ನವದೆಹಲಿ: ಹಾಲಿ ಐಪಿಎಲ್ ಚಾಂಪಿಯನ್, ಪ್ರಸಿದ್ಧ ಮದ್ಯ ಮಾರಾಟ ಕಂಪೆನಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಒಡೆತನದಲ್ಲಿರುವ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟಕ್ಕೆ ಇಡಲಾಗಿದ್ದು, ತಂಡವನ್ನು ಔಷಧ ತಯಾರಕ ಕಂಪನಿ ಸೀರಮ್ ಇನ್ಸ್‌ಟಿಟ್ಯೂಟ್‌ನ ಸಿಇಒ ಆದಾರ್ ಪೂನಾವಾಲಾ ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿತ್ತು. ಈ ನಡುವೆ ಪೂನಾವಾಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್, ಆರ್‌ಸಿಬಿ ತಂಡ ಮಾರಾಟ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಬುಧವಾರ ಪೂನಾವಾಲಾ ಎಕ್ಸ್‌ನಲ್ಲಿ ಒಂದು ಪೊಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಸರಿಯಾದ ಮೌಲ್ಯಮಾಪನದಲ್ಲಿ, ಆರ್‌ಸಿಬಿ ಉತ್ತಮ ತಂಡ’ ಎಂದಿದ್ದಾರೆ. ಈ ಮೂಲಕ ಆರ್‌ಸಿಬಿ ಮಾರಾಟದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ. ವರದಿಗಳ ಪ್ರಕಾರ, 2 ಬಿಲಿಯನ್ ಡಾಲರ್ (ಅಂದಾಜು 17700 ಕೋಟಿ ರು.)ಗೆ ಆರ್‌ಸಿಬಿ ಮಾರಾಟ ಮಾಡಲಾಗುತ್ತದೆ. ಒಂದು ವೇಳೆ ಮಾರಾಟವಾದರೆ, ಕ್ರಿಕೆಟ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಸೇಲ್ ಆದ ತಂಡದ ಎನ್ನುವ ದಾಖಲೆ ಬರೆಯಲಿದೆ. ಐಪಿಎಲ್‌ನ ಮತ್ತೊಂದು ತಂಡ ಲಖನೌ ಸೂಪರ್ ಜೈಂಟ್ಸ್ 7090 ಕೋಟಿ ರು.ಗೆ ಬಿಕರಿಯಾಗಿದ್ದು ಈಗ ದಾಖಲೆ.