ರಣಜಿ ಸೆಮಿ ಫೈನಲ್‌: ಮುಂಬೈ, ಮಧ್ಯಪ್ರದೇಶ ಮೇಲುಗೈ

KannadaprabhaNewsNetwork | Updated : Mar 03 2024, 08:46 AM IST

ಸಾರಾಂಶ

ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಂಬೈ ವಿರುದ್ಧ ತಮಿಳುನಾಡು 146ಕ್ಕೆ ಆಲೌಟ್‌ ಆದರೆ, ಮಧ್ಯಪ್ರದೇಶ ವಿರುದ್ಧ ಮತ್ತೊಂದು ಸೆಮೀಸ್‌ನಲ್ಲಿ ವಿದರ್ಭ ತಂಡ 170ಕ್ಕೆ ಆಲೌಟ್‌ ಆಗಿದೆ.

ಮುಂಬೈ/ನಾಗ್ಪುರ: ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಮುಂಬೈ, ವಿದರ್ಭ ವಿರುದ್ಧ ಮಧ್ಯಪ್ರದೇಶ ತಂಡಗಳು ಮೇಲುಗೈ ಸಾಧಿಸಿವೆ. 

ಮೊದಲ ದಿನವೇ ಎದುರಾಳಿ ಪಡೆಯನ್ನು ಆಲೌಟ್‌ ಮಾಡಿದ ಮುಂಬೈ ಹಾಗೂ ಮಧ್ಯಪ್ರದೇಶ, ಮೊದಲ ಇನ್ನಿಂಗ್ಸ್‌ ಆರಂಭಿಸಿದ್ದು ದೊಡ್ಡ ಮುನ್ನಡೆ ಪಡೆಯುವ ನಿರೀಕ್ಷೆ ಹೊಂದಿವೆ.

ತ.ನಾಡು ತತ್ತರ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಇಳಿದ ತಮಿಳುನಾಡು, ಮುಂಬೈನ ಮೊನಚಾದ ಬೌಲಿಂಗ್‌ ದಾಳಿ ಎದುರು ತತ್ತರಿಸಿತು. 

ಸಾಯಿ ಸುದರ್ಶನ್‌ (0), ಎನ್‌.ಜಗದೀಶನ್‌ (4), ಸಾಯಿ ಕಿಶೋರ್‌ (1), ಬಾಬಾ ಇಂದ್ರಜಿತ್‌ (11) ವೈಫಲ್ಯದಿಂದಾಗಿ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. 

ವಿಜಯ್‌ ಶಂಕರ್‌ (44), ವಾಷಿಂಗ್ಟನ್‌ ಸುಂದರ್‌ (43)ರ ಹೋರಾಟ ತಂಡ 100 ರನ್‌ ದಾಟಲು ಕಾರಣವಾಯಿತು. 64.1 ಓವರಲ್ಲಿ ತಮಿಳುನಾಡು 146 ರನ್‌ಗೆ ಆಲೌಟ್‌ ಆಯಿತು. 

ತುಷಾರ್‌ 3, ತನುಷ್‌, ಮುಶೀರ್‌ ಹಾಗೂ ಶಾರ್ದೂಲ್‌ ತಲಾ 2 ವಿಕೆಟ್‌ ಕಿತ್ತರು.ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಮುಂಬೈ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 45 ರನ್‌ ಗಳಿಸಿದ್ದು, ಇನ್ನೂ 101 ರನ್‌ ಹಿಂದಿದೆ.

ಆವೇಶ್‌ ಮಾರಕ ದಾಳಿ: ವೇಗಿ ಆವೇಶ್‌ ಖಾನ್‌ರ ಮಾರಕ ದಾಳಿಗೆ ಸಿಲುಕಿದ ವಿದರ್ಭ 170 ರನ್‌ಗೆ ಆಲೌಟ್‌ ಆಯಿತು. ಕರುಣ್‌ ನಾಯರ್‌ 63, ಅಥರ್ವ ತೈಡೆ 39 ರನ್‌ ಗಳಿಸಿದರು. 

ಆವೇಶ್‌ 49 ರನ್‌ಗೆ 4 ವಿಕೆಟ್‌ ಕಬಳಿಸಿದರೆ, ವೆಂಕಟೇಶ್‌ ಅಯ್ಯರ್‌ ಹಾಗೂ ಕುಲ್ವಂತ್‌ ಕೇಜ್ರೋಲಿಯಾ ತಲಾ 2 ವಿಕೆಟ್‌ ಕಿತ್ತರು. 

ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಮಧ್ಯಪ್ರದೇಶ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 47 ರನ್‌ ಗಳಿಸಿದೆ.

Share this article