ರಣಜಿ ಟ್ರೋಫಿ ಸೆಮಿಫೈನಲ್‌: ಜಯಕ್ಕಾಗಿ ವಿದರ್ಭ-ಮಧ್ಯ ಪ್ರದೇಶ ಹೋರಾಟ

KannadaprabhaNewsNetwork |  
Published : Mar 06, 2024, 02:23 AM ISTUpdated : Mar 06, 2024, 08:43 AM IST
ರಣಜಿ ಟ್ರೋಫಿ ಸೆಮಿಫೈನಲ್‌ | Kannada Prabha

ಸಾರಾಂಶ

ಮಧ್ಯಪ್ರದೇಶ ಹಾಗೂ ವಿದರ್ಭ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಭಾರಿ ರೋಚಕತೆಯಿಂದ ಕೂಡಿದ್ದು, ಕೊನೆಯ ದಿನದ ಥ್ರಿಲ್ಲರ್‌ ಬಾಕಿ ಇದೆ.

ನಾಗ್ಪುರ: ಮಧ್ಯಪ್ರದೇಶ ಹಾಗೂ ವಿದರ್ಭ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಭಾರಿ ರೋಚಕತೆಯಿಂದ ಕೂಡಿದ್ದು, ಕೊನೆಯ ದಿನದ ಥ್ರಿಲ್ಲರ್‌ ಬಾಕಿ ಇದೆ. 

ಮಧ್ಯಪ್ರದೇಶಕ್ಕೆ ಗೆಲ್ಲಲು 321 ರನ್‌ಗಳ ಗುರಿ ನೀಡಿರುವ ವಿದರ್ಭ, 4ನೇ ದಿನದಾಟದ ಕೊನೆಯಲ್ಲಿ ಯಶ್ ದುಬೆ (94) ವಿಕೆಟ್‌ ಕಬಳಿಸಿ, ಗೆಲುವಿನ ನಿರೀಕ್ಷೆಯಲ್ಲಿದ್ದರೆ ಅಂತಿಮ ದಿನ ಹೋರಾಟ ನಡೆಸಿ ಬೇಕಿರುವ 93 ರನ್‌ ಕಲೆಹಾಕಿ ಫೈನಲ್‌ಗೇರಲು ಮಧ್ಯಪ್ರದೇಶ ಎದುರು ನೋಡುತ್ತಿದೆ.

3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 343 ರನ್‌ ಗಳಿಸಿದ್ದ ವಿದರ್ಭ, 4ನೇ ದಿನ ಆ ಮೊತ್ತಕ್ಕೆ 59 ರನ್‌ ಸೇರಿಸಲಷ್ಟೇ ಶಕ್ತವಾಯಿತು. 97 ರನ್‌ ಗಳಿಸಿ ಔಟಾಗದೆ ಉಳಿದಿದ್ದ ಯಶ್‌ ರಾಥೋಡ್‌ 141 ರನ್‌ ಗಳಿಸಿ ತಂಡ, 400 ರನ್‌ ದಾಟಲು ನೆರವಾದರು. ಮ.ಪ್ರದೇಶದ ಅನುಭವ್‌ ಅಗರ್‌ವಾಲ್‌ 5 ವಿಕೆಟ್‌ ಕಿತ್ತರು.

ಗೆಲ್ಲಲು ದೊಡ್ಡ ಗುರಿ ಬೆನ್ನತ್ತಲು ಇಳಿದ ಮಧ್ಯಪ್ರದೇಶ ಆರಂಭದಲ್ಲೇ ಪ್ರಮುಖ ಬ್ಯಾಟರ್‌ ಹಿಮಾನ್ಶು ಮಂತ್ರಿ (08) ಅವರ ವಿಕೆಟ್‌ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ಯಶ್‌ ದುಬೆ ಹಾಗೂ ಹರ್ಷ್‌ ಗಾವ್ಲಿ ಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.

ಹರ್ಷ್‌ 67 ರನ್‌ ಗಳಿಸಿ ಔಟಾದ ಬಳಿಕ, ಸಾಗರ್‌ ಸೋಲಂಕಿ (12), ನಾಯಕ ಶುಭಂ ಶರ್ಮಾ (06), ವೆಂಕಟೇಶ್‌ ಅಯ್ಯರ್‌ (19) ಸಹ ಬೇಗನೆ ವಿಕೆಟ್‌ ಕಳೆದುಕೊಂಡರು. 

ಆದರೆ ಶತಕದತ್ತ ಹೆಜ್ಜೆ ಹಾಕುತ್ತಿದ್ದ ಆರಂಭಿಕ ಬ್ಯಾಟರ್‌ ಯಶ್‌ ದುಬೆ (94 ರನ್‌, 212 ಎಸೆತ, 10 ಬೌಂಡರಿ) ದಿನದಾಟದ ಮುಕ್ತಾಯಕ್ಕೆ ಕೇವಲ 1 ಓವರ್‌ ಬಾಕಿ ಇದ್ದಾಗ ಔಟಾಗಿದ್ದು, ಮಧ್ಯಪ್ರದೇಶಕ್ಕೆ ಭಾರಿ ಹಿನ್ನಡೆ ಉಂಟು ಮಾಡಿತು.

ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ 41 ಬಾರಿಯ ಚಾಂಪಿಯನ್‌ ಮುಂಬೈ ತಂಡವನ್ನು ಎದುರಿಸಲಿದೆ.

ಸ್ಕೋರ್‌: ವಿದರ್ಭ 170 ಹಾಗೂ 402 (ಯಶ್‌ ರಾಥೋಡ್‌ 141, ಅಕ್ಷಯ್‌ 77, ಅನುಭವ್‌ 5-92), ಮ.ಪ್ರದೇಶ 252 ಹಾಗೂ 228/6 (ಯಶ್‌ ದುಬೆ 94, ಹರ್ಷ್‌ 67, ಅಕ್ಷಯ್‌ ವಾಖರೆ 3-38)

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌