ಚೆನ್ನೈ: 12ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ದಬಾಂಗ್ ಡೆಲ್ಲಿ ಅಧಿಪತ್ಯ ಮುಂದುವರಿದಿದೆ. ತಂಡ ಆಡಿರುವ 11 ಪಂದ್ಯಗಳ ಪೈಕಿ 10ರಲ್ಲಿ ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ಸೋಮವಾರ ಡೆಲ್ಲಿ ತಂಡ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 29-26 ಅಂಕಗಳಿಂದ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಪಂದ್ಯದುದ್ದಕ್ಕೂ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂದವು. ಮೊದಲಾರ್ಧದಲ್ಲಿ ಜೈಪುರ 13-12 ಅಂಕಗಳಿಂದ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಜೈಪುರವನ್ನು ಆಲೌಟ್ ಮಾಡುವುದರ ಜೊತೆಗೆ 17 ಅಂಕ ಸಂಪಾದಿಸಿ, ಜಯಭೇರಿ ಬಾರಿಸಿತು. ತಾರಾ ರೈಡರ್ ಆಶು ಮಲಿಕ್ 8, ಡಿಫೆಂಡರ್ ಸಂದೀಪ್ 7 ಅಂಕ ಗಳಿಸಿದರು.
ದಿನದ 2ನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಪಾಟ್ನಾ ಪೈರೇಟ್ಸ್ 36-28 ಅಂಕಗಳಿಂದ ಗೆಲುವು ಸಾಧಿಸಿತು. ಮತ್ತೊಮ್ಮೆ ರೈಡಿಂಗ್‌ನಲ್ಲಿ ಮಿಂಚಿದ ಅಯಾನ್, 15 ಅಂಕ ಗಳಿಸಿ ಪಾಟ್ನಾಗೆ ಗೆಲುವು ತಂದುಕೊಟ್ಟರು. ಯೋಧಾಸ್‌ನ ತಾರಾ ರೈಡರ್, ಕನ್ನಡಿಗ ಗಗನ್ ಗೌಡ 10 ಅಂಕ ಗಳಿಸಿದರು.
ಇಂದಿನ ಪಂದ್ಯಗಳು
ಪಾಟ್ನಾ-ತಮಿಳ್ ತಲೈವಾಸ್, ರಾತ್ರಿ 8ಕ್ಕೆ
ಹರ್ಯಾಣ-ದಬಾಂಗ್ ಡೆಲ್ಲಿ, ರಾತ್ರಿ 9ಕ್ಕೆ