ಅಹಮದಾಬಾದ್: ಉಪನಾಯಕ ರವೀಂದ್ರ ಜಡೇಜಾ ಆಲ್ರೌಂಡ್ ಆಟ ಹಾಗೂ ಮೊಹಮ್ಮದ್ ಸಿರಾಜ್‌ಗೆ ಮತ್ತೊಂದು ಮಾರಕ ದಾಳಿ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 140 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್ 162 ರನ್ ಗಳಿಸಿದ್ದರೆ, ಭಾರತ 2ನೇ ದಿನವಾದ ಶುಕ್ರವಾರ 5 ವಿಕೆಟ್ ನಷ್ಟದಲ್ಲಿ 448 ರನ್ ಕಲೆಹಾಕಿ 286 ರನ್‌ಗಳ ದೊಡ್ಡ ಮುನ್ನಡೆ ಪಡೆದಿತ್ತು. ವಿಂಡೀಸ್‌ನ ಸೋಲಿಸಲು ಈ ಮೊತ್ತವೇ ಸಾಕು ಎಂಬ ವಿಶ್ವಾಸ ಹೊಂದಿದ್ದ ಭಾರತ, ಶನಿವಾರ ಬ್ಯಾಟಿಂಗ್‌ಗೆ ಆಗಮಿಸದೆ ಡಿಕ್ಲೇರ್ ಘೋಷಿಸಿತು. 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾದ ವಿಂಡೀಸ್, ಕೇವಲ 146 ರನ್‌ಗೆ ಆಲೌಟಾಯಿತು.ಮಾರಕ ದಾಳಿ:
ವಿಂಡೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಭಾರತಕ್ಕೆ ಕಷ್ಟವೇ ಆಗಲಿಲ್ಲ. ತಂಡ 12 ರನ್ ಗಳಿಸಿದ್ದಾಗ ತೇಜ್‌ನರೈನ್ ಚಂದ್ರಪಾಲ್‌ರನ್ನು ಪೆವಿಲಿಯನ್‌ಗೆ ಅಟ್ಟಿದ ಸಿರಾಜ್, ವಿಂಡೀಸ್ ಪತನಕ್ಕೆ ನಾಂದಿ ಹಾಡಿದರು. ಬಳಿಕ ತಂಡ ಚೇತರಿಸಿಕೊಳ್ಳಲಿಲ್ಲ. 46 ರನ್‌ಗೆ 5 ವಿಕೆಟ್ ನಷ್ಟಕ್ಕೊಳಗಾದ ತಂಡಕ್ಕೆ ಅಲಿಕ್ ಅಥನಾಜ್(38) ಹಾಗೂ ಜಸ್ಟಿನ್ ಗ್ರೀವ್ಸ್(25) ಅಲ್ಪ ಆಸರೆಯಾದರು. ಈ ಜೋಡಿ 6ನೇ ವಿಕೆಟ್‌ಗೆ 46 ರನ್ ಸೇರಿಸಿತು. ಇವರಿಬ್ಬರ ನಿರ್ಗಮನದ ಬಳಿಕ ತಂಡ ಮತ್ತೆ ಕುಸಿಯಿತು. 45.1 ಓವರ್‌ಗಳಲ್ಲೇ ತಂಡದ ಹೋರಾಟಕ್ಕೆ ತೆರೆಬಿತ್ತು. ಶತಕವೀರ ಜಡೇಜಾ ಬೌಲಿಂಗ್‌ನಲ್ಲೂ ಮಿಂಚಿ 4 ವಿಕೆಟ್ ಕಬಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಸಿರಾಜ್ ಈ ಬಾರಿ 3 ವಿಕೆಟ್ ಕಿತ್ತರು. ಕುಲ್ದೀಪ್ ಯಾದವ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಕೆ.ಎಲ್.ರಾಹುಲ್, ಜಡೇಜಾ, ಧ್ರುವ್ ಜುರೆಲ್ ಶತಕ, ಶುಭ್‌ಮನ್ ಗಿಲ್ ಅರ್ಧಶತಕದ ನೆರವಿನಿಂದ ದೊಡ್ಡ ಮೊತ್ತ ಕಲೆಹಾಕಿತ್ತು.ಸ್ಕೋರ್: ವಿಂಡೀಸ್ ಮೊದಲ ಇನ್ನಿಂಗ್ಸ್ 162/10, 2ನೇ ಇನ್ನಿಂಗ್ಸ್ 146/10 (ಅಥನಾಜ್ 38, ಗ್ರೀವ್ಸ್ 25, ಜಡೇಜಾ 4-54, ಸಿರಾಜ್ 3-31), ಭಾರತ ಮೊದಲ ಇನ್ನಿಂಗ್ಸ್ 5 ವಿಕೆಟ್‌ಗೆ 448 ರನ್‌ಗೆ ಡಿಕ್ಲೇರ್
04 ಟೆಸ್ಟ್: ವಿಂಡೀಸ್ ತಂಡ ಭಾರತದಲ್ಲಿ ಆಡಿದ ಕೊನೆ 5 ಟೆಸ್ಟ್ ಪಂದ್ಯಗಳ ಪೈಕಿ 4ರಲ್ಲಿ ಇನ್ನಿಂಗ್ಸ್ ಸೋಲನುಭವಿಸಿದೆ. ಮತ್ತೊಂದು ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಶರಣಾಗಿದೆ.ಕೊನೆ 15 ಇನ್ನಿಂಗ್ಸ್‌ನಲ್ಲಿ 2 ಬಾರಿ ಮಾತ್ರ 200+!
ಇತ್ತೀಚಿನ ವರ್ಷಗಳಲ್ಲಿ ವಿಂಡೀಸ್ ತಂಡದ ಪ್ರದರ್ಶನ ಎಷ್ಟು ಕಳಪೆಯಾಗಿದೆ ಎಂದರೆ, ತಂಡ ಕಳೆದ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ 2 ಬಾರಿ ಮಾತ್ರ 200+ ರನ್ ಕಲೆಹಾಕಿದೆ. 11 ಇನ್ನಿಂಗ್ಸ್‌ಗಳಲ್ಲಿ ತಂಡ ಸ್ಕೋರ್ 165 ದಾಟಿಯೇ ಇಲ್ಲ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ 27 ರನ್‌ಗೆ ಆಲೌಟಾಗಿತ್ತು.ವಿಂಡೀಸ್ ವಿರುದ್ಧ 8ನೇ ಬಾರಿ ಇನ್ನಿಂಗ್ಸ್ ಗೆಲುವು
ಭಾರತ ಹಾಗೂ ವಿಂಡೀಸ್ ನಡುವಿನ ಟೆಸ್ಟ್‌ನಲ್ಲಿ ಒಟ್ಟು 17 ಬಾರಿ ಇನ್ನಿಂಗ್ಸ್ ಗೆಲುವು ದಾಖಲಾಗಿವೆ. ಈ ಪೈಕಿ 20ನೇ ಶತಮಾನದಲ್ಲಿ ದಾಖಲಾದ 9 ಇನ್ನಿಂಗ್ಸ್ ಗೆಲುವು ಕಂಡಿದ್ದು ವಿಂಡೀಸ್ ತಂಡ. ಬಳಿಕ 21ನೇ ಶತಮಾನದಲ್ಲಿ ಭಾರತ ತಂಡ 8 ಇನ್ನಿಂಗ್ಸ್ ಗೆಲುವು ದಾಖಲಿಸಿದೆ.ಪಂದ್ಯ ಶ್ರೇಷ್ಠ ಪ್ರಶಸ್ತಿ: ಅನಿಲ್, ಕೊಹ್ಲಿ ದಾಖಲೆ ಅಳಿಸಿ ಹಾಕಿದ ಜಡೇಜಾ
ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಜಡೇಜಾ ಈಗ ಅಗ್ರಸ್ಥಾನಕ್ಕೇರಿದ್ದಾರೆ. ಅವರು 50 ಟೆಸ್ಟ್‌ನಲ್ಲಿ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಕನ್ನಡಿಗ ಅನಿಲ್ ಕುಂಬ್ಳೆ(9 ಬಾರಿ) ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ತಲಾ 8, ಆರ್.ಅಶ್ವಿನ್ 7 ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು, ಭಾರತ ಪರ ಟೆಸ್ಟ್‌ನಲ್ಲಿ ಗರಿಷ್ಠ ಬಾರಿ ಪಂದ್ಯಶ್ರೇಷ್ಠ ಪಡೆದ ಆಟಗಾರರ ಪಟ್ಟಿಯಲ್ಲಿ ಜಡೇಜಾ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಸಚಿನ್(14) ಅಗ್ರಸ್ಥಾನದಲ್ಲಿದ್ದರೆ, ದ್ರಾವಿಡ್ ಹಾಗೂ ಜಡೇಜಾ ತಲಾ 11 ಬಾರಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ, ಅಶ್ವಿನ್ ತಲಾ 10 ಬಾರಿ ಪಂದ್ಯಶ್ರೇಷ್ಠರಾಗಿದ್ದಾರೆ.