ಅಹಮದಾಬಾದ್: ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ ಮಾರಕ ದಾಳಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್‌ರ ಅಮೋಘ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನವೇ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್ ಕೇವಲ 162 ರನ್‌ಗೆ ಆಲೌಟಾಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿರುವ ಭಾರತ ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿದ್ದು, ಇನ್ನು ಕೇವಲ 41 ರನ್ ಹಿನ್ನಡೆಯಲ್ಲಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಸಾಧಿಸಿ, ಸುಲಭದಲ್ಲಿ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.
ಕುಸಿದ ವೆಸ್ಟ್‌ಇಂಡೀಸ್:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್‌ಗೆ ಯಾವ ಕ್ಷಣದಲ್ಲೂ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಮೊದಲ ಅವಧಿಯಲ್ಲೇ 5 ವಿಕೆಟ್ ಕಳೆದುಕೊಂಡ ವಿಂಡೀಸ್, ಬಳಿಕ ಚೇತರಿಸಿಕೊಳ್ಳಲಿಲ್ಲ. ತಂಡದ ಇನ್ನಿಂಗ್ಸ್ 44.1 ಓವರ್‌ಗಳಲ್ಲಿ ಕೊನೆಗೊಂಡಿತು. ಆರಂಭಿಕ ಐವರು ಬ್ಯಾಟರ್‌ಗಳ ಪೈಕಿ ನಾಲ್ವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಅಟ್ಟಿದರು. ತೇಜ್‌ನರೈನ್ ಚಂದ್ರಪಾಲ್(0), ಅಲಿಕ್ ಅಥನಾಜ್(12), ಬ್ರೆಂಡಾನ್ ಕಿಂಗ್(13), ನಾಯಕ ರಾಸ್ಟನ್ ಚೇಸ್(24) ಸಿರಾಜ್‌ಗೆ ಬಲಿಯಾದರು. ಮತ್ತೊಂದೆಡೆ ಬೂಮ್ರಾ ಕೂಡಾ ಅತ್ಯಮೋಘ ದಾಳಿ ನಡೆಸಿ 3 ವಿಕೆಟ್ ಪಡೆದರು. ಜಸ್ಟಿನ್ ಗ್ರೀವ್ಸ್(32) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರೆ, ಶಾಯ್ ಹೋಪ್ 26 ರನ್ ಸಿಡಿಸಿದರು. ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಉತ್ತಮ ಆರಂಭ:
ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ 68 ರನ್ ಸೇರಿಸಿದರು. ನಿಧಾನ ಆರಂಭದ ಬಳಿಕ ಬೌಂಡರಿಗಳ ಮೂಲಕವೇ ರನ್ ಕಲೆಹಾಕಲು ನಿಂತ ಜೈಸ್ವಾಲ್ 36 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ಸಾಯಿ ಸುದರ್ಶನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅವರ ಇನ್ನಿಂಗ್ಸ್ 7 ರನ್‌ಗೆ ಕೊನೆಗೊಂಡಿತು. ಆದರೆ ಕೊನೆ ಅವಧಿ ಪೂರ್ತಿ ಕ್ರೀಸ್ ಕಚ್ಚಿನಿಂತ ರಾಹುಲ್, ಆಕರ್ಷಕ ಅರ್ಧಶತಕ ಬಾರಿಸಿದರು. ಅವರು 114 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 53 ರನ್ ಗಳಿಸಿದ್ದು, ನಾಯಕ ಶುಭ್‌ಮನ್ ಗಿಲ್(ಔಟಾಗದೆ 18) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್: ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 162/10(ಗ್ರೀವ್ಸ್ 32, ಹೋಪ್ 26, ಸಿರಾಜ್ 4-40, ಬೂಮ್ರಾ 3-42, ಕುಲ್ದೀಪ್ 2-25), ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 121/2(ಮೊದಲ ದಿನದಂತ್ಯಕ್ಕೆ) (ರಾಹುಲ್ ಔಟಾಗದೆ 53, ಜೈಸ್ವಾಲ್ 36, ಚೇಸ್ 1-16)
-
ವೇಗದ 50 ವಿಕೆಟ್:ಬೂಮ್ರಾ ದಾಖಲೆ
ಭಾರತದಲ್ಲಿ ಅತಿ ವೇಗವಾಗಿ(ಎಸೆತಗಳ ಆಧಾರದಲ್ಲಿ) 50 ವಿಕೆಟ್ ಪೂರೈಸಿದ ಬೌಲರ್ ಎಂಬ ದಾಖಲೆಯನ್ನು ಬೂಮ್ರಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು 1747 ಎಸೆತಗಳಲ್ಲೇ ಈ ಮೈಲುಗಲ್ಲು ತಲುಪಿದ್ದಾರೆ. ಇನ್ನಿಂಗ್ಸ್ ಆಧಾರದಲ್ಲಿ ಅತಿವೇಗದ 50 ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಬೂಮ್ರಾ ಅವರು ಜಾವಗಲ್ ಶ್ರೀನಾಥ್ ದಾಖಲೆ ಸರಿಗಟ್ಟಿದ್ದಾರೆ. ಇವರಿಬ್ಬರೂ 24 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
12 ಫಿಫ್ಟಿ
ಕೆ.ಎಲ್.ರಾಹುಲ್ ತವರಿನ ಟೆಸ್ಟ್‌ನಲ್ಲಿ 12ನೇ ಬಾರಿ ಅರ್ಧಶತಕ ಬಾರಿಸಿದರು. ಈ ಹಿಂದಿನ 11ರ ಪೈಕಿ ಒಮ್ಮೆ ಮಾತ್ರ ಅವರು ಮೂರಂಕಿ ಮೊತ್ತ ದಾಟಿದ್ದಾರೆ.
02 ಬಾರಿ
ಸಿರಾಜ್ ತವರಿನಲ್ಲಿ 2ನೇ ಬಾರಿ 4 ವಿಕೆಟ್ ಪಡೆದರು. 2024ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 84 ರನ್‌ಗೆ 4 ವಿಕೆಟ್ ಕಬಳಿಸಿದ್ದರು.
06 ಬಾರಿ
ಶುಭ್‌ಮನ್ ಗಿಲ್ ಸತತ 6ನೇ ಟೆಸ್ಟ್‌ನಲ್ಲೂ ಟಾಸ್ ಸೋತಿದ್ದಾರೆ. ನ್ಯೂಜಿಲೆಂಡ್‌ನ ಬೆವನ್ ಕಾಂಗ್ಡನ್ ಆರಂಭಿಕ 7 ಟೆಸ್ಟ್‌ಗಳಲ್ಲೂ ಟಾಸ್ ಸೋತಿದ್ದು ದಾಖಲೆ.
ಕ್ರೀಡಾಂಗಣ ಖಾಲಿ ಖಾಲಿ
ಮೊದಲ ಟೆಸ್ಟ್‌ನ ಮೊದಲ ದಿನ ಅಹಮದಾಬಾದ್ ಕ್ರೀಡಾಂಗಣಕ್ಕೆ ಹೆಚ್ಚಿನ ಪ್ರೇಕ್ಷಕರು ಆಗಮಿಸಲಿಲ್ಲ. 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೆಲವೇ ಸಾವಿರ ಪ್ರೇಕ್ಷಕರು ಉಪಸ್ಥಿತರಿದ್ದರು. ಕ್ರೀಡಾಂಗಣ ಖಾಲಿಯಾಗಿರುವ ಫೋಟೋಗಳನ್ನು ಹಲವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಬಿಸಿಸಿಐ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್ ಮುಗಿದ ಕೆಲ ದಿನಗಳಲ್ಲೇ, ಅದು ಕೂಡಾ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.