5 ಪಂದ್ಯ ಸೋತಿದ್ದ ಆರ್‌ಸಿಬಿಗೆ ಕೊನೆಗೂ ಸಿಕ್ತು ಜಯ: ಗೆಲುವಿನೊಂದಿಗೆ ಗುಡ್‌ಬೈ

KannadaprabhaNewsNetwork | Published : Mar 12, 2025 12:52 AM

ಸಾರಾಂಶ

ಡಬ್ಲ್ಯುಪಿಎಲ್‌. ಸತತ 5 ಪಂದ್ಯ ಸೋತಿದ್ದ ಆರ್‌ಸಿಬಿಗೆ ಕೊನೆಗೂ ಸಿಕ್ತು ಜಯ. ಮುಂಬೈ ವಿರುದ್ಧ 11 ರನ್‌ ಜಯಭೇರಿ. ಆರ್‌ಸಿಬಿ 3 ವಿಕೆಟ್‌ಗೆ 199 ಮುಂಬೈ 9 ವಿಕೆಟ್‌ಗೆ 188 ರನ್‌.

ಮುಂಬೈ: ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್‌ ಆರ್‌ಸಿಬಿ ಗೆಲುವಿನೊಂದಿಗೆ ಈ ಬಾರಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ಗೆ ವಿದಾಯ ಹೇಳಿದೆ. ಮಂಗಳವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ 11 ರನ್‌ ಗೆಲುವು ಸಾಧಿಸಿತು. ಆಡಿದ 8 ಪಂದ್ಯಗಳಲ್ಲಿ 3 ಜಯದೊಂದಿಗೆ 6 ಅಂಕ ಸಂಪಾದಿಸಿದ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು. 8ರಲ್ಲಿ 5 ಗೆಲುವಿನೊಂದಿಗೆ 2ನೇ ಸ್ಥಾನಿಯಾಗಿ ಪ್ಲೇ-ಆಫ್‌ ಪ್ರವೇಶಿಸಿತು.ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 3 ವಿಕೆಟ್‌ಗೆ 199 ರನ್‌ ಕಲೆಹಾಕಿತು. ಶಬ್ಬಿನೇನಿ ಮೇಘನಾ 13 ಎಸೆತಕ್ಕೆ 26 ರನ್‌ ಗಳಿಸಿ ಔಟಾದ ಬಳಿಕ, ಸ್ಮೃತಿ ಮಂಧನಾ ಹಾಗೂ ಎಲೈಸಿ ಪೆರ್ರಿ ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು. ಸ್ಮೃತಿ 37 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್‌ ಸಿಡಿಸಿದರೆ, ಪೆರ್ರಿ 38 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 49 ರನ್‌ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್‌ 22 ಎಸೆತಕ್ಕೆ 36, ಜಾರ್ಜಿಯಾ ವೇರ್‌ಹ್ಯಾಮ್‌ 10 ಎಸೆತಕ್ಕೆ ಔಟಾಗದೆ 31 ರನ್‌ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 20 ಓವರಲ್ಲಿ 9 ವಿಕೆಟ್‌ಗೆ 188 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಶೀವರ್‌ ಬ್ರಂಟ್‌ ಏಕಾಂಗಿ ಹೋರಾಟ ತಂಡಕ್ಕೆ ನೆರವಾಗಲಿಲ್ಲ. ಅವರು 35 ಎಸೆತಗಳಲ್ಲಿ 69 ರನ್‌ ಸಿಡಿಸಿದರು. ಸ್ನೇಹ ರಾಣಾ 3 ವಿಕೆಟ್‌ ಕಿತ್ತರು.

ಡೆಲ್ಲಿ ಸತತ 3ನೇ ಬಾರಿ ಫೈನಲ್‌ಗೆ

ಮುಂಬೈ ಸೋಲಿನೊಂದಿಗೆ ಡೆಲ್ಲಿ ತಂಡ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಯಿತು. ಈ ಮೂಲಕ ತಂಡ ನೇರವಾಗಿ ಫೈನಲ್‌ ಪ್ರವೇಶಿಸಿದೆ. ತಂಡಕ್ಕಿದು ಸತತ 3ನೇ ಫೈನಲ್‌. ಮೊದಲೆರಡು ಆವೃತ್ತಿಗಳಲ್ಲೂ ತಂಡ ಫೈನಲ್‌ಗೇರಿತ್ತು. ಆದರೆ ಕ್ರಮವಾಗಿ ಮುಂಬೈ ಹಾಗೂ ಆರ್‌ಸಿಬಿ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು.

ನಾಳೆ ಎಲಿಮಿನೇಟರ್‌: ಮುಂಬೈ vs ಗುಜರಾತ್‌

ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಮುಂಬೈ ಹಾಗೂ 3ನೇ ಸ್ಥಾನಿಯಾದ ಗುಜರಾತ್ ಜೈಂಟ್ಸ್‌ ನಡುವೆ ಗುರುವಾರ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್‌ಗೇರಿದೆ. ಮುಂಬೈ 2ನೇ ಬಾರಿ ಫೈನಲ್‌ಗೇರುವ ಕಾತರದಲ್ಲಿದೆ.

Share this article