ನವದೆಹಲಿ: ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಕುಮಾರ್‌ರನ್ನು ಭಾರತದ ನಾಯಕನಾಗಿ ಘೋಷಿಸಲು ಆಟಗಾರರ ಅಭಿಪ್ರಾಯವೇ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್ ಶ್ರೀಲಂಕಾ ಸರಣಿ ಮೂಲಕ ಭಾರತದ ಭವಿಷ್ಯದ ಟಿ20 ನಾಯಕನಾಗುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಟೀಂ ಇಂಡಿಯಾ ಆಟಗಾರರು ಸೂರ್ಯಕುಮಾರ್ ಪರ ಬ್ಯಾಟ್ ಮಾಡಿದ ಕಾರಣ ಹಾರ್ದಿಕ್‌ಗೆ ನಾಯಕತ್ವ ತಪ್ಪಿದೆ.
ಹಾರ್ದಿಕ್‌ಗಿಂತ ಸೂರ್ಯ ಬಗ್ಗೆ ಹೆಚ್ಚಿನ ನಂಬಿಕೆ ಇದೆ ಎಂದು ಆಟಗಾರರಿಂದ ಅಭಿಪ್ರಾಯ ವ್ಯಕ್ತವಾಗಿದ್ದು, ಸೂರ್ಯ ನಾಯಕತ್ವದಲ್ಲಿ ಆಡುವುದಕ್ಕೆ ಹೆಚ್ಚಿನ ಆಟಗಾರರು ಒಲವು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ಸೂರ್ಯಗೆ ನಾಯಕತ್ವದ ಹೊಣೆ ನೀಡಿದೆ ವರದಿಯಾಗಿದೆ.ಅಲ್ಲದೆ, ಪಾಂಡ್ಯ ಸತತವಾಗಿ ಗಾಯಗೊಳ್ಳುತ್ತಿರುವುದು ಕೂಡಾ ಅವರನ್ನು ನಾಯಕತ್ವಕ್ಕೆ ಪರಿಗಣಿಸದಿರಲು ಪ್ರಮುಖ ಕಾರಣ ಎಂದು ವರದಿಯಾಗಿದೆ.
ಮಾತು ಕೇಳದ ಇಶಾನ್ ಕಿಶನ್‌ಗೆ ಬಿಸಿಸಿಐ ಚಾಟಿ!
ನವದೆಹಲಿ: ರಾಷ್ಟ್ರೀಯ ತಂಡದಿಂದ ಹೊರಗಿದ್ದಾಗ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಶಾನ್ ಕಿಶನ್ ವಿಚಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮತ್ತೆ ಕಠಿಣ ನಿಲುವು ತಾಳಿದೆ.
ತನ್ನ ಮಾತು ಕೇಳದ ಕಾರಣಕ್ಕೆ ಇಶಾನ್‌ರನ್ನು ಜಿಂಬಾಬ್ವೆ, ಶ್ರೀಲಂಕಾ ವಿರುದ್ಧ ಸರಣಿಗೂ ಆಯ್ಕೆ ಮಾಡಲು ಆಯ್ಕೆ ಸಮಿತಿ ಮನಸ್ಸು ಮಾಡಿಲ್ಲ. ಈ ಮೂಲಕ ‘ದೇಸಿ ಕ್ರಿಕೆಟ್ ಆಡಿ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ’ ಎಂಬ ಸಂದೇಶ ರವಾನಿಸಿದೆ.ಇಶಾನ್ ಕಳೆದ ವರ್ಷ ನವೆಂಬರ್‌ನಲ್ಲಿ ಭಾರತ ಪರ ಕೊನೆ ಟಿ20 ಪಂದ್ಯವಾಡಿದ್ದರು. ಬಳಿಕ ತಂಡದಿಂದ ಹೊರಬಿದ್ದಿರುವ ಇಶಾನ್, ದೇಸಿ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ.
ದೇಸಿ ಕ್ರಿಕೆಟ್ ಆಡುವಂತೆ ಬಿಸಿಸಿಐ ಸೂಚಿಸಿದ್ದರೂ, ಅದನ್ನು ಇಶಾನ್ ಕಡೆಗಣಿಸಿದ್ದರು. ಹೀಗಾಗಿ ಯಾವುದೇ ಸರಣಿಗೂ ಅವರನ್ನು ಆಯ್ಕೆ ಮಾಡಿಲ್ಲ. ಇದರೊಂದಿಗೆ ಇಶಾನ್ ಇನ್ನು ಭಾರತ ತಂಡಕ್ಕೆ ವಾಪಸಾಗಬೇಕಿದ್ದರೆ ದೇಸಿ ಟೂರ್ನಿಗಳಲ್ಲಿ ಆಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾರತ ತಂಡದಲ್ಲಿ ಈಗಾಗಲೇ ರಿಷಭ್ ಪಂತ್, ಕೆ.ಎಲ್.ರಾಹುಲ್ ಜೊತೆ ಸಂಜು ಸ್ಯಾಮ್ಸನ್ ಕೂಡಾ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಕಾರಣ ಇಶಾನ್ ಕಮ್‌ಬ್ಯಾಕ್ ಹಾದಿ ಕೂಡಾ ಕಠಿಣವಾಗಿದೆ.