ಕುಸಿದ ಭಾರತಕ್ಕೆ ಕನ್ನಡಿಗ ರಾಹುಲ್ ಆಸರೆ!

KannadaprabhaNewsNetwork | Updated : Dec 27 2023, 01:33 AM IST

ಸಾರಾಂಶ

ಉಳಿದೆಲ್ಲಾ ಬ್ಯಾಟರ್‌ಗಳು ದ.ಆಫ್ರಿಕಾ ವೇಗಿಗಳನ್ನು ಎದುರಿಸಲು ಪರದಾಡಿದರೆ, ಕೆ.ಎಲ್‌.ರಾಹುಲ್‌ ಮಾತ್ರ ಬಂಡೆಯಂತೆ ಕ್ರೀಸ್‌ನಲ್ಲಿ ನಿಂತರು. ಹೋರಾಟದ 70 ರನ್‌ ಸಿಡಿಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.

ಸೆಂಚೂರಿಯನ್‌: ವಿಶ್ವಕಪ್‌ನಲ್ಲಿ ಅಭೂತಪೂರ್ವ ಪ್ರದರ್ಶನದೊಂದಿಗೆ ಏಕದಿನಕ್ಕೆ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ್ದ ಕನ್ನಡಿಗ ಕೆ.ಎಲ್‌.ರಾಹುಲ್‌, ಟೆಸ್ಟ್‌ ತಂಡದಲ್ಲೂ ಸ್ಥಾನ ಗಿಟ್ಟಿಸಿ ಪಾರ್ಮ್‌ಗೆ ಮರಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಮಂಗಳವಾರ ಆರಂಭಗೊಂಡ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರಾಹುಲ್‌ ತಮ್ಮ ಹೋರಾಟದ ಅರ್ಧಶತಕದ ಮೂಲಕ, ದ.ಆಫ್ರಿಕಾ ವೇಗಿಗಳ ದಾಳಿಗೆ ತತ್ತರಿಸಿದ ಭಾರತಕ್ಕೆ ನೆರವಾಗಿದ್ದಾರೆ. ಮೊದಲ ದಿನದಂತ್ಯಕ್ಕೆ ಭಾರತ 59 ಓವರಲ್ಲಿ 8 ವಿಕೆಟ್‌ಗೆ 208 ರನ್‌ ಕಲೆಹಾಕಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತ ಆರಂಭದಲ್ಲೇ ಸಂಕಷ್ಟಕ್ಕೊಳಗಾಯಿತು. ನಾಯಕ ರೋಹಿತ್‌ ಶರ್ಮಾ(05) ದೊಡ್ಡ ಹೊಡೆತಕ್ಕೆ ಮುಂದಾಗಿ ಕೈಸುಟ್ಟುಕೊಂಡರೆ, ಯಶಸ್ವಿ ಜೈಸ್ವಾಲ್‌(17), ಶುಭ್‌ಮನ್‌ ಗಿಲ್‌(02) ಹರಿಣಗಳ ವೇಗದ ಬೌಲಿಂಗ್‌ನ್ನು ಎದುರಿಸಲಾಗದೆ ಬೇಗನೇ ಔಟಾದರು.

ಕೊಹ್ಲಿ-ಶ್ರೇಯಸ್‌ ಆಸರೆ: ಈ ವೇಳೆ 4ನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ 58 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆಯ ಹಾದಿ ತೋರಿಸಿಕೊಟ್ಟರು. ಇನ್ನೇನು ಇಬ್ಬರೂ ದೊಡ್ಡ ಇನ್ನಿಂಗ್ಸ್‌ ಕಟ್ಟುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಗ ಮೊದಲಿಗೆ ಶ್ರೇಯಸ್‌(31), ಬಳಿಕ ವಿರಾಟ್‌ ಕೊಹ್ಲಿ(38)ಯನ್ನು ರಬಾಡ್‌ ಪೆವಿಲಿಯನ್‌ಗೆ ಅಟ್ಟಿದರು. ಅಶ್ವಿನ್‌ ಇನ್ನಿಂಗ್ಸ್‌ 8ಕ್ಕೆ ಕೊನೆಗೊಂಡಿತು. ಆಗ ತಂಡದ ಸ್ಕೋರ್‌ 121ಕ್ಕೆ 6.

ರಾಹುಲ್‌ ಶೋ: ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ರಾಹುಲ್‌ ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದದ ರಾಹುಲ್‌ ಅರ್ಧಶತಕವನ್ನೂ ಪೂರ್ಣಗೊಳಿಸಿದರು. 7ನೇ ವಿಕೆಟ್‌ಗೆ ಶಾರ್ದೂಲ್‌ ಠಾಕೂರ್(24) ಜೊತೆಗೂಡಿ 43 ರನ್‌ ಸೇರಿಸಿದ ಅವರು, ಬೂಮ್ರಾ ಜೊತೆ 27 ರನ್‌ ಜೊತೆಯಾಟದಲ್ಲಿ ಪಾಲ್ಗೊಂಡರು. 105 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್‌ನೊಂದಿಗೆ 70 ರನ್‌ ಸಿಡಿಸಿರುವ ಅವರು ಭಾರತಕ್ಕೆ ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದಾರೆ. ರಬಾಡ 44 ರನ್‌ ನೀಡಿ 5 ವಿಕೆಟ್ ಗೊಂಚಲ ಪಡೆದರೆ, 2 ವಿಕೆಟ್‌ ನಂಡ್ರೆ ಬರ್ಗರ್ ಪಾಲಾಯಿತು.

ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್‌ 59 ಓವರಲ್ಲಿ 208/8(ಮೊದಲ ದಿನದಂತ್ಯಕ್ಕೆ) (ರಾಹುಲ್‌ 70*, ಕೊಹ್ಲಿ 38, ಶ್ರೇಯಸ್‌ 31, ರಬಾಡ 5-44)---ಮಳೆಗೆ 31 ಓವರ್‌ ಬಲಿಪಂದ್ಯಕ್ಕೆ ನಿರೀಕ್ಷೆಯಂತೆಯೇ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ದಿನದ ನಿಗದಿತ 90 ಓವರ್‌ಗಳ ಪೈಕಿ 59 ಓವರ್‌ ಮಾತ್ರ ಎಸೆಯಲು ಸಾಧ್ಯವಾಯಿತು. ಅರ್ಧಗಂಟೆ ತಡವಾಗಿ ಪಂದ್ಯ ಆರಂಭಗೊಂಡ ಬಳಿಕ ಸಂಜೆ ವೇಳೆ ಮತ್ತೆ ಮಳೆ ಸುರಿದ ಕಾರಣ ಬೇಗನೇ ದಿನದಾಟ ಕೊನೆಗೊಳಿಸಲಾಯಿತು.--2 ವರ್ಷಗಳ ಬಳಿಕ ರಾಹುಲ್‌ ಟೆಸ್ಟ್‌ ಫಿಫ್ಟಿ

ರಾಹುಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸುಮಾರು 2 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದರು. ಅವರು ಕೊನೆಯದಾಗಿ 2022ರ ಜನವರಿಯಲ್ಲಿ ದ.ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ಕೊನೆಯವಾಗಿ ಫಿಫ್ಟಿ ಸಿಡಿಸಿದ್ದರು. ಆ ಬಳಿಕ ಅವರು ಈ ಪಂದ್ಯ ಸೇರಿ ಕೇವಲ 6 ಟೆಸ್ಟ್‌ ಆಡಿದ್ದಾರೆ. ಗಾಯದಿಂದಾಗಿ ಅವರು ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

--13ನೇ ಬಾರಿರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13ನೇ ಬಾರಿ ರಬಾಡ ಎಸೆತದಲ್ಲಿ ಔಟಾದರು. ಇದು ಯಾವುದೇ ಬೌಲರ್‌ ಪೈಕಿ ಗರಿಷ್ಠ. ಸೌಥಿಗೆ 12 ಸಲ ಔಟಾಗಿದ್ದಾರೆ.

-

Share this article