17ನೇ ಐಪಿಎಲ್‌: ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲಿನ ಶಾಕ್‌!

KannadaprabhaNewsNetwork |  
Published : Apr 11, 2024, 12:49 AM ISTUpdated : Apr 11, 2024, 04:09 AM IST
ಸ್ಫೋಟಕ ಜೊತೆಯಾಟವಾಡಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಗೆಲ್ಲಿಸಿದ ರಾಹುಲ್‌ ತೆವಾಟಿಯಾ ಹಾಗೂ ರಶೀದ್‌ ಖಾನ್‌.  | Kannada Prabha

ಸಾರಾಂಶ

17ನೇ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲುಣಿಸಿದ ಗುಜರಾತ್‌ ಟೈಟಾನ್ಸ್‌. ರಶೀದ್‌ ಖಾನ್‌ ಆಲ್ರೌಂಡ್‌ ಶೋಗೆ ತಲೆಬಾಗಿದ ಸಂಜು ಸ್ಯಾಮ್ಸನ್‌ ಪಡೆ. 3 ವಿಕೆಟ್‌ ಜಯದೊಂದಿಗೆ ಹ್ಯಾಟ್ರಿಕ್‌ ಸೋಲಿನಿಂದ ಪಾರಾದ ಶುಭ್‌ಮನ್‌ ಗಿಲ್‌ ನಾಯಕತ್ವದ ತಂಡ.

ಜೈಪುರ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಮೊದಲ ಸೋಲು ಕಂಡಿದೆ. ಸತತ 4 ಗೆಲುವು ಸಾಧಿಸಿದ್ದ ಸಂಜು ಸ್ಯಾಮ್ಸನ್‌ ಪಡೆಗೆ ಗುಜರಾತ್‌ ಟೈಟಾನ್ಸ್‌ ವಿರುದ್ಧ ಬುಧವಾರ 3 ವಿಕೆಟ್‌ ಸೋಲು ಎದುರಾಯಿತು. ಪಂದ್ಯದ ಎರಡೂ ಇನ್ನಿಂಗ್ಸ್‌ಗಳು ಆಕರ್ಷಕ ಜೊತೆಯಾಟಗಳಿಗೆ ಸಾಕ್ಷಿಯಾದವು. ಮೊದಲು 42ಕ್ಕೆ 2ರಿಂದ ಚೇತರಿಸಿಕೊಂಡ ರಾಜಸ್ಥಾನ, ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ರ ಶತಕದ ಜೊತೆಯಾಟದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 196 ರನ್‌ ಕಲೆಹಾಕಿತು.

ದೊಡ್ಡ ಮೊತ್ತ ಬೆನ್ನತ್ತಿದ ಗುಜರಾತ್‌, 18ನೇ ಓವರಲ್ಲಿ 157ಕ್ಕೆ 6 ವಿಕೆಟ್‌ ಕಳೆದುಕೊಂಡಿತ್ತು. ಗೆಲ್ಲಲು 15 ಎಸೆತದಲ್ಲಿ 30 ರನ್‌ಗಳ ಅವಶ್ಯಕತೆ ಇದ್ದಾಗ, ರಾಹುಲ್‌ ತೆವಾಟಿಯಾ(11 ಎಸೆತದಲ್ಲಿ 22 ರನ್‌) ಹಾಗೂ ರಶೀದ್‌ ಖಾನ್‌ 7ನೇ ವಿಕೆಟ್‌ಗೆ 2.2 ಓವರಲ್ಲಿ 28 ರನ್‌ ಸೇರಿಸಿ ತಂಡವನ್ನು ಜಯದ ಹೊಸ್ತಿಲಿಗೆ ತಂದರು. ಕೊನೆಯ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಬೌಂಡರಿ ಬಾರಿಸಿದ ರಶೀದ್( (11 ಎಸೆತದಲ್ಲಿ 24 ರನ್‌), ಟೈಟಾನ್ಸ್‌ ಪಡೆಯನ್ನು ಹ್ಯಾಟ್ರಿಕ್‌ ಸೋಲಿನಿಂದ ಪಾರು ಮಾಡಿದರು. ನಾಯಕ ಶುಭ್‌ಮನ್‌ ಗಿಲ್‌ 44 ಎಸೆತದಲ್ಲಿ 72 ರನ್‌ ಸಿಡಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್‌ 38 ಎಸೆತದಲ್ಲಿ 68 ರನ್‌ ಚಚ್ಚಿ ಔಟಾಗದೆ ಉಳಿದರೆ, ರಿಯಾನ್‌ ಪರಾಗ್‌ 48 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 76 ರನ್‌ ಸಿಡಿಸಿ, ಟೂರ್ನಿಯಲ್ಲಿ 3ನೇ ಅರ್ಧಶತಕ ದಾಖಲಿಸಿದರು.ಸ್ಕೋರ್‌: ರಾಜಸ್ಥಾನ 20 ಓವರಲ್ಲಿ 196/3 (ರಿಯಾನ್‌ 76, ಸ್ಯಾಮ್ಸನ್‌ 68, ರಶೀದ್‌ 1-18), ಗುಜರಾತ್‌ 20 ಓವರಲ್ಲಿ 199/7 (ಗಿಲ್‌ 72, ಸುದರ್ಶನ್‌ 35, ರಶೀದ್‌ 24*, ಕುಲ್ದೀಪ್‌ ಸೇನ್‌ 3-41)

PREV

Recommended Stories

ಅದ್ದೂರಿಯಾಗಿ ಡಾ. ವಿಷ್ಣುವರ್ಧನ್‌ 75ನೇ ಹುಟ್ಟುಹಬ್ಬ ಆಚರಣೆ
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಇಂದು ಒಮಾನ್‌ ವಿರುದ್ಧ ‘ಅಭ್ಯಾಸ’