ಕರ್ನಾಟಕ vs ವಿದರ್ಭ ಕ್ವಾರ್ಟರ್‌ ಕದನ

KannadaprabhaNewsNetwork | Published : Feb 23, 2024 1:47 AM

ಸಾರಾಂಶ

ಒಂದೂವರೆ ತಿಂಗಳು ಗುಂಪು ಹಂತದ ಸೆಣಸಾಟದ ಬಳಿಕ 8 ತಂಡಗಳು ರಣಜಿ ಟ್ರೋಫಿ ನಾಕೌಟ್‌ ಹಂತ ಪ್ರವೇಶಿಸಿದ್ದು, ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿವೆ.

ನಾಗ್ಪುರ: ಒಂದೂವರೆ ತಿಂಗಳು ಗುಂಪು ಹಂತದ ಸೆಣಸಾಟದ ಬಳಿಕ 8 ತಂಡಗಳು ರಣಜಿ ಟ್ರೋಫಿ ನಾಕೌಟ್‌ ಹಂತ ಪ್ರವೇಶಿಸಿದ್ದು, ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿವೆ.

41 ಬಾರಿ ಚಾಂಪಿಯನ್‌ ಮುಂಬೈ, 8 ಬಾರಿ ಚಾಂಪಿಯನ್‌ ಕರ್ನಾಟಕ, ತಲಾ 5 ಬಾರಿ ಚಾಂಪಿಯನ್‌ ಬರೋಡಾ, ಮಧ್ಯಪ್ರದೇಶ, ತಲಾ 2 ಬಾರಿ ಚಾಂಪಿಯನ್‌ ತಮಿಳುನಾಡು, ವಿದರ್ಭ, ಸೌರಾಷ್ಟ್ರ ಹಾಗೂ ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಆಂಧ್ರ ತಂಡಗಳು ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿವೆ.ಕರ್ನಾಟಕಕ್ಕೆ ವಿದರ್ಭ ಸವಾಲು ಎದುರಾಗಲಿದ್ದು, ನಾಗ್ಪುರದ ವಿಸಿಎ ಕ್ರಿಕೆಟ್‌ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಗುಂಪು ಹಂತದಲ್ಲಿ 5 ಗೆಲುವು ಸಾಧಿಸಿದ ವಿದರ್ಭ ತಂಡ ಬಲಿಷ್ಠವಾಗಿದ್ದು, ತವರಿನ ಲಾಭವೂ ಸಿಗಲಿದೆ. ನಾಯಕ ಅಕ್ಷಯ್‌ ವಾಡ್ಕರ್‌, ಧೃವ್ ಶೋರೆ ಹಾಗೂ ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿದ್ದಾರೆ. ಆದಿತ್ಯ ಸರ್ವಟೆ ಹಾಗೂ ಆದಿತ್ಯ ಥಾಕರೆ ತಲಾ 30 ವಿಕೆಟ್‌ ಕಬಳಿಸಿದ್ದು, ತಂಡದ ಪ್ರಮುಖ ಬೌಲಿಂಗ್‌ ಅಸ್ತ್ರಗಳಾಗಿ ದಾಳಿಗಿಳಿಯಲಿದ್ದಾರೆ.ಇನ್ನು ಕರ್ನಾಟಕಕ್ಕೆ ದೇವದತ್‌ ಪಡಿಕ್ಕಲ್‌ ಅನುಪಸ್ಥಿತಿ ಎದುರಾಗಲಿದೆ. 4 ಪಂದ್ಯಗಳಲ್ಲಿ 556 ರನ್‌ ಗಳಿಸಿದ ಪಡಿಕ್ಕಲ್‌, ಭಾರತ ತಂಡದೊಂದಿಗಿದ್ದಾರೆ. ಮನೀಶ್‌ ಪಾಂಡೆ (464 ರನ್‌) ಹಾಗೂ ಶರತ್‌ ಶ್ರೀನಿವಾಸ್‌ (429 ರನ್‌) ತಂಡದ ಭರವಸೆ ಎನಿಸಿದ್ದು, ನಾಯಕ ಮಯಾಂಕ್‌ ಅಗರ್‌ವಾಲ್‌ ಹಾಗೂ ಅನುಭವಿ ಆರ್‌.ಸಮರ್ಥ್‌ರಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಾಗುತ್ತಿದೆ. ವೇಗಿ ವೈಶಾಖ್‌ ವಿಜಯ್‌ಕುಮಾರ್‌ ಈ ಋತುವಿನಲ್ಲಿ ಬ್ಯಾಟಿಂಗ್‌ನಲ್ಲೂ ಅಬ್ಬರಿಸುತ್ತಿದ್ದು, ಕಳೆದ ಪಂದ್ಯದಲ್ಲಿ ಬಾರಿಸಿದ ಶತಕ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ. ಯುವ ಆಲ್ರೌಂಡರ್‌ ಹಾರ್ದಿಕ್‌ ರಾಜ್‌ ಸಹ ತಂಡದ ಭರವಸೆಯ ಆಟಗಾರ ಎನಿಸಿದ್ದಾರೆ.ಬರೋಡಾ ಹಾಗೂ ಮುಂಬೈ, ಸೌರಾಷ್ಟ್ರ ಹಾಗೂ ತಮಿಳುನಾಡು, ಮಧ್ಯಪ್ರದೇಶ ಹಾಗೂ ಆಂಧ್ರ ಇನ್ನುಳಿದ 3 ಕ್ವಾರ್ಟರ್‌ ಫೈನಲ್‌ಗಳಲ್ಲಿ ಮುಖಾಮುಖಿಯಾಗಲಿವೆ.ಕರ್ನಾಟಕ-ವಿದರ್ಭ ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಜಿಯೋ ಸಿನಿಮಾ

Share this article