ರಣಜಿ ಟ್ರೋಫಿ: ತ್ರಿಪುರಾ ವಿರುದ್ಧ ಗೆದ್ದ ರಾಜ್ಯ

KannadaprabhaNewsNetwork | Published : Jan 30, 2024 2:01 AM

ಸಾರಾಂಶ

ಈ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ 2ನೇ ಜಯ ದಾಖಲಿಸಿದೆ. ತ್ರಿಪುರಾ ವಿರುದ್ಧ ನಡೆದ ಪಂದ್ಯದಲ್ಲಿ 29 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಅಗರ್ತಾಲಾ: ಈ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ 2ನೇ ಜಯ ದಾಖಲಿಸಿದೆ. ತ್ರಿಪುರಾ ವಿರುದ್ಧ ನಡೆದ ಪಂದ್ಯದಲ್ಲಿ 29 ರನ್‌ಗಳ ರೋಚಕ ಗೆಲುವು ಸಾಧಿಸಿದ ಕರ್ನಾಟಕ, 4 ಪಂದ್ಯಗಳಲ್ಲಿ 2ನೇ ಜಯ ಕಂಡು ಎಲೈಟ್‌ ‘ಸಿ’ ಗುಂಪಿನಲ್ಲಿ 2ನೇ ಸ್ಥಾನಕ್ಕೇರಿದೆ.

ಗೆಲ್ಲಲು 193 ರನ್‌ ಗುರಿ ಬೆನ್ನತ್ತಿದ್ದ ತ್ರಿಪುರಾ, 2ನೇ ಇನ್ನಿಂಗ್ಸಲ್ಲಿ 163 ರನ್‌ಗೆ ಆಲೌಟ್‌ ಆಯಿತು. ಪಂದ್ಯದ ಅಂತಿಮ ದಿನವಾದ ಸೋಮವಾರವನ್ನು 3 ವಿಕೆಟ್‌ಗೆ 59 ರನ್‌ಗಳಿಂದ ಆರಂಭಿಸಿದ ತ್ರಿಪುರಾ, ಕರ್ನಾಟಕ ಮೂಲದ ಗಣೇಶ್‌ ಸತೀಶ್‌ (22)ರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ನಾಯಕ ವೃದ್ಧಿಮಾನ್‌ ಸಾಹ(0) ಖಾತೆ ತೆರೆಯದೆ ಔಟಾದ ಬಳಿಕ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಹೊಣೆ ಅನುಭವಿ ಸುದೀಪ್‌ ಚಟ್ಟರ್ಜಿ ಹೆಗಲಿಗೆ ಬಿತ್ತು. ಸುದೀಪ್‌ಗೆ ಕೆಳ ಕ್ರಮಾಂಕದಿಂದ ಸೂಕ್ತ ಬೆಂಬಲ ಸಿಗದ ಕಾರಣ, ತ್ರಿಪುರಾ ಸೋಲುಂಡಿತು. 144 ಎಸೆತಗಳಲ್ಲಿ 82 ರನ್‌ ಗಳಿಸಿದ ಸುದೀಪ್‌, ರನೌಟ್‌ ಆಗುವ ಮೂಲಕ ತ್ರಿಪುರಾ ಇನ್ನಿಂಗ್ಸ್‌ಗೆ ತೆರೆ ಬಿತ್ತು.

ರಾಜ್ಯದ ವೇಗಿಗಳು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಭಾರತ ‘ಎ’ ತಂಡದ ಪರ ಆಡಿ ರಾಜ್ಯ ತಂಡಕ್ಕೆ ವಾಪಸಾದ ವಿದ್ವತ್‌ ಕಾವೇರಪ್ಪ 4 ವಿಕೆಟ್‌ ಕಬಳಿಸಿದರೆ, ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ನಿಂದಲೂ ತಂಡಕ್ಕೆ ನೆರವಾದ ವೈಶಾಖ್‌ ವಿಜಯ್‌ಕುಮಾರ್‌ 3 ವಿಕೆಟ್‌ ಕಿತ್ತರು. ವಾಸುಕಿ ಕೌಶಿಕ್‌ಗೆ ಒಂದು ವಿಕೆಟ್‌ ಸಿಕ್ಕಿತು. ರಾಜ್ಯ ತಂಡ ತನ್ನ ಮುಂದಿನ ಪಂದ್ಯವನ್ನು ಫೆ.2ರಿಂದ ಸೂರತ್‌ನಲ್ಲಿ ರೈಲ್ವೇಸ್‌ ವಿರುದ್ಧ ಆಡಲಿದೆ.

ಸ್ಕೋರ್‌: ಕರ್ನಾಟಕ 241 ಹಾಗೂ 151, ತ್ರಿಪುರಾ 200 ಹಾಗೂ 163/10 (ಸುದೀಪ್‌ 82, ಗಣೇಶ್‌ 22, ವಿದ್ವತ್‌ 4-44, ವೈಶಾಖ್‌ 3-62)

Share this article