ಟಿ20 ವಿಶ್ವಕಪ್‌: ನಿಕೋಲಸ್‌ ಪೂರನ್‌ ಅಬ್ಬರಕ್ಕೆ ಆಫ್ಘನ್‌ ಥಂಡಾ, ವಿಂಡೀಸ್‌ಗೆ 104 ರನ್‌ ಜಯ

KannadaprabhaNewsNetwork |  
Published : Jun 19, 2024, 01:01 AM IST
ಅಫ್ಘಾನಿಸ್ತಾನ ವಿರುದ್ಧ ಕೇವಲ 53 ಎಸೆತದಲ್ಲಿ 98 ರನ್‌ ಸಿಡಿಸಿದ ವೆಸ್ಟ್‌ಇಂಡೀಸ್‌ನ ನಿಕೋಲಸ್‌ ಪೂರನ್‌.  | Kannada Prabha

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ಮುಂದುವರಿದ ವೆಸ್ಟ್‌ಇಂಡೀಸ್‌ನ ಗೆಲುವಿನ ನಾಗಾಲೋಟ. ನಿಕೋಲಸ್‌ ಪೂರನ್‌ ಆರ್ಭಟಕ್ಕೆ ಅಫ್ಘಾನಿಸ್ತಾನ ಕಕ್ಕಾಬಿಕ್ಕಿ. ಅಜೇಯವಾಗಿ ಸೂಪರ್‌-8ಗೆ ಕಾಲಿಟ್ಟ ವಿಂಡೀಸ್‌.

ಗ್ರಾಸ್‌ ಐಲೆಟ್‌: ನಿಕೋಲಸ್‌ ಪೂರನ್‌ರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ, ‘ಸಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 104 ರನ್‌ಗಳ ಬೃಹತ್‌ ಗೆಲುವು ಸಾಧಿಸಿ, ಗುಂಪು ಹಂತವನ್ನು ಅಜೇಯವಾಗಿ ಮುಕ್ತಾಯಗೊಳಿಸಿದೆ.ಈ ಪಂದ್ಯಕ್ಕೂ ಮೊದಲೇ ಎರಡೂ ತಂಡಗಳು ಸೂಪರ್‌-8 ಹಂತಕ್ಕೆ ಪ್ರವೇಶಿಸಿದ್ದರಿಂದ ಈ ಪಂದ್ಯ ಹೆಚ್ಚಾಗಿ ಮಹತ್ವ ಪಡೆದಿರಲಿಲ್ಲ. ಆದರೂ, ಸೂಪರ್‌-8ಗೆ ಕಾಲಿಡುವ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎರಡೂ ತಂಡಗಳು ಉತ್ಸುಕಗೊಂಡಿದ್ದವು.

ಪೂರನ್‌ರ ಅಬ್ಬರದ ಬ್ಯಾಟಿಂಗ್‌ ಆಫ್ಘನ್‌ ಪಡೆಯ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಅಬ್ಬರಿಸಿ ಬೊಬ್ಬಿರಿದ ಪೂರನ್‌ 53 ಎಸೆತದಲ್ಲಿ 98 ರನ್‌ ಸಿಡಿಸಿ ಶತಕ ವಂಚಿತರಾದರು. 6 ಬೌಂಡರಿ, 8 ಸಿಕ್ಸರ್‌ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಪವರ್‌-ಪ್ಲೇನಲ್ಲಿ 1 ವಿಕೆಟ್‌ಗೆ 92 ರನ್‌ ಚಚ್ಚಿದ ವಿಂಡೀಸ್‌, 20 ಓವರಲ್ಲಿ 5 ವಿಕೆಟ್‌ಗೆ 218 ರನ್‌ ಪೇರಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್‌ನ ಗರಿಷ್ಠ ಮೊತ್ತ.ಬೃಹತ್‌ ಮೊತ್ತ ಬೆನ್ನತ್ತಿದ ವಿಂಡೀಸ್‌, 16.2 ಓವರಲ್ಲಿ 114 ರನ್‌ಗೆ ಆಲೌಟ್‌ ಆಯಿತು. ಇಬ್ರಾಹಿಂ ಜದ್ರಾನ್‌ 38 ರನ್‌ ಗಳಿಸಿ ತಂಡದ ಪರ ಗರಿಷ್ಠ ಮೊತ್ತ ಕಲೆಹಾಕಿದ ಬ್ಯಾಟರ್‌ ಎನಿಸಿದರು.

ಸ್ಕೋರ್‌: ವಿಂಡೀಸ್‌ 20 ಓವರಲ್ಲಿ 218/5 (ಪೂರನ್‌ 98, ಚಾರ್ಲ್ಸ್‌ 43, ನೈಬ್‌ 2-14), ಆಫ್ಘನ್‌ 16.2 ಓವರಲ್ಲಿ 114/10 (ಇಬ್ರಾಹಿಂ 38, ಅಜ್ಮತುಲ್ಲಾ 23, ಮೆಕಾಯ್‌ 3-14) ಪಂದ್ಯಶ್ರೇಷ್ಠ: ಪೂರನ್‌ಒಂದೇ ಓವರಲ್ಲಿ 36 ರನ್‌!

ವಿಂಡೀಸ್‌ನ ಇನ್ನಿಂಗ್ಸ್‌ನ 4ನೇ ಓವರಲ್ಲಿ ಅಜ್ಮತುಲ್ಲಾ ಒಮರ್‌ಝಾಯ್‌ 36 ರನ್‌ ಬಿಟ್ಟುಕೊಟ್ಟರು. ಇದು ಅಂ.ರಾ.ಟಿ20 ಕ್ರಿಕೆಟ್‌ನ ಓವರ್‌ವೊಂದರಲ್ಲಿ ದಾಖಲಾದ ಜಂಟಿ ಗರಿಷ್ಠ ಮೊತ್ತ. ಒಮರ್‌ಝಾಯ್‌ ಆ ಓವರಲ್ಲಿ ಕ್ರಮವಾಗಿ 6, 5 ನೋಬಾಲ್‌, 5 ವೈಡ್‌, 0, 4 ಲೆಗ್‌ಬೈ, 4, 6, 6 ರನ್‌ ಬಿಟ್ಟುಕೊಟ್ಟರು. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ರ ಓವರಲ್ಲಿ ಯುವರಾಜ್‌ ಸಿಂಗ್‌ 6 ಸಿಕ್ಸರ್‌ ಸಿಡಿಸಿ 36 ರನ್‌ ಚಚ್ಚಿದ್ದರು.

92 ರನ್‌ವಿಂಡೀಸ್‌ ಪವರ್‌-ಪ್ಲೇನಲ್ಲಿ 92 ರನ್‌ ಕಲೆಹಾಕಿತು. ಇದು ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಮೊದಲ 6 ಓವರಲ್ಲಿ ದಾಖಲಾದ ಗರಿಷ್ಠ ರನ್‌.

PREV

Recommended Stories

ಕೊಹ್ಲಿ, ರೋಹಿತ್‌ ನಿವೃತ್ತಿ ವದಂತಿ : 2027ರ ಏಕದಿನ ವಿಶ್ವಕಪ್‌ ಆಡಲ್ವಾ ದಿಗ್ಗಜರು?
ಸಿಮ್‌ ಎಡವಟ್ಟು: ರಜತ್‌ ಎಂದು ಛತ್ತೀಸ್‌ಗಢದ 21ರ ವ್ಯಕ್ತಿಗೆ ಕೊಹ್ಲಿ, ವಿಲಿಯರ್ಸ್‌ ಕರೆ!