ್ ಅಂತಿಮ 167ರ ಸುತ್ತಿನಲ್ಲಿ ಸೋತು ಹೊರಬಿದ್ದರು. ಪಂದ್ಯದಲ್ಲಿ ಅವರು ಟರ್ಕಿಯ ನರ್ಕಿಹಾನ್ ಎಕಿನ್ಚಿ ವಿರುದ್ಧ 0-19ರಲ್ಲಿ ಪರಾಭವಗೊಂಡರು.ಇನ್ನು, ಸೈಕ್ಲಿಂಗ್‌ನ ಮಹಿಳೆಯರ ಸಿ1-3 3000 ಮೀ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಜ್ಯೋತಿ ಗಡೇರಿಯಾ ಅರ್ಹತಾ ಸುತ್ತಿನಲ್ಲಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅವರು 4 ನಿಮಿಷ 53.929 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಈ ಎರಡೂ ವಿಭಾಗಗಳಲ್ಲಿ ಭಾರತ ಈ ವರೆಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿಲ್ಲ. ಈ ಬಾರಿ ಪದಕ ಬರ ನೀಗಿಸುವ ಅವಕಾಶವಿದ್ದರೂ ಕೈಗೂಡಲಿಲ್ಲ.