ಆಕ್ಲಂಡ್(ನ್ಯೂಜಿಲೆಂಡ್): ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ನ್ಯೂಜಿಲೆಂಡ್ ತಂಡ ಜೂ.1ರಿಂದ ಆರಂಭಗೊಳ್ಳಲಿರುವ ಈ ಬಾರಿಯ ಟೂರ್ನಿಗೆ ಸೋಮವಾರ 15 ಆಟಗಾರರ ತಂಡವನ್ನು ಪ್ರಕಟಿಸಿದೆ.
6ನೇ ಬಾರಿ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಕೇನ್ ವಿಲಿಯಮ್ಸನ್ ತಂಡದ ನಾಯಕತ್ವ ವಹಿಸಲಿದ್ದಾರೆ. ಟಿಮ್ ಸೌಥಿ 7ನೇ ಬಾರಿ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದು, ರಚಿನ್ ರವೀಂದ್ರ, ಟ್ರೆಂಟ್ ಬೌಲ್ಟ್ ಕೂಡಾ ತಂಡದಲ್ಲಿದ್ದಾರೆ.
ತಂಡ: ವಿಲಿಯಮ್ಸನ್(ನಾಯಕ), ಫಿನ್ ಆ್ಯಲೆನ್, ಬೌಲ್ಟ್, ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೋನ್ ಕಾನ್‌ವೇ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ. ಮೀಸಲು ಆಟಗಾರ: ಬೆನ್ ಸೀರ್ಸ್.
ಮಕ್ಕಳಿಂದ ತಂಡ ಪ್ರಕಟ: ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇಬ್ಬರು ಮಕ್ಕಳಿಂದ ತಂಡವನ್ನು ಪ್ರಕಟಿಸಿತು. ಇಬ್ಬರೂ ಸುದ್ದಿಗೋಷ್ಠಿಗೆ ಆಗಮಿಸಿ ಆಟಗಾರರ ಹೆಸರನ್ನು ಘೋಷಿಸುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಕಳೆದ ಏಕದಿನ ವಿಶ್ವಕಪ್‌ಗೆ ಆಟಗಾರರ ಕುಟುಂಬಸ್ಥರಿಂದ ಕಿವೀಸ್ ತಂಡವನ್ನು ಪ್ರಕಟಿಸಲಾಗಿತ್ತು. ಇನ್ನು, ಈ ಬಾರಿ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್‌ನ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗಿದೆ.