ಬಟ್ಲರ್‌ ಶತಕದ ಜೋಶ್‌ಗೆ ನಡುಗಿದ ರೈಡರ್ಸ್‌!

KannadaprabhaNewsNetwork |  
Published : Apr 17, 2024, 01:26 AM IST
ಬಟ್ಲರ್‌ | Kannada Prabha

ಸಾರಾಂಶ

ಈಡನ್‌ ಗಾರ್ಡನ್ಸ್‌ನ ರನ್‌ ಹೊಳೆಯಲ್ಲಿ ಕೆಕೆಆರ್‌ಗೆ 2 ವಿಕೆಟ್‌ ವೀರೋಚಿತ ಸೋಲು. ನರೈನ್‌ ಶತಕದ ಅಬ್ಬರ. ಕೆಕೆಆರ್‌ 3 ವಿಕೆಟ್‌ಗೆ 223 ರನ್‌. ಸೋಲಿನ ಭೀತಿಯಲ್ಲಿದ್ದಾಗ ಬಟ್ಲರ್‌ ಸ್ಫೋಟಕ ಶತಕ, ರಾಜಸ್ಥಾನಕ್ಕೆ ಕೊನೆ ಬಾಲ್‌ನಲ್ಲಿ ಗೆಲುವು. 6ನೇ ಜಯದೊಂದಿಗೆ ನಂ.1 ಸ್ಥಾನ ಭದ್ರ

ಕೋಲ್ಕತಾ: ರಾಜಸ್ಥಾನ ರಾಯಲ್ಸ್‌ನ ಅಬ್ಬರಕ್ಕೆ ಬ್ರೇಕ್‌ ಬೀಳುವ ಯಾವ ಲಕ್ಷಣವೂ ಈ ಬಾರಿ ಐಪಿಎಲ್‌ನಲ್ಲಿ ಕಂಡುಬರುತ್ತಿಲ್ಲ. ಬೌಲರ್‌ಗಳು ಚಚ್ಚಿಸಿಕೊಂಡರೂ ಜೋಸ್‌ ಬಟ್ಲರ್‌ರ ಹೋರಾಟದ ಶತಕ ಮಂಗಳವಾರ ಈಡನ್‌ ಗಾರ್ಡನ್ಸ್‌ನ ರನ್‌ ಹೊಳೆಯಲ್ಲಿ ರಾಜಸ್ಥಾನಕ್ಕೆ ಕೋಲ್ಕತಾ ವಿರುದ್ಧ 2 ವಿಕೆಟ್‌ ಗೆಲುವು ತಂದುಕೊಟ್ಟಿದೆ. ತವರಿನ ಅಂಗಳದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್‌ ಟೂರ್ನಿಯ 2ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಬಾಕಿಯಾದರೆ, ರಾಜಸ್ಥಾನ 6ನೇ ಜಯದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ, ಸುನಿಲ್‌ ನರೈನ್‌ರ ಸಿಡಿಲಬ್ಬರದ ಶತಕದಿಂದಾಗಿ 20 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು ಕಲೆಹಾಕಿದ್ದು 223 ರನ್‌. ಈಡನ್‌ ಗಾರ್ಡನ್ಸ್‌ನಲ್ಲಿ ಈ ಮೊತ್ತ ರಾಜಸ್ಥಾನ ಪಾಲಿಗೆ ದೊಡ್ಡದಾಗಿ ಕಂಡುಬಂದರೂ ಜೋಸ್‌ ಬಟ್ಲರ್‌ರ ಸ್ಫೋಟಕ ಆಟದ ಮುಂದೆ ಕೋಲ್ಕತಾ ನಿರುತ್ತರವಾಯಿತು. ಒಂದು ಹಂತದಲ್ಲಿ ತಂಡ ಸೋಲಿನ ಸುಳಿಗೆ ಸಿಲುಕಿದ್ದರೂ ಕೊನೆಯಲ್ಲಿ ಅಬ್ಬರಿಸಿದ ತಂಡ ಕೊನೆ ಎಸೆತದಲ್ಲಿ ಗೆಲುವಿನ ದಡ ಸೇರಿತು.ರಾಜಸ್ಥಾನ ಬ್ಯಾಟರ್‌ಗಳು ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರೂ, ಬಟ್ಲರ್‌ ಹೊರತುಪಡಿಸಿ ಯಾರೊಬ್ಬರೂ ದೊಡ್ಡ ಇನ್ನಿಂಗ್ಸ್‌ ಕಟ್ಟಲಿಲ್ಲ. ಯಶಸ್ವಿ ಜೈಸ್ವಾಲ್‌(19), ಸಂಜು ಸ್ಯಾಮ್ಸನ್‌(12) ಬೇಗನೇ ಔಟಾದರು. ಈ ನಡುವೆ ರಿಯಾನ್‌ ಪರಾಗ್‌ 14 ಎಸೆತಗಳಲ್ಲಿ 34 ರನ್‌ ಸಿಡಿಸಿದ್ದರಿಂದ ತಂಡದ ಸ್ಕೋರ್‌ 8 ಓವರಲ್ಲೇ 98 ಆಗಿತ್ತು. ಆದರೆ ಧ್ರುವ್‌ ಜುರೆಲ್‌(02), ಅಶ್ವಿನ್‌(08), ಹೆಟ್ಮೇಯರ್‌(00) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದ್ದು ತಂಡಕ್ಕೆ ಮುಳುವಾಯಿತು. ಕೊನೆ 6 ಓವರಲ್ಲಿ 96 ರನ್‌ ಬೇಕಿದ್ದಾಗ ಬಟ್ಲರ್‌(60 ಎಸೆತಗಳಲ್ಲಿ 107) ಸ್ಫೋಟಕ ಆಟವಾಡಿ ತಂಡವನ್ನು ಗೆಲ್ಲಿಸಿದರು. ಪೋವೆಲ್‌ 26 ರನ್‌ ಸಿಡಿಸಿದ್ದು ಗೆಲುವಿನ ಪ್ರಮುಖ ಪಾತ್ರವಹಿಸಿತು.ನರೈನ್‌ ಸೆಂಚುರಿ: ರಾಜಸ್ಥಾನದ ಬೌಲರ್‌ಗಳನ್ನು ಈ ಪಂದ್ಯದಲ್ಲಿ ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದ್ದು ನರೈನ್‌ಗೆ ಮಾತ್ರ. ಆರಂಭದಲ್ಲೇ ಅಬ್ಬರಿಸಲು ಶುರುವಿಟ್ಟ ನರೈನ್‌ 56 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ನೊಂದಿಗೆ 109 ರನ್‌ ಚಚ್ಚಿದರು. ಉಳಿದಂತೆ ಅಂಗ್‌ಕೃಷ್‌ ರಘುವಂಶಿ 18 ಎಸೆತಗಳಲ್ಲಿ 30, ರಿಂಕು ಸಿಂಗ್‌ 9 ಎಸೆತಗಳಲ್ಲಿ 20 ರನ್‌ ಸಿಡಿಸಿ ತಂಡವನ್ನು 220ರ ಗಡಿ ದಾಟಿಸಿದರು. ಆವೇಶ್‌ ಖಾನ್‌, ಕುಲ್ದೀಪ್‌ ಸೆನ್‌ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್‌: ಕೋಲ್ಕತಾ 20 ಓವರಲ್ಲಿ 223/6 (ನರೈನ್‌ 109, ರಘುವಂಶಿ 30, ಆವೇಶ್ 2-35), ರಾಜಸ್ಥಾನ 20 ಓವರಲ್ಲಿ 224/8 (ಬಟ್ಲರ್‌ 107, ರಿಯಾನ್‌ 34, ನರೈನ್‌ 2-30)

ಐಪಿಎಲ್‌ ಹ್ಯಾಟ್ರಿಕ್‌+ಶತಕ: ನರೈನ್‌ 3ನೇ ಆಟಗಾರ

ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಹಾಗೂ ಶತಕ ಸಿಡಿಸಿದ 3ನೇ ಆಟಗಾರ ಎಂಬ ಖ್ಯಾತಿಗೆ ನರೈನ್‌ ಪಾತ್ರರಾದರು. ರೋಹಿತ್‌ ಶರ್ಮಾ ಹಾಗೂ ಶೇನ್‌ ವಾಟ್ಸನ್‌ ಇತರ ಸಾಧಕರು. ವಾಟ್ಸನ್‌ 4, ರೋಹಿತ್‌ 2 ಶತಕ ಸಿಡಿಸಿದ್ದು, ತಲಾ 1 ಬಾರಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದಾರೆ.01ನೇ ಆಟಗಾರ: ಐಪಿಎಲ್‌ನಲ್ಲಿ ಶತಕ ಹಾಗೂ 5 ವಿಕೆಟ್‌ ಗೊಂಚಲು ಸಾಧನೆ ಮಾಡಿದ ಏಕೈಕ ಆಟಗಾರ ನರೈನ್‌.50ನೇ ಬ್ಯಾಟರ್‌: ಐಪಿಎಲ್‌ನಲ್ಲಿ ಶತಕ ಸಿಡಿಸಿದ 50ನೇ ಬ್ಯಾಟರ್‌ ನರೈನ್‌. 2008ರಲ್ಲಿ ಬ್ರೆಂಡಾನ್‌ ಮೆಕಲಂ ಐಪಿಎಲ್‌ನ ಚೊಚ್ಚಲ ಶತಕ ಬಾರಿಸಿದ್ದರು.03ನೇ ಆಟಗಾರ: ಐಪಿಎಲ್‌ನಲ್ಲಿ ಕೆಕೆಆರ್‌ ಪರ ಸೆಂಚುರಿ ಸಿಡಿಸಿದ 3ನೇ ಆಟಗಾರ ನರೈನ್‌. ಮೆಕಲಂ, ವೆಂಕಟೇಶ್‌ ಅಯ್ಯರ್‌ ಕೂಡಾ ಈ ಸಾಧನೆ ಮಾಡಿದ್ದಾರೆ.01ನೇ ಆಟಗಾರ: ಸುನಿಲ್‌ ನರೈನ್‌ ಐಪಿಎಲ್‌ ಪಂದ್ಯವೊಂದರಲ್ಲಿ ಶತಕ, ಕ್ಯಾಚ್‌ ಹಾಗೂ ವಿಕೆಟ್‌ ಪಡೆದ ಏಕೈಕ ಕ್ರಿಕೆಟಿಗ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!