ಅನುಮತಿ ಗೊಂದಲಗಳಿಗೆ ಬ್ರೇಕ್‌ : ಬೆಂಗಳೂರಿನಲ್ಲಿ ಐಪಿಎಲ್‌ ಖಚಿತ

Published : Mar 17, 2026, 06:56 AM IST
Chinnaswamy stadium

ಸಾರಾಂಶ

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ಗೆ ಈಗ ರಾಜ್ಯ ಸರ್ಕಾರ ಅಧಿಕೃತ ಗ್ರೀನ್‌ ಸಿಗ್ನಲ್‌ಹಲವು ಸುತ್ತಿನ ಪರಿಶೀಲನೆ ಬಳಿಕ ಲೀಗ್‌ಗೆ ಅನುಮತಿ । ಮಾ.28ಕ್ಕೆ ಉದ್ಘಾಟನಾ ಪಂದ್ಯ

  ಬೆಂಗಳೂರು :  ನಗರದ ಐತಿಹಾಸಿಕ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ. ಇದರೊಂದಿಗೆ ಮಾ.28ಕ್ಕೆ ಆರಂಭಗೊಳ್ಳಲಿರುವ 19ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದು ಖಚಿತವಾಗಿದೆ.

2025ರ ಜೂ.4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳನ್ನು ಆಯೋಜಿಸಬೇಕಿದ್ದರೆ ಹಲವು ಬದಲಾವಣೆಗಳನ್ನು ಮಾಡಲು ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಶಿಫಾರಸು ಮಾಡಿತ್ತು. ಇದರ ಮೇಲ್ವಿಚಾರಣೆಗೆ ಸರ್ಕಾರವು ಹಲವು ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿಯನ್ನೂ ರಚಿಸಿತ್ತು.

ಇತ್ತೀಚೆಗಷ್ಟೇ ಟೂರ್ನಿಗೆ ಷರತ್ತುಬದ್ಧ ಅನುಮತಿ ನೀಡಿದ್ದ ಸರ್ಕಾರ, ಕ್ರೀಡಾಂಗಣದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಮಾ.15ರ ಗಡುವು ವಿಧಿಸಿತ್ತು. ಇದರ ಭಾಗವಾಗಿ ಮಾ.13ರಂದು ತಜ್ಞರ ಸಮಿತಿ ಕ್ರೀಡಾಂಗಣಕ್ಕೆ ಆಗಮಿಸಿ, ಕೆಎಸ್‌ಸಿಎ ಕೈಗೊಂಡಿರುವ ಕೆಲಸಗಳನ್ನು ಪರಿಶೀಲಿಸಿತ್ತು.

ಸೋಮವಾರ ತಜ್ಞರ ಸಮಿತಿ, ಕೆಎಸ್‌ಸಿಎ, ಆರ್‌ಸಿಬಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ ಜಿ.ಪರಮೇಶ್ವರ್‌ ಅವರು, ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದರು. ‘ಕ್ರೀಡಾಂಗಣದಲ್ಲಿ ಆಗಿರುವ ಬದಲಾವಣೆಯನ್ನು ಪರಿಶೀಲಿಸಿದ ಬಳಿಕ ತಜ್ಞರ ಸಮಿತಿ ಸಲ್ಲಿಸಿದ್ದ ವರದಿ ಆಧರಿಸಿದ ಗೃಹ ಸಚಿವ ಪರಮೇಶ್ವರ್‌ ಅವರು ಐಪಿಎಲ್‌ಗೆ ಅನುಮತಿ ನೀಡಿದ್ದಾರೆ’ ಎಂದು ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್‌ ಮೃತ್ಯುಂಜಯ ತಿಳಿಸಿದ್ದಾರೆ.

5 ಪಂದ್ಯ:

ಈಗಾಗಲೇ ಐಪಿಎಲ್‌ನ ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು ಉದ್ಘಾಟನಾ ಪಂದ್ಯದ ಆತಿಥ್ಯವನ್ನು ಬೆಂಗಳೂರಿಗೆ ನೀಡಲಾಗಿದೆ. ಅಲ್ಲದೇ ಮೊದಲ ಹಂತದಲ್ಲಿ ಏ.5ರಂದು ಮತ್ತೊಂದು ಪಂದ್ಯ ನಿಗದಿಯಾಗಿದೆ. ಒಟ್ಟಾರೆಯಾಗಿ ಆರ್‌ಸಿಬಿ ತನ್ನ ತವರಿನ 7 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ಆಡಲಿದೆ. ಇನ್ನೆರಡು ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿವೆ. ಐಪಿಎಲ್‌ಗೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಬೇಕಿದೆ.

ಒಂಬತ್ತು ತಿಂಗಳ ಹೈಡ್ರಾಮಕ್ಕೆ ತೆರೆ

ಕಳೆದ ವರ್ಷ ಜೂನ್‌ನಲ್ಲಿ ಉಂಟಾದ ಕಾಲ್ತುಳಿತದ ಬಳಿಕ ಈವರೆಗೂ ಚಿನ್ನಸ್ವಾಮಿ ಕ್ರೀಡಾಂಗಣ ಗೊಂದಲದ ಗೂಡಾಗಿತ್ತು. ಕಾಲ್ತುಳಿದ ಬಳಿಕ ಹಲವು ಮಹತ್ವದ ಟೂರ್ನಿಗಳು ಚಿನ್ನಸ್ವಾಮಿಯಿಂದ ಸ್ಥಳಾಂತರಗೊಂಡಿದ್ದವು. ಹೀಗಾಗಿ ಐಪಿಎಲ್‌ ನಡೆಯುವುದು ಕೂಡಾ ಅನುಮಾನ ಎನಿಸಿತ್ತು. ಬಳಿಕ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ ಹೊರತಾಗಿಯೂ, ಆರ್‌ಸಿಬಿ ತಂಡ ಬೆಂಗಳೂರಲ್ಲಿ ಆಡಲು ಹಿಂದೇಟು ಹಾಕಿತ್ತು. ಇತ್ತೀಚೆಗಷ್ಟೇ ಆರ್‌ಸಿಬಿ ಫ್ರಾಂಚೈಸಿಯು ಬೆಂಗಳೂರಿಗೆ ಮರಳುವುದಾಗಿ ಘೋಷಿಸಿತ್ತು. ಈಗ ಅಧಿಕೃತ ಅನುಮತಿ ಸಿಗುವುದರೊಂದಿಗೆ ಎಲ್ಲಾ ಹೈಡ್ರಾಮಾಗಳಿಗೆ ತೆರೆ ಬಿದ್ದಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ದ್ರಾವಿಡ್‌, ರೋಜರ್‌ ಬಿನ್ನಿ, ಮಿಥಾಲಿಗೆ ಬಿಸಿಸಿಐ ಜೀವಮಾನ ಸಾಧನೆ ಗೌರವ
ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌