ರಾಹುಲ್‌ ಸೆಂಚುರಿಗೂ ಜಗ್ಗದ ಹರಿಣ ಪಡೆ!

KannadaprabhaNewsNetwork |  
Published : Dec 28, 2023, 01:45 AM IST
ಫೋಟೊ: ಟ್ವಿಟರ್‌ | Kannada Prabha

ಸಾರಾಂಶ

ಬಾಲಂಗೋಚಿಗಳನ್ನಿಟ್ಟುಕೊಂಡು ಆಕರ್ಷಕ ಹೊಡೆತಗಳ ಮೂಲಕ ತಂಡದ ರನ್‌ ವೇಗ ಹೆಚ್ಚಿಸಿದ ರಾಹುಲ್‌, ಟೆಸ್ಟ್‌ನ ತಮ್ಮ 8ನೇ ಶತಕವನ್ನೂ ಪೂರ್ಣಗೊಳಿಸಿದರು.

ಸೆಂಚೂರಿಯನ್‌: ಆಕರ್ಷಕ ಶತಕದ ಮೂಲಕ ಟೀಂ ಇಂಡಿಯಾ ಪಾಲಿಗೆ ಕೆ.ಎಲ್‌.ರಾಹುಲ್‌ ಆಪತ್ಬಾಂಧವರಾಗಿ ಮೂಡಿ ಬಂದರೂ, ಸೊಗಸಾದ ಬ್ಯಾಟಿಂಗ್‌ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಭಾರತವನ್ನು 245ಕ್ಕೆ ನಿಯಂತ್ರಿಸಿದ ಬಳಿಕ ಬ್ಯಾಟಿಂಗ್‌ನಲ್ಲೂ ಅಧಿಪತ್ಯ ಸಾಧಿಸಿದ ಆಫ್ರಿಕಾ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 256 ರನ್‌ ಕಲೆಹಾಕಿದ್ದು, 11 ರನ್‌ಗಳ ಮುನ್ನಡೆಯೊಂದಿಗೆ 3ನೇ ದಿನಕ್ಕೆ ಕಾಲಿಡಲಿದೆ.

ಮೊದಲ ದಿನ 8 ವಿಕೆಟ್‌ಗೆ 208 ರನ್‌ ಗಳಿಸಿದ್ದ ಭಾರತವನ್ನು ಬುಧವಾರವೂ ಕಾಪಾಡಿದ್ದು ರಾಹುಲ್. ಬಾಲಂಗೋಚಿಗಳನ್ನಿಟ್ಟುಕೊಂಡು ಆಕರ್ಷಕ ಹೊಡೆತಗಳ ಮೂಲಕ ತಂಡದ ರನ್‌ ವೇಗ ಹೆಚ್ಚಿಸಿದ ರಾಹುಲ್‌, ಟೆಸ್ಟ್‌ನ ತಮ್ಮ 8ನೇ ಶತಕವನ್ನೂ ಪೂರ್ಣಗೊಳಿಸಿದರು. 9ನೇ ವಿಕೆಟ್‌ಗೆ ಸಿರಾಜ್‌(05) ಜೊತೆಗೂಡಿ 47 ರನ್‌ ಸೇರಿಸಿದ ರಾಹುಲ್‌, 137 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್‌ನೊಂದಿಗೆ 101 ರನ್‌ ಸಿಡಿಸಿ ನಿರ್ಗಮಿಸಿದರು. ಬರ್ಗರ್‌ 3 ವಿಕೆಟ್‌ ಕಬಳಿಸಿದರು.ಎಲ್ಗರ್‌ ಶೋ: ಆಫ್ರಿಕಾ ವೇಗಿಗಳ ಬಳಿಕ ಭಾರತವನ್ನು ಮತ್ತಷ್ಟು ಕಾಡಿದ್ದು ಆರಂಭಿಕ ಬ್ಯಾಟರ್‌ ಡೀನ್‌ ಎಲ್ಗರ್‌. 5 ರನ್‌ಗೆ ಮಾರ್ಕ್‌ರಮ್‌ ಔಟಾದರೂ, 2ನೇ ವಿಕೆಟ್‌ಗೆ ಟೋನಿ ಡೆ ಜೊರ್ಜಿ(28) ಜೊತೆಗೂಡಿ 93 ರನ್‌ ಹಾಗೂ 4ನೇ ವಿಕೆಟ್‌ಗೆ ಬೆಡಿಂಗ್‌ಹ್ಯಾಮ್‌ ಜೊತೆ ಸೇರಿ 131 ರನ್‌ ಕಲೆಹಾಕುವ ಮೂಲಕ ಭಾರತದ ಪಾಲಿಗೆ ಕಂಟಕವಾಗಿ ಪರಿಣಮಿಸಿದರು. 56 ರನ್‌ ಗಳಿಸಿದ್ದ ಬೆಡಿಂಗ್‌ಹ್ಯಾಮ್‌ರನ್ನು ಸಿರಾಜ್‌ ಪೆವಿಲಿಯನ್‌ಗೆ ಅಟ್ಟಿದ್ದು, 140 ರನ್‌ ಗಳಿಸಿರುವ ಎಲ್ಗರ್‌ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಸಿರಾಜ್‌, ಬೂಮ್ರಾ ತಲಾ 2 ವಿಕೆಟ್‌ ಕಿತ್ತರೆ, ಪಾದಾರ್ಪಣೆ ಪಂದ್ಯದಲ್ಲೇ ಪ್ರಸಿದ್ಧ್‌ ಕೃಷ್ಣಗೂ 1 ವಿಕೆಟ್‌ ಲಭಿಸಿತು.ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 245/10(ರಾಹುಲ್‌ 101, ರಬಾಡ 5-59, ಬರ್ಗರ್‌ 3-50), ದ.ಆಫ್ರಿಕಾ ಮೊದಲ ಇನ್ನಿಂಗ್ಸ್‌ 256/5(2ನೇ ದಿನದಂತ್ಯಕ್ಕೆ) (ಎಲ್ಗರ್‌ 140*, ಬೆಡಿಂಗ್‌ಹ್ಯಾಮ್‌ 56, ಬೂಮ್ರಾ 2-48, ಬೂಮ್ರಾ 2-63)--

06ನೇ ಬ್ಯಾಟರ್‌

ರಾಹುಲ್‌ ವಿದೇಶದಲ್ಲಿ ಟೆಸ್ಟ್‌ ಶತಕ ಸಿಡಿಸಿದ ಭಾರತದ 6ನೇ ವಿಕೆಟ್‌ ಕೀಪರ್‌ ಬ್ಯಾಟರ್‌. ರಿಷಭ್‌ ಪಂತ್‌(04 ಬಾರಿ), ಎಂ.ಎಸ್‌.ಧೋನಿ, ವಿಜಯ್‌ ಮಾಂಜ್ರೇಕರ್‌, ಅಜಯ್‌ ರಾತ್ರ, ವೃದ್ಧಿಮಾನ್‌ ಸಾಹ ಇತರ ಸಾಧಕರು.

-01ನೇ ಬ್ಯಾಟರ್‌

ಸೆಂಚೂರಿಯನ್‌ ಕ್ರೀಡಾಂಗಣದಲ್ಲಿ 2 ಶತಕ ಸಿಡಿಸಿದ ಏಕೈಕ ವಿದೇಶಿ ಬ್ಯಾಟರ್‌ ಕೆ.ಎಲ್‌.ರಾಹುಲ್‌.

-03ನೇ ಬ್ಯಾಟರ್ ದ.ಆಫ್ರಿಕಾದಲ್ಲಿ 2+ ಶತಕ ಸಿಡಿಸಿದ ಭಾರತದ 3ನೇ ಬ್ಯಾಟರ್‌ ಕೆ.ಎಲ್‌.ರಾಹುಲ್‌. ಸಚಿನ್‌ ತೆಂಡುಲ್ಕರ್‌ 5, ವಿರಾಟ್‌ ಕೊಹ್ಲಿ 2+ ಶತಕ ಬಾರಿಸಿದ್ದಾರೆ.

-

ರಾಹುಲ್‌ರ 8ರಲ್ಲಿ 7

ಶತಕ ವಿದೇಶದಲ್ಲಿ! ರಾಹುಲ್‌ ಈ ವರೆಗೆ ಟೆಸ್ಟ್‌ನಲ್ಲಿ 8 ಶತಕ ಸಿಡಿಸಿದ್ದಾರೆ. ವಿಶೇಷವೆಂದರೆ ಇದರಲ್ಲಿ 7 ಶತಕಗಳು ವಿದೇಶಿ ಕ್ರೀಡಾಂಗಣಗಳಲ್ಲಿ ದಾಖಲಾಗಿವೆ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ಬಾರಿಸಿದ 199 ರನ್ ರಾಹುಲ್‌ರಿಂದ ಭಾರತದಲ್ಲಿ ದಾಖಲಾದ ಏಕೈಕ ಶತಕ. ಉಳಿದಂತೆ ಇಂಗ್ಲೆಂಡ್‌, ದ.ಆಫ್ರಿಕಾದಲ್ಲಿ ತಲಾ 2, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್‌ಇಂಡೀಸ್‌ನಲ್ಲಿ ತಲಾ 1 ಶತಕ ಬಾರಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!
ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?