ಕಳೆದ ಕೆಲ ತಿಂಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದ ಸ್ಮೃತಿ ಮಂಧನಾ, ಇದೀಗ ಕ್ರಿಕೆಟ್‌ ಬಗ್ಗೆ ತಮಗಿರುವ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- 41 ಎಸೆತದಲ್ಲಿ 87 ರನ್‌ ಚಚ್ಚಿ ಕಪ್‌ ತಂದ ಸ್ಮೃತಿ

---

ನವದೆಹಲಿ: ಕಳೆದ ಕೆಲ ತಿಂಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದ ಸ್ಮೃತಿ ಮಂಧನಾ, ಇದೀಗ ಕ್ರಿಕೆಟ್‌ ಬಗ್ಗೆ ತಮಗಿರುವ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶುಕ್ರವಾರ ನಡೆದ ಡಬ್ಲ್ಯುಪಿಎಲ್‌ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಆರ್‌ಸಿಬಿಗೆ 2ನೇ ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಮಂಧನಾ, ಪಂದ್ಯದ ಹಿಂದಿನ ರಾತ್ರಿ 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದರು ಎನ್ನುವ ವಿಷಯ ಕ್ರಿಕೆಟ್‌ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.

ಫೈನಲ್‌ ಗೆಲುವಿನ ಬಳಿಕ ತಂಡದ ಸದಸ್ಯೆಯರು ಡ್ರೆಸ್ಸಿಂಗ್‌ ರೂಂನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ, ಪ್ರಧಾನ ಕೋಚ್‌ ಮಾಲೋಲನ್ ರಂಗರಾಜನ್ ಸ್ಮೃತಿಗೆ ಜ್ವರವಿದ್ದ ವಿಚಾರ ಬಹಿರಂಗಪಡಿಸಿ, ಆಟದ ಬಗ್ಗೆ ಅವರಿಗಿರುವ ಪ್ರೀತಿ, ಗೌರವವನ್ನು ಶ್ಲಾಘಿಸಿದರು. ಸ್ಮೃತಿ ಅನಾರೋಗ್ಯದ ಬಗ್ಗೆ ಅವರ ಸಹ ಆಟಗಾರ್ತಿಯರಿಗೂ ಗೊತ್ತಿರಲಿಲ್ಲ. ಕೋಚ್‌ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಎಲ್ಲರೂ ಒಂದು ಕ್ಷಣ ಅವಾಕ್ಕಾದರು. ಬಳಿಕ ಸ್ಮೃತಿಯನ್ನು ಎಲ್ಲರೂ ಅಭಿನಂದಿಸಿದರು. ಫೈನಲ್‌ನಲ್ಲಿ ಮಂಧನಾ 41 ಎಸೆತದಲ್ಲಿ 87 ರನ್‌ ಸಿಡಿಸಿದ್ದು ಗಮನಾರ್ಹ.