ದಿಗ್ಗಜ ವಿಲಿಯಮ್ಸನ್‌ರನ್ನೇ ಹಿಂದಿಕ್ಕಿದ ಜೈಸ್ವಾಲ್‌ಗೆ ‘ತಿಂಗಳ ಶ್ರೇಷ್ಠ ಆಟಗಾರ’ ಗೌರವ

KannadaprabhaNewsNetwork | Published : Mar 13, 2024 2:00 AM

ಸಾರಾಂಶ

ಜೈಸ್ವಾಲ್‌ ಅವರು ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌, ಶ್ರೀಲಂಕಾದ ಪಥುಂ ನಿಸ್ಸಾಂಕ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದುಬೈ: ಟೆಸ್ಟ್‌ ಪಾದಾರ್ಪಣೆಗೈದ ಕಡಿಮೆ ಅವಧಿಯಲ್ಲೇ ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದಿರುವ ಭಾರತದ ಯುವ ತಾರೆ ಯಶಸ್ವಿ ಜೈಸ್ವಾಲ್‌ ಐಸಿಸಿ ಫೆಬ್ರವರಿ ತಿಂಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌, ಶ್ರೀಲಂಕಾದ ಪಥುಂ ನಿಸ್ಸಾಂಕ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 22 ವರ್ಷದ ಜೈಸ್ವಾಲ್‌ ಇಂಗ್ಲೆಂಡ್ ವಿರುದ್ಧ ಇತ್ತೀಚೆಗಷ್ಟೇ ಕೊನೆಗೊಂಡ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಬರೋಬ್ಬರಿ 712 ರನ್ ಕಲೆಹಾಕಿದ್ದರು.ಈ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಯಶಸ್ವಿ ಜೈಸ್ವಾಲ್, ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಸುನೀಲ್ ಗವಾಸ್ಕರ್ ನಂತರ 700 ರನ್ ಗಳಿಸಿದ ಆಟಗಾರ ಎಂಬ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಅಲ್ಲದೆ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರ ದಾಖಲೆ ಮುರಿದಿದ್ದರು.ಪ್ರಿ ಕ್ವಾರ್ಟರ್‌ಗೇರಿದ ಸಿಂಧು: ಪ್ರಣಯ್‌, ಶ್ರೀಕಾಂತ್‌ಗೆ ಸೋಲಿನ ಶಾಕ್‌

ಬರ್ಮಿಂಗ್‌ಹ್ಯಾಮ್‌: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪದಕ ನಿರೀಕ್ಷೆಯಲ್ಲಿದ್ದ ಎಚ್‌.ಎಸ್‌.ಪ್ರಣಯ್‌, ಕಿದಂಬಿ ಶ್ರೀಕಾಂತ್‌ ಸೋತು ಹೊರಬಿದ್ದಿದ್ದಾರೆ.

ಮಂಗಳವಾರ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸಿಂಧು ವಿರುದ್ಧದ ಪಂದ್ಯದ ವೇಳೆ ಜರ್ಮನಿಯ ಯವೊನ್ನೆ ಲಿ ಗಾಯಗೊಂಡು ಹೊರನಡೆದರು. ಹೀಗಾಗಿ ಸಿಂಧು ಮುತ್ತಿನ ಸುತ್ತಿಗೇರಿದರು. ಪಂದ್ಯದಲ್ಲಿ ಸಿಂಧು ಮೊದಲ ಗೇಮ್‌(21-10) ಗೆದ್ದಿದ್ದರು. ಆದರೆ ಆಕರ್ಷಿ ಕಶ್ಯಪ್‌ ಚೈನೀಸ್‌ ತೈಪೆಯ ಪೈ ಯು ಪೊ ವಿರುದ್ಧ 16-21, 11-21 ಅಂತರದಲ್ಲಿ ಸೋಲನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ ಅವರು ಸು ಲಿ ಯಂಗ್‌ ವಿರುದ್ಧ 21-14, 13-21, 13-21 ಅಂತರದಲ್ಲಿ ಪರಾಭವಗೊಂಡರು.

Share this article